ಢಾಕಾ: ಮೂರನೇ ಟಿ20 ಪಂದ್ಯವನ್ನೂ ಗೆದ್ದ ಪಾಕಿಸ್ತಾನ ಆತಿಥೇಯ ಬಾಂಗ್ಲಾದೇಶವನ್ನು 3-0 ಅಂತರದಿಂದ ಕ್ಲೀನ್ ಸ್ವೀಪ್ ಮಾಡಿದೆ.
ಮೊದಲು ಬ್ಯಾಟಿಂಗ್ ನಡೆಸಿದ ಬಾಂಗ್ಲಾದೇಶದಿಂದ ಗಳಿಸಲು ಸಾಧ್ಯವಾದದ್ದು 7 ವಿಕೆಟಿಗೆ 124 ರನ್ ಮಾತ್ರ. ಪಾಕಿಸ್ಥಾನ ಅಂತಿಮ ಎಸೆತದಲ್ಲಿ ಬೌಂಡರಿ ಬಾರಿಸಿ, 5 ವಿಕೆಟಿಗೆ 127 ರನ್ ಮಾಡಿ ವೈಟ್‌ವಾಶ್ ಪೂರ್ಣಗೊಳಿಸಿತು.
ನಾಟಕೀಯವಾಗಿ ಸಾಗಿದ ಕೊನೆಯ ಓವರ್‌ನಲ್ಲಿ ಪಾಕ್ ಜಯಕ್ಕೆ 8 ರನ್ ಅಗತ್ಯವಿತ್ತು. ಬೌಲರ್ ಮಹಮದುಲ್ಲ. ಮೊದಲನೆಯದು ಡಾಟ್ ಬಾಲ್. ಮುಂದಿನೆರಡು ಎಸೆತಗಳಲ್ಲಿ ಸರ್ಫರಾಜ್ ಅಹ್ಮದ್ ಮತ್ತು ಹೈದರ್ ಅಲಿ ಔಟ್. 4ನೇ ಎಸೆತವನ್ನು ಇಫ್ತಿಕಾರ್ ಅಹ್ಮದ್ ಸಿಕ್ಸರ್‌ಗೆ ರವಾನಿಸಿದರು. ಮುಂದಿನ ಎಸೆತದಲ್ಲಿ ಅವರೂ ಔಟ್. ಅಂತಿಮ ಎಸೆತವನ್ನು ಎದುರಿಸಿದ ಹೊಸ ಬ್ಯಾಟ್ಸ್‌ಮನ್ ಮೊಹಮ್ಮದ್ ನವಾಜ್ ಇದನ್ನು ಬೌಂಡರಿಗೆ ಬಡಿದಟ್ಟಿ ಪಾಕ್ ಜಯವನ್ನು ಸಾರಿದರು.
ಪಾಕಿಸ್ತಾನ ಪರ ಹೈದರ್ ಅಲಿ 45, ಮೊಹಮ್ಮದ್ ರಿಜ್ವಾನ್ 40, ಬಾಬರ್ ಆಜಂ 19 ರನ್ ಹೊಡೆದರು. ಬಾಂಗ್ಲಾ ಸರದಿಯಲ್ಲಿ ಆರಂಭಕಾರ ಮೊಹಮ್ಮದ್ ನೈಮ್ ಪಂದ್ಯದಲ್ಲೇ ಸರ್ವಾಧಿಕ 47 ರನ್ ಮಾಡಿದರು.
ಇದನ್ನೂ ಓದಿ:ಮಳೆ ಹಾನಿ ಪ್ರದೇಶವನ್ನು ಪರಿಶೀಲಿಸಿದ ಶಾಸಕ ಡಾ. ಜಿ ಪರಮೇಶ್ವರ್
ಸಂಕ್ಷಿಪ್ತ ಸ್ಕೋರ್: ಬಾಂಗ್ಲಾದೇಶ-7 ವಿಕೆಟಿಗೆ 124 (ನೈಮ್ 47, ಶಮಿಮ್ 22, ಮೊಹಮ್ಮದ್ ವಾಸಿಮ್ ಜೂ. 15ಕ್ಕೆ 2, ಉಸ್ಮಾನ್ ಖಾದಿರ್ 35ಕ್ಕೆ 2). ಪಾಕಿಸ್ತಾನ-20 ಓವರ್‌ಗಳಲ್ಲಿ 5 ವಿಕೆಟಿಗೆ 127 (ಹೈದರ್ ಅಲಿ 45, ರಿಜ್ವಾನ್ 40, ಮಹಮದುಲ್ಲ 10ಕ್ಕೆ 3).
ಪಂದ್ಯಶ್ರೇಷ್ಠ: ಹೈದರ್ ಅಲಿ.
ಸರಣಿಶ್ರೇಷ್ಠ: ಮೊಹಮ್ಮದ್ ರಿಜ್ವಾನ್.