ಮುಲ್ತಾನ್: ಪ್ರವಾಸಿ ವೆಸ್ಟ್ ಇಂಡೀಸನ್ನು ಸತತ 3ನೇ ಏಕದಿನ ಪಂದ್ಯದಲ್ಲೂ ಮಣಿಸಿದ ಪಾಕಿಸ್ಥಾನ ಕ್ಲೀನ್ ಸ್ವೀಪ್ ಸಾಧನೆಗೈದಿದೆ.
ರವಿವಾರ ರಾತ್ರಿಯ ಅಂತಿಮ ಮುಖಾಮುಖೀಯನ್ನು ಪಾಕ್ ಡಿ-ಎಲ್ ನಿಯಮದಂತೆ 53 ರನ್ನುಗಳಿಂದ ಗೆದ್ದಿತು.
ಪ್ರತಿಕೂಲ ಹವಾಮಾನದಿಂದಾಗಿ ಈ ಪಂದ್ಯವನ್ನು 48 ಓವರ್‌ಗಳಿಗೆ ಸೀಮಿತಗೊಳಿಸಲಾಗಿತ್ತು. ಮೊದಲು ಬ್ಯಾಟಿಂಗ್ ನಡೆಸಿದ ಪಾಕಿಸ್ಥಾನ 9 ವಿಕೆಟಿಗೆ 269 ರನ್ ಗಳಿಸಿದರೆ, ವೆಸ್ಟ್ ಇಂಡೀಸ್ 37.2 ಓವರ್‌ಗಳಲ್ಲಿ 216ಕ್ಕೆ ಆಲೌಟ್ ಆಯಿತು.
ಶದಾಬ್ ಖಾನ್ ಅವರ ಅಮೋಘ ಆಲ್‌ರೌಂಡ್ ಪ್ರದರ್ಶನ ಪಾಕ್ ಜಯದಲ್ಲಿ ಪ್ರಮುಖ ಪಾತ್ರ ವಹಿಸಿತು. ಅವರು 7ನೇ ಕ್ರಮಾಂಕದಲ್ಲಿ ಆಡಲಿಳಿದು 86 ರನ್ ಬಾರಿಸುವುದರ ಜತೆಗೆ ಬೌಲಿಂಗ್‌ನಲ್ಲೂ ಮಿಂಚಿ 4 ವಿಕೆಟ್ ಉಡಾಯಿಸಿದರು. ಆರಂಭಿಕರಾದ ಇಮಾಮ್ ಉಲ್ ಹಕ್ 62, ಫಕಾರ್ ಜಮಾನ್ 35 ರನ್ ಹೊಡೆದರು. ಕಳೆದೆರಡು ಪಂದ್ಯಗಳಲ್ಲಿ ಮಿಂಚಿದ ಬಾಬರ್ ಆಜಂ ಇಲ್ಲಿ ಕೇವಲ ಒಂದು ರನ್ ಮಾಡಿದರು. ನಿಕೋಲಸ್ ಪೂರಣ್ ಬೌಲಿಂಗ್‌ನಲ್ಲಿ ಮಿಂಚಿ 4 ವಿಕೆಟ್ ಕೆಡವಿದರು.
ವಿಂಡೀಸ್ ಸರದಿಯಲ್ಲೂ ಬೌಲರ್ ಓರ್ವ ಟಾಪ್ ಸ್ಕೋರರ್ ಎನಿಸಿದ್ದು ವಿಶೇಷ. ಅಖೀಲ್ ಹೊಸೇನ್ ಸರ್ವಾಧಿಕ 60 ರನ್ ಬಾರಿಸಿದರು. ಅವರೂ 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದಿದ್ದರು.
ಸಂಕ್ಷಿಪ್ತ ಸ್ಕೋರ್: ಪಾಕಿಸ್ಥಾನ-9 ವಿಕೆಟಿಗೆ 269 (ಶದಾಬ್ 86, ಇಮಾಮ್ 62, ಫಕಾರ್ 35, ಖುಷಿœಲ್ 34, ಪೂರಣ್ 48ಕ್ಕೆ 4, ಕೀಮೊ ಪೌಲ್ 57ಕ್ಕೆ 2).
ವೆಸ್ಟ್ ಇಂಡೀಸ್-37.2 ಓವರ್‌ಗಳಲ್ಲಿ 216 (ಅಖೀಲ್ ಹೊಸೇನ್ 60, ಕಾರ್ಟಿ 33, ಶದಾಬ್ ಖಾನ್ 62ಕ್ಕೆ 4, ಹಸನ್ ಅಲಿ 29ಕ್ಕೆ 2).
ಪಂದ್ಯಶ್ರೇಷ್ಠ: ಶದಾಬ್ ಖಾನ್. ಸರಣಿಶ್ರೇಷ್ಠ: ಇಮಾಮ್ ಉಲ್ ಹಕ್.