Advertisement

ಪಾಕ್‌ಗೆ ಎಫ್ಎಟಿಎಫ್ ಚಾಟಿ

12:30 AM Feb 23, 2019 | |

ಹೊಸದಿಲ್ಲಿ: ಪುಲ್ವಾಮಾ ದಾಳಿಯ ಅನಂತರದಲ್ಲಿ ವಿಶ್ವದ ಕೆಂಗಣ್ಣಿಗೆ ಗುರಿಯಾಗಿರುವ ಪಾಕಿ ಸ್ಥಾನಕ್ಕೆ ಈಗ ಉಗ್ರ ಚಟುವಟಿಕೆ ಮೇಲೆ ನಿಗಾ ಇರಿಸುವ ಹಣಕಾಸು ವಿಚಕ್ಷಣ ಕಾರ್ಯಪಡೆ (ಎಫ್ಎಟಿಎಫ್) ಕೂಡ ಎಚ್ಚರಿಕೆ ನೀಡಿದೆ. ಎಫ್ಎಟಿಎಫ್ ಪಟ್ಟಿಯಿಂದ ಹೊರದಬ್ಬಲ್ಪಡುವುದರಿಂದ ಸ್ವಲ್ಪದರಲ್ಲಿ ತಪ್ಪಿಸಿಕೊಂಡಿರುವ ಪಾಕ್‌, ಅಕ್ಟೋಬರ್‌ವರೆಗೆ ಸಮಯ ಪಡೆದಿದೆ. ಆದರೆ ಉಗ್ರರು ಮತ್ತು ಉಗ್ರ ಸಂಘಟನೆಗಳ ವಿರುದ್ಧ ಕ್ರಮ ಕೈಗೊಳ್ಳು ವಂತೆ 29 ಟಾಸ್ಕ್ಗಳನ್ನು ಪಾಕಿಸ್ಥಾನಕ್ಕೆ ಎಫ್ಎಟಿಎಫ್ ನೀಡಿದ್ದು, ಅದನ್ನು ಈಡೇರಿಸದಿದ್ದಲ್ಲಿ ಅಕ್ಟೋಬರ್‌ನಲ್ಲಿ ಕಪ್ಪು ಪಟ್ಟಿಗೆ ಸೇರಿಸಲಾಗುತ್ತದೆ ಎಂಬ ಖಡಕ್‌ ಎಚ್ಚರಿಕೆಯನ್ನೂ ರವಾನಿಸಿದೆ.

Advertisement

ಪ್ಯಾರಿಸ್‌ನಲ್ಲಿ ಶುಕ್ರವಾರ ನಡೆದ ಎಫ್ಎಟಿಎಫ್ ಸಭೆಯಲ್ಲಿ, ಪುಲ್ವಾಮಾ ದಾಳಿಗೆ ಖಂಡನೆಯೂ ವ್ಯಕ್ತವಾಗಿದೆ. ಇಂತಹ ದೊಡ್ಡ ಮಟ್ಟದ ದಾಳಿಯು ಉಗ್ರರಿಗೆ ಹಣಕಾಸು ಪೂರೈಕೆ ಜಾಲ ವಿಲ್ಲದೆ ನಡೆಯುವುದಿಲ್ಲ. ಉಗ್ರ ಸಂಘಟನೆಗಳಿಗೆ ಹಣಕಾಸು ಪೂರೈಸುವುದರಿಂದ ಉಂಟಾಗುವ ಅಪಾಯ ವನ್ನು ಪಾಕಿಸ್ಥಾನ ಅರ್ಥ ಮಾಡಿಕೊಂಡಂತಿಲ್ಲ. ಈಗಾ ಗಲೇ ಪಾಕಿಸ್ಥಾನವು ನೀಡಿದ ಕಾರ್ಯ ಯೋಜನೆಯ ಅನುಷ್ಠಾನಕ್ಕೆ ಇನ್ನಷ್ಟು ಕಠಿನ ಪರಿಶ್ರಮ ವಹಿಸಬೇಕು ಎಂದು ಪಾಕ್‌ಗೆ ತಾಕೀತು ಮಾಡಲಾಗಿದೆ.

ಜೂನ್‌ನಲ್ಲಿ ನಡೆದ ಸಭೆಯಲ್ಲಿ ಪಾಕಿಸ್ಥಾನವನ್ನು “ಗ್ರೇ’ ಪಟ್ಟಿಗೆ ಸೇರಿಸ ಲಾಗಿತ್ತು. “ಗ್ರೇ’ ಲಿಸ್ಟ್‌ನಲ್ಲಿದ್ದರೆ ವಿದೇಶ ಗಳು ಮತ್ತು ಅಂತಾರಾಷ್ಟ್ರೀಯ ಸಂಸ್ಥೆ ಗಳಿಗೆ ಹಣಕಾಸು ಸೌಲಭ್ಯವನ್ನು ಪಡೆಯುವುದು ಸುಲಭವಲ್ಲ. ಹೀಗಾಗಿ “ಗ್ರೇ’ ಲಿಸ್ಟ್‌ನಿಂದ ಹೊರಬರಲು ಪಾಕಿ ಸ್ಥಾನ ಭಾರೀ ಯತ್ನ ನಡೆಸಿತ್ತು. ಎಫ್ಎಟಿಎಫ್ ಸಭೆಗೂ ಒಂದು ದಿನ ಮುಂಚಿತ ವಾಗಿ ಮುಂಬಯಿ ದಾಳಿ ಸಂಚುಕೋರ ಹಫೀಜ್‌ ಸಯೀದ್‌ನ ಉಗ್ರ ಸಂಘಟನೆ ಜಮಾತ್‌ ಉದ್‌ ದಾವಾ ಮತ್ತು ಆತನ ದತ್ತಿ ಸಂಸ್ಥೆಗೆ ನಿಷೇಧ ಹೇರಿತ್ತು.

ಎಫ್ಎಟಿಎಫ್ಗೆ ಪಾಕ್‌ ಕುಕೃತ್ಯದ ಸಾಕ್ಷ್ಯ
ಶುಕ್ರವಾರ ನಡೆದ ಎಫ್ಎಟಿಎಫ್ ಸಭೆಯಲ್ಲಿ ಪಾಕಿಸ್ಥಾನದ ವಿರುದ್ಧ ಭಾರತ ಟೀಕಾ ಪ್ರಹಾರವನ್ನೇ ನಡೆಸಿದೆ. ಉಗ್ರ ಸಂಘಟನೆಗಳ ವಿರುದ್ಧ ಯಾವ ಕ್ರಮ ಕೈಗೊಂಡಿದ್ದೀರಿ ಎಂಬುದನ್ನು ವಿಷದಪಡಿಸಿ ಎಂದು ಆಗ್ರಹಿಸಿದೆ. ಜತೆಗೆ ಪುಲ್ವಾಮಾ ದಾಳಿಯಲ್ಲಿ ಪಾಕಿಸ್ಥಾನ ಮೂಲದ ಉಗ್ರರ ಪಾತ್ರ ಮತ್ತು ಆ ಉಗ್ರರಿಗೆ ಪಾಕಿಸ್ಥಾನ ನೆರವು ನೀಡಿರುವುದಕ್ಕೆ ಸಂಬಂಧಿಸಿದ ಎಲ್ಲ ಸಾಕ್ಷ್ಯವನ್ನು ಎಫ್ಎಟಿಎಫ್ಗೆ ನೀಡುವುದಾಗಿ ತಿಳಿಸಿದೆ. ಒಮ್ಮೆ ಎಫ್ಎಟಿಎಫ್ ಕಪ್ಪು ಪಟ್ಟಿಗೆ ಸೇರಿಸಿದರೆ ವಿದೇಶಗಳಲ್ಲಿ ಪಾಕಿಸ್ಥಾನಕ್ಕೆ ಹಣಕಾಸು ನೆರವು ಸಿಗದು. ಅಷ್ಟೇ ಅಲ್ಲ, ಈ ದೇಶದಲ್ಲಿ ಹೂಡಿಕೆ ಮಾಡುವುದು ಅಪಾಯಕರ ಎಂಬುದನ್ನು ಇದು ಸೂಚಿಸುತ್ತದೆ. ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಗಳಾದ ಐಎಂಎಫ್, ವಿಶ್ವ ಬ್ಯಾಂಕ್‌, ಎಡಿಬಿ ಮತ್ತು ಐರೋಪ್ಯ ಒಕ್ಕೂಟಗಳು ಪಾಕಿಸ್ಥಾನದ ರೇಟಂಗ್‌ ಅನ್ನು ಇಳಿಸುವ ಸಾಧ್ಯತೆ ಇರುತ್ತದೆ. ಪಾಕಿಸ್ಥಾನವನ್ನು ಕಪ್ಪುಪಟ್ಟಿಗೆ ಸೇರಿಸಲು ಭಾರತ ಒತ್ತಾಯಿಸಿತಾದರೂ ಅಕ್ಟೋಬರ್‌ವರೆಗೆ ಸಮಯ ಕೊಡುವ ಮೂಲಕ ಎಫ್ಎಟಿಎಫ್ ಆ ದೇಶಕ್ಕೆ ಕೊಂಚ ನಿರಾಳ ನೀಡಿದೆ.

ಚೀನ ತಡೆಯಿಂದ ವಿಶ್ವಸಂಸ್ಥೆಯ ಖಂಡನಾ ನಿರ್ಣಯ ವಿಳಂಬ
ಪುಲ್ವಾಮಾದ ಭೀಕರ ದಾಳಿ ಖಂಡಿಸಲು ವಿಶ್ವಸಂಸ್ಥೆ ಒಂದು ವಾರ ವಿಳಂಬ ಮಾಡಿದ್ದಕ್ಕೆ ನೆರೆ ರಾಷ್ಟ್ರ ಚೀನವೇ ಕಾರಣ ಎಂಬ ವಿಚಾರ ಈಗ ಬೆಳಕಿಗೆ ಬಂದಿದೆ. 15 ಸದಸ್ಯ ಬಲದ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಚೀನ ಕೂಡ ಸದಸ್ಯತ್ವ ಪಡೆದಿದ್ದು, ನಿರ್ಣಯದಲ್ಲಿ “ಭಯೋತ್ಪಾದನೆ’ ವಿಚಾರ ಸೇರ್ಪಡೆ ಮಾಡುವುದಕ್ಕೆ ಅದು ಆಕ್ಷೇಪ ವ್ಯಕ್ತಪಡಿಸಿತ್ತು. ಶಾಶ್ವತ ಮತ್ತು ಅರೆ ಕಾಲಿಕ ಸದಸ್ಯ ರಾಷ್ಟ್ರಗಳನ್ನೊಳಗೊಂಡ ಭದ್ರತಾ ಮಂಡಳಿ ಪುಲ್ವಾಮಾ ಘಟನೆಯನ್ನು “ಭೀಭತ್ಸ ಮತ್ತು ಹೇಡಿತನ’ ಎಂದು ಅತ್ಯುಗ್ರ ಶಬ್ದಗಳಿಂದ ಖಡಿಸಿದೆೆ. ಮೂಲ ನಿರ್ಣಯ ಪ್ರಕಾರ ಫೆ.15ರಂದೇ ಖಂಡನಾ ನಿರ್ಣಯ ಹೊರಡಿಸಬೇಕಾಗಿತ್ತು. ಅದಕ್ಕೆ ಚೀನ ಮತ್ತು ಪಾಕಿಸ್ಥಾನ ತಡೆಯಾಗಿದ್ದವು ಎಂದು ಮೂಲಗಳು ಹೇಳಿವೆ. 

Advertisement

ಪಾಕ್‌ ಅನ್ನು ಮೂಲೆಗುಂಪು ಮಾಡಿ
ಪುಲ್ವಾಮಾ ದಾಳಿ ಹಿನ್ನೆಲೆಯಲ್ಲಿ ಪಾಕಿಸ್ಥಾನದ ಜತೆಗೆ ವಿಶ್ವಕಪ್‌ನಲ್ಲೂ ಕ್ರಿಕೆಟ್‌ ಆಡಬಾರದು ಎಂಬ ಆಗ್ರಹ ಕೇಳಿಬರುತ್ತಿರುವ ಹೊತ್ತಿನಲ್ಲೇ, ಆ ದೇಶವನ್ನೇ ಜಾಗತಿಕವಾಗಿ ಮೂಲೆಗುಂಪು ಮಾಡಲು ಪ್ರಯತ್ನ ಶುರು ವಾಗಿದೆ. ಈ ಸಂಬಂಧ ಐಸಿಸಿಗೆ ಮತ್ತು ಕ್ರಿಕೆಟ್‌ ಆಡುವ ಇತರ ರಾಷ್ಟ್ರ ಗಳಿಗೆ ಪತ್ರ ಬರೆಯಲು ಮುಂದಾಗಿರುವ ಬಿಸಿಸಿಐ, ಭಯೋತ್ಪಾದನ ಸಂಘಟನೆಗಳ ಜತೆ ಸಂಬಂಧ ಇರಿಸಿಕೊಂಡಿರುವ ಯಾವುದೇ ರಾಷ್ಟ್ರ ವನ್ನು ದೂರವಿಡಿ ಎಂದು ಆಗ್ರಹಿಸಲು ತೀರ್ಮಾನಿಸಿದೆ. ಆದರೆ ಶುಕ್ರವಾರ ನಡೆದ ಬಿಸಿಸಿಐ ಆಡಳಿತಾಧಿಕಾರಿಗಳ ಸಭೆಯಲ್ಲಿ ಪಾಕ್‌ ವಿರುದ್ಧದ ಪಂದ್ಯ ಬಹಿಷ್ಕರಿಸುವ ನಿರ್ಧಾರ ತೆಗೆದುಕೊಂಡಿಲ್ಲ. ಇದಕ್ಕೆ ಬದಲಾಗಿ, ಕೇಂದ್ರ ಸರಕಾರದ ನಿರ್ಧಾರಕ್ಕೆ ಬದ್ಧವಾಗಿರುವುದಾಗಿ ಮುಖ್ಯ ಆಡಳಿತಾಧಿಕಾರಿ ವಿನೋದ್‌ ರಾಯ್‌ ಹೇಳಿದ್ದಾರೆ.

ಇಬ್ಬರು ಉಗ್ರರ ಹತ್ಯೆ
ಜಮ್ಮು-ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಇಬ್ಬರು ಉಗ್ರರನ್ನು ಸೇನಾಪಡೆ ಶುಕ್ರವಾರ ಹತ್ಯೆ ಗೈದಿದೆ. ಸೋಪೋರ್‌ನ ವಾರ್ಪೊರಾ ಪ್ರದೇಶದಲ್ಲಿ ಉಗ್ರರು ಅಡಗಿರುವ ಖಚಿತ ಮಾಹಿತಿ ಮೇರೆಗೆ ಶೋಧ ಕಾರ್ಯ ಆರಂಭಿಸಿ ದ್ದರು. ಈ ವೇಳೆ ಉಗ್ರರು ಗುಂಡಿನ ದಾಳಿ ನಡೆಸಿದ್ದು, ಗುಂಡಿನ ಚಕಮಕಿ ನಡೆದು, ಇಬ್ಬರು ಉಗ್ರರನ್ನು ಭದ್ರತಾ ಪಡೆ ಹತ್ಯೆಗೈದಿದೆ. ಉಗ್ರರ ಬಗ್ಗೆ ಹೆಚ್ಚಿನ ಮಾಹಿತಿ ಇನ್ನೂ ತಿಳಿದುಬಂದಿಲ್ಲ.

ಪಾಕ್‌ ಸರಕಾರದ ವಶಕ್ಕೆ ಜೈಶ್‌ ಕಚೇರಿ
ಅತ್ತ ಎಫ್ಎಟಿಎಫ್ ಸಭೆಯಲ್ಲಿ ಪಾಕಿಸ್ಥಾನಕ್ಕೆ ಹಿನ್ನಡೆಯಾಗಿದ್ದರೆ, ಪಾಕಿಸ್ಥಾನವೂ ತಾನು ಭಯೋ ತ್ಪಾದನೆಗೆ ಬೆಂಬಲ ನೀಡುತ್ತಿಲ್ಲ ಎಂಬು ದನ್ನು ಸಾಬೀತು ಮಾಡಿಕೊಳ್ಳುವ ಸಲುವಾಗಿ ಪುಲ್ವಾಮಾ ಘಟನೆಯ ರೂವಾರಿ ಜೈಶ್‌-ಎ-ಮೊಹಮ್ಮದ್‌ ಉಗ್ರ ಸಂಘಟನೆಯ ಕೇಂದ್ರ ಕಚೇರಿಯನ್ನು ತನ್ನ ವಶಕ್ಕೆ ತೆಗೆದುಕೊಂಡಿದೆ. ಪಂಜಾಬ್‌ ಪ್ರಾಂತ್ಯದ ಬಹವಲ್ಪುರದಲ್ಲಿರುವ ಈ ಕಚೇರಿಯನ್ನು ಸುಪರ್ದಿಗೆ ತೆಗೆದುಕೊಳ್ಳಲಾಗಿದೆ ಎಂದು ಪಾಕ್‌ ಸರಕಾರವೇ ಅಧಿಕೃತ ಹೇಳಿಕೆ ನೀಡಿದೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಪುಲ್ವಾಮಾ ಘಟನೆ ಬಗ್ಗೆ ತೀವ್ರ ಖಂಡನೆ ವ್ಯಕ್ತಪಡಿಸಿದ ಹಿನ್ನೆಲೆಯಲ್ಲೂ ಈ ಕ್ರಮ ತೆಗೆದುಕೊಂಡಿದೆ ಎಂದು ಹೇಳಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next