Advertisement

ಎಲ್‌ಟಿಟಿಇ ಜೀವ ತುಂಬಲು ಪಾಕಿಸ್ಥಾನ ಕುತಂತ್ರ!

12:40 AM Oct 13, 2022 | Team Udayavani |

ಹೊಸದಿಲ್ಲಿ: ಭಾರತದ ವಿರುದ್ಧ ಸದಾ ಒಂದಲ್ಲ ಒಂದು ರೀತಿಯಲ್ಲಿ ಕಿಡಿಗೇಡಿತನ ತೋರುತ್ತಲೇ ಇರುವ ಪಾಕಿಸ್ಥಾನ ಈಗ ಡ್ರಗ್ಸ್‌ ಸಮರವನ್ನು ಸಾರಿದೆ. ಇದಕ್ಕಾಗಿ ಶ್ರೀಲಂಕಾದಲ್ಲಿ ಈಗಾಗಲೇ ಅಳಿದಿರುವ ಎಲ್‌ಟಿಟಿಇ ಪುನಶ್ಚೇತನಕ್ಕೆ ಮುಂದಾಗಿದೆ ಎಂಬ ಆತಂಕಕಾರಿ ಸಂಗತಿ ಬಯಲಾಗಿದೆ.

Advertisement

ಕೇರಳದ ಕರಾವಳಿಯಲ್ಲಿ ಇತ್ತೀಚೆಗಷ್ಟೇ 200 ಕೆ.ಜಿ. ಹೆರಾಯಿನ್‌ ಅನ್ನು ರಾಷ್ಟ್ರೀಯ ಮಾದಕ ವಸ್ತು ನಿಯಂತ್ರಣ ಮಂಡಳಿ ವಶ ಪಡಿಸಿಕೊಂಡಿತ್ತು. ಇದು ಪಾಕಿಸ್ಥಾನ ಮೂಲದ ಮಾದಕ ವಸ್ತುಗಳ ವ್ಯಾಪಾರಿ ಹಾಜಿ ಸಲೀಂಗೆ ಸಂಬಂಧಿಸಿದ್ದು ಎನ್ನಲಾಗಿದೆ. ಈತ ಈಗಾಗಲೇ ನಶಿಸಿಹೋಗಿರುವ ಶ್ರೀಲಂಕಾದ ಲಿಬರೇಶನ್‌ ಟೈಗರ್ಸ್‌ ಆಫ್ ತಮಿಳ್‌ ಈಳಂ (ಎಲ್‌ಟಿಟಿಇ)ಯನ್ನು ಪುನಶ್ಚೇತನ ಗೊಳಿಸಲು ಡ್ರಗ್ಸ್‌ ಮಾರಿ ಬಂದ ಹಣವನ್ನೇ ಭಾರೀ ಪ್ರಮಾಣ ದಲ್ಲಿ ನೀಡಲು ಮುಂದಾಗಿದ್ದ ಎಂದು ಹೇಳಲಾಗಿದೆ.

ಹಾಜಿ ಸಲೀಂ ಹೆಸರು ಜುಲೈಯಲ್ಲೇ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ)ಯ ತನಿಖೆ ವೇಳೆಯಲ್ಲೇ ಬೆಳಕಿಗೆ ಬಂದಿತ್ತು. ಎನ್‌ಐಎ ಪ್ರಕಾರ ಸಲೀಂ, ಶ್ರೀಲಂಕಾದ ಡ್ರಗ್‌ ಮಾಫಿಯಾ ದೊರೆ ಸಿ. ಗುಣಶೇಖರ್‌ ಅಲಿಯಾಸ್‌ ಗುಣ ಮತ್ತು ಪುಷ್ಪರಾಜ್‌ ಅಲಿಯಾಸ್‌ ಪೊಕ್ಕುಟ್ಟಿ ಕಣ್ಣ ಎಂಬವರ ಮೂಲಕ ಭಾರತಕ್ಕೆ ಮಾದಕ ವಸ್ತು ಮತ್ತು ಆಯುಧಗಳನ್ನು ಪೂರೈಸುತ್ತಿದ್ದರು ಎಂಬುದು ಪತ್ತೆಯಾಗಿತ್ತು. ಈ ಸಂಬಂಧ ತಮಿಳುನಾಡಿನ ಪೊಲೀಸರು ಇಬ್ಬರು ಯುವಕರನ್ನೂ ಬಂಧಿಸಿದ್ದರು. ಆರೋಪಿಗಳು ಎಲ್‌ಟಿಟಿಇಯಿಂದ ಪ್ರೇರಿತರಾಗಿ ತಮಿಳುನಾಡಿನಲ್ಲಿ ಶಸ್ತ್ರಾಸ್ತ್ರ ದಂಗೆ ಎಬ್ಬಿಸಲು ಮುಂದಾಗಿದ್ದರು ಎಂದು ಹೇಳಲಾಗಿತ್ತು.

ತಮಿಳುನಾಡು ಪೊಲೀಸರಿಂದ ಪ್ರಕರಣದ ತನಿಖೆಯನ್ನು ವಹಿಸಿಕೊಂಡ ಎನ್‌ಐಎ, ಕೂಲಂಕಶವಾಗಿ ತನಿಖೆ ನಡೆಸಿತ್ತು. ಈ ವೇಳೆ ಇಬ್ಬರು ಯುವಕರ ಮೊಬೈಲ್‌ನಲ್ಲಿ ಎಲ್‌ಟಿಟಿಇ ನಾಯಕ ಪ್ರಭಾಕರನ್‌ ಫೋಟೋಗಳು, ಅಕ್ರಮ ಆಯುಧಗಳ ತಯಾರಿಕೆಗಾಗಿ ಬಳಸುವ ಕಚ್ಚಾ ಸ್ಫೋಟಕಗಳು, ವಿಷ ತಯಾರಿಸುವ ಬೀಜಗಳು ಮತ್ತು ಕಾಡಿನಲ್ಲಿ ಜೀವ ರಕ್ಷಣೆಗಾಗಿ ಬಳಸುವ ವಸ್ತುಗಳ ಖರೀದಿ ರಶೀದಿಗಳು ಸಿಕ್ಕಿದ್ದವು.

11,300 ಕೆಜಿ ಡ್ರಗ್ಸ್‌ ವಶ
ಕಳೆದ ಜನವರಿಯಿಂದ ಇಲ್ಲಿವರೆಗೆ ಮುಂಬಯಿ ವಿಭಾಗದಲ್ಲೇ ಸುಮಾರು 11,300 ಕೆ.ಜಿ. ಡ್ರಗ್ಸ್‌ ಅನ್ನು ವಶಪಡಿಸಿ ಕೊಂಡು 58 ಮಂದಿ  ಯನ್ನು ಬಂಧಿಸಲಾಗಿದೆ. 4 ದಿನಗಳ ಹಿಂದೆ ಗುಜರಾತ್‌ ಕರಾವಳಿಯಲ್ಲಿ ಪಾಕಿಸ್ಥಾನ ಬೋಟ್‌ ವೊಂದನ್ನು ವಶಪಡಿಸಿಕೊಳ್ಳಲಾಗಿದ್ದು, 350 ಕೋಟಿ ರೂ. ಮೌಲ್ಯದ 50 ಕೆಜಿ ಹೆರಾಯಿನ್‌ ಅನ್ನು ವಶಕ್ಕೆ ತೆಗೆದು ಕೊಳ್ಳಲಾಗಿದೆ. ಕೆಲವು ತಿಂಗಳುಗಳಿಂದ ಪಾಕಿಸ್ಥಾನದಿಂದ ಬರುವ ಡ್ರಗ್ಸ್‌ ಹೆಚ್ಚಾಗಿದೆ ಎಂದು ಮುಂಬಯಿ ಮತ್ತು ಗುಜರಾತ್‌ನ ಮಾದಕ ನಿಯಂತ್ರಣ ಮಂಡಳಿ ಅಧಿಕಾರಿಗಳು ಹೇಳುತ್ತಾರೆ.

Advertisement

ಭಾರತಕ್ಕೆ ಹೇಗೆ ಬರುತ್ತಿತ್ತು?
ಈ ಮಾದಕ ದ್ರವ್ಯದ ಮೂಲ ಅಫ್ಘಾನಿಸ್ಥಾನ. ಅಲ್ಲಿಂದ ಪಾಕಿಸ್ಥಾನಕ್ಕೆ ಬರುತ್ತಿದ್ದ ಈ ಡ್ರಗ್ಸ್‌ ಅನ್ನು ಸಮುದ್ರ ಮಾರ್ಗ ಮಧ್ಯೆಯೇ ಶ್ರೀಲಂಕಾದ ಹಡಗುಗಳಿಗೆ ವರ್ಗಾಯಿಸಿ ಆ ಮೂಲಕ ಭಾರತಕ್ಕೆ ರವಾನಿಸಲಾಗುತ್ತಿತ್ತು. ಇರಾನ್‌ನ ಕೆಲವು ಹಡಗುಗಳನ್ನೂ ಬಳಸಲಾಗುತ್ತಿತ್ತು. ಇದಕ್ಕೆ ಪುರಾವೆಯೆಂಬಂತೆ ಇರಾನ್‌ನ ಆರು ಮಂದಿಯನ್ನು ಬಂಧಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next