Advertisement

ಪಾಕ್‌ ಸೇನೆಯ ರೈಫ‌ಲ್‌ ಉಗ್ರರ ಕೈಯ್ಯಲ್ಲಿ!

06:25 AM Nov 08, 2017 | Team Udayavani |

ಶ್ರೀನಗರ: ಭಾರತದಲ್ಲಿ ಹಲವು ವಿಧ್ವಂಸಕ ಕೃತ್ಯಗಳಲ್ಲಿ ಭಾಗಿಯಾಗಿರುವ ಜೈಶ್‌-ಎ-ಮೊಹಮ್ಮದ್‌ ಉಗ್ರ ಸಂಘಟನೆಯ ಮುಖ್ಯಸ್ಥ ಮಸೂದ್‌ ಅಜರ್‌ನ ಸೋದರ ಸಂಬಂಧಿ ಸೇರಿದಂತೆ ಮೂವರು ಉಗ್ರರನ್ನು ಭದ್ರತಾ ಪಡೆಯ ಯೋಧರು ಹೊಡೆದುರುಳಿಸಿದ್ದಾರೆ.

Advertisement

ಸೋಮವಾರ ರಾತ್ರಿ ನಡೆದ ಈ ಕಾರ್ಯಾಚರಣೆಯು ಭಾರತೀಯ ಸೇನೆಯ ಪಾಲಿಗೆ ಅತ್ಯಂತ ಮಹತ್ವದ್ದು. ಏಕೆಂದರೆ, ಹತ ಉಗ್ರರ ಬಳಿ ಅಮೆರಿಕ ನಿರ್ಮಿತ ಎಂ4 ರೈಫ‌ಲ್‌ಗ‌ಳು ಸಿಕ್ಕಿದ್ದು, ಅದು ಪಾಕಿಸ್ತಾನದ ವಿಶೇಷ ಪಡೆಯ ಸೈನಿಕರು ಬಳಸುವಂಥದ್ದು. ಹೀಗಾಗಿ, ಭಾರತದ ನೆಲದಲ್ಲಿ ಉಗ್ರ ಕೃತ್ಯಗಳನ್ನು ನಡೆಸಲು ಸ್ವತಃ ಪಾಕ್‌ ಸೇನೆಯೇ ನೆರವಾಗುತ್ತಿರುವುದು ಇದೀಗ ಜಗಜ್ಜಾಹೀರಾದಂತಾಗಿದೆ. ನಮ್ಮದು ಉಗ್ರರ ಸ್ವರ್ಗವಲ್ಲ ಎಂದು ವಾದಿಸುತ್ತಾ ಬಂದಿರುವ ಪಾಕಿಸ್ತಾನಕ್ಕೂ ಈ ಬೆಳವಣಿಗೆ ತೀವ್ರ ಮುಖಭಂಗ ಉಂಟುಮಾಡಿದೆ.

ರಾತ್ರೋರಾತ್ರಿ ಎನ್‌ಕೌಂಟರ್‌:
ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಸೋಮವಾರ ರಾತ್ರೋರಾತ್ರಿ ಕಾರ್ಯಾಚರಣೆ ನಡೆದಿದ್ದು, ಉಗ್ರ ಮಸೂದ್‌ ಅಜರ್‌ನ ಸೋದರ ಸಂಬಂಧಿ ತಲ್ಲಾಹ್‌ ರಶೀದ್‌, ಜೈಶ್‌ನ ವಿಭಾಗೀಯ ಕಮಾಂಡರ್‌ ಮೆಹೂ¾ದ್‌ ಭಾಯಿ ಹಾಗೂ ವಾಸಿಂ ಅಹ್ಮದ್‌ ಗನಿ ಎಂಬವರನ್ನು ಹತ್ಯೆಗೈಯ್ಯುವಲ್ಲಿ ಭದ್ರತಾ ಪಡೆ ಯಶಸ್ವಿಯಾಗಿದೆ. ಆದರೆ, ಗುಂಡಿನ ಚಕಮಕಿ ವೇಳೆ ಯೋಧರೊಬ್ಬರು ಹುತಾತ್ಮರಾಗಿದ್ದಾರೆ. ಹತ ಉಗ್ರರ ಪೈಕಿ ಮೊದಲ ಇಬ್ಬರು ಮೋಸ್ಟ್‌ ವಾಂಟೆಡ್‌ ಉಗ್ರರಾಗಿದ್ದು, ಅಹ್ಮದ್‌ ಗನಿ ಸ್ಥಳೀಯ ಯುವಕ. ಈತ ಕಳೆದ ಮೇ ತಿಂಗಳಲ್ಲಿ ಉಗ್ರ ಸಂಘಟನೆಗೆ ಸೇರ್ಪಡೆಗೊಂಡಿದ್ದ ಎಂದು ಸುದ್ದಿಗೋಷ್ಠಿಯಲ್ಲಿ ಸಿಆರ್‌ಪಿಎಫ್, ಸೇನೆ ಮತ್ತು ಪೊಲೀಸ್‌ ಇಲಾಖೆಯ ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ.

ಇದೇ ವೇಳೆ, ಎನ್‌ಕೌಂಟರ್‌ ಬಳಿಕ ಹಸನ್‌ ಶಾ ಎಂಬ ಹೆಸರಿನ ಜೈಶ್‌ ವಕ್ತಾರ ಸ್ಥಳೀಯ ಸುದ್ದಿಸಂಸ್ಥೆಗಳಿಗೆ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದಾನೆ. ಅದರಲ್ಲಿ ಮೃತಪಟ್ಟ ಉಗ್ರರ ಪೈಕಿ ಒಬ್ಬ ಮಸೂದ್‌ ಅಜರ್‌ನ ಸೋದರ ಸಂಬಂಧಿ ಎಂಬುದನ್ನು ದೃಢಪಡಿಸಿದ್ದಾನೆ. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಐಜಿ ಮುನೀರ್‌ ಖಾನ್‌, “ಗುರುತನ್ನು ತಾವೇ ಹೇಳಿಕೊಂಡಿದ್ದಕ್ಕಾಗಿ ಉಗ್ರ ಸಂಘಟನೆಗೆ ಥ್ಯಾಂಕ್ಸ್‌ ಹೇಳಬೇಕು. ಇನ್ನಾದರೂ, ಪಾಕಿಸ್ತಾನವು ಈ ವಿದೇಶಿ ಉಗ್ರರ ಮೃತದೇಹಗಳನ್ನು ಪಡೆದುಕೊಳ್ಳಬೇಕು. ಇದೇ ಮೊದಲ ಬಾರಿಗೆ ಉಗ್ರರು ನಮ್ಮವರು ಎಂದು ಅವರು ಒಪ್ಪಿಕೊಂಡಿದ್ದಾರೆ’ ಎಂದಿದ್ದಾರೆ.

ಪಾಕ್‌ ಬಣ್ಣ ಬಯಲು
ಮೃತ ಉಗ್ರರಿಂದ ವಶಪಡಿಸಿಕೊಂಡ ಎಂ4 ಕಾರ್ಬೈನ್‌ ರೈಫ‌ಲ್‌ ಅಮೆರಿಕದಲ್ಲಿ ತಯಾರಾಗಿದ್ದು. ಅವುಗಳನ್ನು ಅಮೆರಿಕವು ಪಾಕಿಸ್ತಾನದ ಸೇನೆಗೆಂದು ಮಾರಾಟ ಮಾಡುತ್ತಿದೆ. ಅಷ್ಟೇ ಅಲ್ಲ, ಅಫ್ಘಾನಿಸ್ತಾನ ಮತ್ತು ಇರಾಕ್‌ನಲ್ಲಿನ ನ್ಯಾಟೋ ಪಡೆಗಳೂ ಈ ರೈಫ‌ಲ್‌ಗ‌ಳನ್ನು ಬಳಸುತ್ತಿವೆ. ಹೀಗಾಗಿ, ಪಾಕಿಸ್ತಾನದ ವಿಶೇಷ ಸೇನಾಪಡೆಯೇ ಈ ಶಸ್ತ್ರಾಸ್ತ್ರಗಳನ್ನು ಉಗ್ರರಿಗೆ ನೀಡಿರುವುದು ಈಗ ಸ್ಪಷ್ಟವಾಗಿದೆ. ಇದು ಪಾಕ್‌ ಮತ್ತು ಜೈಶ್‌ ಸಂಘಟನೆ ನಡುವಿನ ನಂಟನ್ನು ಮತ್ತು ಕಾಶ್ಮೀರದಲ್ಲಿ ಅವರು ನಡೆಸುತ್ತಿರುವ ವಿಧ್ವಂಸಕ ಕೃತ್ಯಗಳನ್ನು ಬಯಲು ಮಾಡಿದೆ. ಇದೇ ಮೊದಲ ಬಾರಿಗೆ ಉಗ್ರರ ಕೈಯ್ಯಲ್ಲಿ ಅಮೆರಿಕ ನಿರ್ಮಿತ ರೈಫ‌ಲ್‌ ದೊರೆತಿದ್ದು, ಪಾಕ್‌ ವಿರುದ್ಧ ಮಾಡುತ್ತಿದ್ದ ಆರೋಪ ಸತ್ಯವೆಂದು ಜಗಜ್ಜಾಹೀರಾಗಿದೆ ಎಂದು ಮೇಜರ್‌ ಜನರಲ್‌ ಬಿ.ಎಸ್‌. ರಾಜು ಹೇಳಿದ್ದಾರೆ.

Advertisement

ಉಗ್ರರಿಗೆ ಹಣಕಾಸು: 36.34 ಕೋಟಿ ವಶ
ಕಪ್ಪುಹಣ ಮತ್ತು ಭಯೋತ್ಪಾದನೆಯ ವಿರುದ್ಧ ಸಿಕ್ಕ ದೊಡ್ಡ ಯಶಸ್ಸು ಎಂಬಂತೆ, ಜಮ್ಮು-ಕಾಶ್ಮೀರ ಉಗ್ರರಿಗೆ ಹಣಕಾಸು ನೆರವು ಪ್ರಕರಣದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ) ಮಂಗಳವಾರ ಬರೋಬ್ಬರಿ 36.34 ಕೋಟಿ ರೂ.ಗಳನ್ನು ವಶಪಡಿಸಿಕೊಂಡಿದೆ. ಅಷ್ಟೇ ಅಲ್ಲದೆ, ಪ್ರಕರಣ ಸಂಬಂಧ 9 ಮಂದಿಯನ್ನು ಬಂಧಿಸಲಾಗಿದೆ. ವಿನೋದ್‌ ಶೆಟ್ಟಿ, ಪ್ರದೀಪ್‌ ಚೌಹಾಣ್‌, ಭಗವಾನ್‌ ಸಿಂಗ್‌, ಶಹನವಾಜ್‌ ಮಿರ್‌, ದೀಪಕ್‌ ತೋಪ್ರಾನಿ, ಮಜೀದ್‌ ಸೋಫಿ, ಇಜಾಝುಲ್‌ ಹಸನ್‌, ಜಸ್ವಿಂದರ್‌ ಸಿಂಗ್‌ ಮತ್ತು ಉಮೇರ್‌ ದರ್‌ ಎಂಬವರೇ ಬಂಧಿತರು.

Advertisement

Udayavani is now on Telegram. Click here to join our channel and stay updated with the latest news.

Next