ಇಸ್ಲಾಮಾಬಾದ್ : ಜಮ್ಮು ಕಾಶ್ಮೀರದಲ್ಲಿನ ಭಾರತೀಯ ಸೇನಾ ಪಡೆಯನ್ನು ಗುರಿ ಇರಿಸಿ ದಾಳಿ ನಡೆಸುವ ತನ್ನ ತಂತ್ರವನ್ನು ಇನ್ನಷ್ಟು ತೀವ್ರವಾಗಿ ಮತ್ತು ಕರಾರುವಾಕ್ ಆಗಿ ನಡೆಸುವ ಹುನ್ನಾರದಿಂದ ಪಾಕಿಸ್ಥಾನ ಈಗಿನ್ನು ಭಾರತೀಯ ಸೇನಾ ಪಡೆಗಳ ಮೇಲೆ ಜಿಪಿಎಸ್ ನಿರ್ದೇಶಿತ ಮೋರ್ಟಾರ್ ದಾಳಿಗಳನ್ನು ನಡೆಸಲು ಸಜ್ಜಾಗುತ್ತಿದೆ.
ಜಿಪಿಎಸ್ ನಿರ್ದೇಶಿತ ಮೋರ್ಟಾರ್ ದಾಳಿಯ ಅತ್ಯಾಧುನಿಕ ತಂತ್ರಜ್ಞಾನದ ಮಿಲಿಟರಿ ವ್ಯವಸ್ಥೆಯನ್ನು ಖರೀದಿಸುವ ವ್ಯವಹಾರವನ್ನು ಕುದುರಿಸುವ ನಿಟ್ಟಿನಲ್ಲಿ ಉತ್ತಮ ಪೂರೈಕದಾರರನ್ನು ಹುಡುಕಾಡುವಂತ ಪಾಕ್ ಸರಕಾರ ವಿಶ್ವಾದ್ಯಂತದ ತನ್ನ ದೂತಾವಾಸಗಳಿಗೆ ಸೂಚನೆ ನೀಡಿರುವುದಾಗಿ ತಿಳಿದು ಬಂದಿದೆ.
ಪಾಕಿಸ್ಥಾನ ಖರೀದಿಸಲು ಬಯಸುವ ಈ ಬಗೆಯ ಅತ್ಯಾಧುನಿಕ ಮಿಲಿಟರಿ ಉಪಕರಣವು ಪಾಶ್ಚಾತ್ಯ ದೇಶಗಳಲ್ಲಿ ಈಗಾಗಲೇ ಬಳಕೆಯಲ್ಲಿವೆ. ಅಂತೆಯೇ ಚೀನದ ಬಳಿಯೂ ಅದು ಉಪಲಬ್ಧವಿದೆ. ಚೀನ ಈಗಾಗಲೇ ಈ ಬಗೆಯ ತಂತ್ರಜ್ಞಾನದ ಉಪಕರಣಗಳ ಗುಣಾಂಶ ಮತ್ತು ಸಾಮರ್ಥ್ಯವನ್ನು ವರ್ಗೀಕರಿಸಿ ಪ್ರಕಟಿಸಿದೆ.
ಪಾಶ್ಚಾತ್ಯ ದೇಶಗಳು ತಮ್ಮಲ್ಲಿನ ಈ ಬಗ್ಗೆಯ ಜಿಪಿಎಸ್ ನಿರ್ದೇಶಿತ ಮೋರ್ಟಾರ್ ಉಪಕರಣಗಳನ್ನು
ಈಗಲೂ ರಹಸ್ಯವಾಗಿ ಇರಿಸಿವೆ. ಜಿಪಿಎಸ್ ನಿರ್ದೇಶಿತ ಮೋರ್ಟಾರ್ ದಾಳಿ ಮಿಲಿಟರಿ ವ್ಯವಸ್ಥೆಯು ಅತ್ಯಂತ ಕರಾರುವಾಕ್ ದಾಳಿ ನಡೆಸುವ ಸಾಮರ್ಥ್ಯ ಹೊಂದಿರುತ್ತದೆ. ಶತ್ರುಗಳ ಗುರಿಗಳ ಮೇಲೆ ಅವು ಅತ್ಯಂತ ವಿನಾಶಕಾರಿ ದಾಳಿಯನ್ನು ನಡೆಸುತ್ತವೆ.
ಭದ್ರತಾ ವಿಶ್ಲೇಷಕರ ಪ್ರಕಾರ ಈ ಬಗೆಯ ಜಿಪಿಎಸ್ ನಿರ್ದೇಶಿತ ಮೋರ್ಟಾರ್‌ಗಳು ಶತ್ರು ಸೇನೆ ಮತ್ತು ಮಿತ್ರ ಸೇನಾ ಪಡೆಗಳ ವ್ಯತ್ಯಾಸಗಳನ್ನು ನಿಖರವಾಗಿ ಗುರುತಿಸಿ ಶತ್ರುಗಳ ಮೇಲೆ ಮಾತ್ರವೇ ಎರಗುವ ಕೌಶಲ ಹೊಂದಿವೆ.