Advertisement

ಡಿ. 25ರಂದು ಜಾಧವ್‌ಗೆ ಪತ್ನಿ, ತಾಯಿ ಭೇಟಿಗೆ ಅವಕಾಶ

10:53 AM Dec 09, 2017 | Team Udayavani |

ಇಸ್ಲಾಮಾಬಾದ್‌: ಪಾಕಿಸ್ಥಾನದಲ್ಲಿ ಮರಣ ದಂಡನೆಗೆ ಒಳಗಾಗಿರುವ ಭಾರತೀಯ ನೌಕಾಪಡೆಯ ಮಾಜಿ ಅಧಿಕಾರಿ ಕುಲಭೂಷಣ್‌ ಜಾಧವ್‌ ಅವರು ಇದೇ 25ರಂದು ತಮ್ಮ ಪತ್ನಿ ಮತ್ತು ತಾಯಿಯನ್ನು ಭೇಟಿಯಾಗಲಿದ್ದಾರೆ. ಜಾಧವ್‌ ಜತೆ ಪತ್ನಿ, ತಾಯಿಯ ಭೇಟಿಯನ್ನು ಡಿ. 25ರಂದು ನಿಗದಿಪಡಿಸಲಾಗಿದ್ದು, ಆ ಸಂದರ್ಭದಲ್ಲಿ ಭಾರತೀಯ ಹೈಕಮಿಷನ್‌ನ ಅಧಿಕಾರಿಗಳೂ ಉಪಸ್ಥಿತರಿರಲಿದ್ದಾರೆ ಎಂದು ಪಾಕಿಸ್ಥಾನ‌ ವಿದೇಶಾಂಗ ಇಲಾಖೆ ಹೇಳಿದೆ. ಶುಕ್ರವಾರ ಈ ಕುರಿತು ಮಾಹಿತಿ ನೀಡಿದ ವಿದೇಶಾಂಗ ಇಲಾಖೆ ವಕ್ತಾರ ಮೊಹಮ್ಮದ್‌ ಫೈಸಲ್‌, “ನಾವು ಈ ವಿಚಾರವನ್ನು ಭಾರತಕ್ಕೆ ತಲುಪಿಸಿದ್ದೇವೆ. ಪಾಕ್‌ಗೆ ಆಗಮಿಸುವ ಜಾಧವ್‌ರ ತಾಯಿ ಹಾಗೂ ಪತ್ನಿಗೆ ಸೂಕ್ತ ಭದ್ರತೆ ನೀಡಲಿದ್ದೇವೆ,’ ಎಂದಿದ್ದಾರೆ.

Advertisement

ಇದೇ ವೇಳೆ, ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಅವರೂ ಈ ಬಗ್ಗೆ ಸ್ಪಷ್ಟಪಡಿಸಿದ್ದು, ಜಾಧವ್‌ ಪತ್ನಿ ಹಾಗೂ ತಾಯಿಗೆ ವೀಸಾ ನೀಡಲು ಪಾಕ್‌ ಸರಕಾರ ಒಪ್ಪಿದೆ ಎಂದು ಟ್ವೀಟ್‌ ಮಾಡಿದ್ದಾರೆ. ಮಾನವೀಯ ನೆಲೆಯಲ್ಲಿ ಅವರಿಬ್ಬರಿಗೆ ವೀಸಾ ಒದಗಿಸುವಂತೆ ಸುಷ್ಮಾ ಅವರೇ ಇತ್ತೀಚೆಗೆ ದಿಲ್ಲಿಯಲ್ಲಿ ಪಾಕ್‌ ಹೈಕಮಿಷನರ್‌ ಸೊಹೈಲ್‌ ಮೊಹಮ್ಮದ್‌ಗೆ ಕೇಳಿಕೊಂಡಿದ್ದರು.

47 ವರ್ಷದ ಜಾಧವ್‌ರನ್ನು ಬೇಹುಗಾರಿಕೆ ಹಾಗೂ ಭಯೋತ್ಪಾದನೆ ಆರೋಪ ಹೊರಿಸಿ ಏಪ್ರಿಲ್‌ನಲ್ಲಿ ಬಂಧಿಸಲಾಗಿತ್ತು. ನಂತರ ಪಾಕ್‌ ಕೋರ್ಟ್‌ ಅವರಿಗೆ ಗಲ್ಲುಶಿಕ್ಷೆ ಘೋಷಿಸಿತ್ತು. ಇದನ್ನು ಪ್ರಶ್ನಿಸಿ ಭಾರತವು ಅಂತಾರಾಷ್ಟ್ರೀಯ ನ್ಯಾಯಾಲಯದ ಮೊರೆ ಹೋಗಿತ್ತು. ಭಾರತದ ಕೋರಿಕೆಗೆ ಸ್ಪಂದಿಸಿದ್ದ ನ್ಯಾಯಾಲಯ, ಜಾಧವ್‌ ಮರಣದಂಡನೆಗೆ ತಡೆ ತಂದಿತ್ತು.

Advertisement

Udayavani is now on Telegram. Click here to join our channel and stay updated with the latest news.

Next