ಇಸ್ಲಾಮಾಬಾದ್ : ಪಾಕ್ ವಾಯು ಪ್ರದೇಶವನ್ನು ಅತಿಕ್ರಮಿಸಿ ಹಾರಾಡುವ, ಅಮೆರಿಕ ಸಹಿತ, ಎಲ್ಲ ವಿದೇಶೀ ಡ್ರೋನ್‌ಗಳನ್ನು ಕಂಡಾಕ್ಷಣ ಹೊಡೆದುರುಳಿಸುವಂತೆ ಪಾಕ್ ವಾಯು ಪಡೆ ಮುಖ್ಯಸ್ಥ ತನ್ನ ಯೋಧರಿಗೆ ಖಡಕ್ ಸೂಚನೆ ಕೊಟ್ಟಿರುವುದಾಗಿ ವರದಿಯಾಗಿದೆ.
ಪಾಕ್ ವಾಯು ಪಡೆ ಮುಖ್ಯಸ್ಥರು ನೀಡಿರುವರೆನ್ನಲಾದ ಈ ಆದೇಶವನ್ನು ‘ಅಮೆರಿಕವನ್ನು ಗುರಿ ಇರಿಸಿಕೊಂಡೇ ಕೊಡಲಾಗಿದೆ’ ಎಂದು ತಿಳಿಯಲಾಗಿದೆ. ಏಕೆಂದರೆ ಅಮೆರಿಕದ ಡ್ರೋನ್‌ಗಳು ಅಫ್ಘಾನ್ – ಪಾಕ್ ಗಡಿಯಲ್ಲಿ ಹಾಗೂ ಬುಡಕಟ್ಟು ಪ್ರದೇಶದಲ್ಲಿ 2004ರಿಂದಲೂ ಉಗ್ರರನ್ನು ಮಟಾಶ್ ಮಾಡುವ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿವೆ.
ಪಾಕ್ ವಾಯು ಪಡೆ ಮುಖ್ಯಸ್ಥ, ಏರ್ ಚೀಫ್ ಮಾರ್ಶಲ್ ಸೊಹೇಲ್ ಅಮನ್ ಅವರು ನಿನ್ನೆ ಗುರುವಾರ ತನ್ನ ಪಡೆಗಳಿಗೆ, “ಪಾಕ್ ವಾಯು ಪ್ರದೇಶವನ್ನು ಅತಿಕ್ರಮಿಸಿ ಒಳಬರುವ ಯಾವುದೇ ವಿದೇಶೀ ಡ್ರೋನ್‌ಗಳು ಆಗಸದಲ್ಲಿ ಕಂಡು ಬಂದ ಕೂಡಲೇ ಅವುಗಳನ್ನು ಹೊಡೆದುರುಳಿಸಬೇಕು’ ಎಂಬ ಸೂಚನೆಯನ್ನು ನೀಡಿದ್ದಾರೆ.
“ಯಾರೂ ನಮ್ಮ ವಾಯು ಪ್ರದೇಶವನ್ನು ಅತಿಕ್ರಮಿಸುವುದನ್ನು ನಾವು ಸಹಿಸುವುದಿಲ್ಲ. ಅದಕ್ಕೆ ಅವಕಾಶವನ್ನೂ ಕೊಡುವುದಿಲ್ಲ; ಆ ಪ್ರಕಾರ ನಾನು ಪಿಎಎಫ್ ಗೆ “ಅಮೆರಿಕ ಸಹಿತ ಯಾವುದೇ ವಿದೇಶೀ ಡ್ರೋನ್‌ಗಳು ಪಾಕ್ ವಾಯು ಪ್ರದೇಶವನ್ನು ಅತಿಕ್ರಮಿಸಿ ಒಳಬಂದರೆ ಅವುಗಳನ್ನು ಹೊಡೆದುರುಳಿಸಬೇಕು’ ಎಂಬ ಕಟ್ಟುನಿಟ್ಟಿನ ಸೂಚನೆಯನ್ನು ಕೊಟ್ಟಿದ್ದೇನೆ’ ಎಂದು ಹೇಳಿದ್ದಾರೆ.
ಅಮೆರಿಕ ವಾಯುಪಡೆ ಡ್ರೋನ್‌ಗಳ ತೀರ ಈಚಿನ ದಾಳಿಗೆ ಪಾಕ್ – ಅಫ್ಘಾನ್ ಗಡಿಯಲ್ಲಿ ಮೂವರು ಉಗ್ರರು ಹತರಾಗಿದ್ದಾರೆ. ಅಮೆರಿಕದೊಂದಿಗಿನ ಪಾಕ್ ಸಂಬಂಧಗಳು ಹಳಸಿರುವುದು ಮತ್ತು ಇಸ್ಲಾಮಾಬಾದ್ ಚೀನಕ್ಕೆ ನಿಕಟವಾಗುತ್ತಿರುವ ಹಿನ್ನೆಲೆಯಲ್ಲಿ ಈ ಡ್ರೋನ್ ದಾಳಿಗಳು ಮಹತ್ವ ಪಡೆದಿವೆ ಎನ್ನಲಾಗಿದೆ.