Advertisement
ಉಗ್ರವಾದಕ್ಕೆ ಹರಿಯುವ ದೇಣಿಗೆಯ ಮೇಲೆ ನಿಗಾ ಇಡಲು ಹಾಗೂ ಹತ್ತಿಕ್ಕಲು ಪ್ರಯತ್ನಿಸುವ ಕಾರ್ಯಪಡೆ ಎಫ್ಎಟಿಎಫ್ (ಫೈನಾನ್ಶಿಯಲ್ ಆ್ಯಕ್ಷನ್ ಟಾಸ್ಕ್ ಫೋರ್ಸ್) ಸಭೆಯು ಭಾನುವಾರ ಫ್ರಾನ್ಸ್ ರಾಜಧಾನಿ ಪ್ಯಾರಿಸ್‌ನಲ್ಲಿ ಆರಂಭವಾಗಿದ್ದು, ಈ ಸಮಯದಲ್ಲೇ ಪಾಕ್ ಹೊಸ ಕಥೆ ಕಟ್ಟುತ್ತಿದೆ. ಪಾಕಿಸ್ಥಾನದ ಜೈಶ್ ಎ ಮೊಹಮ್ಮದ್ ಉಗ್ರ ಸಂಘಟನೆಯ ಸ್ಥಾಪಕ ಮಸೂದ್ ಅಝರ್ ಮತ್ತು ಆತನ ಕುಟುಂಬ ಕಾಣೆಯಾಗಿದೆ ಎಂದು ಪಾಕಿಸ್ಥಾನ ಹೇಳಿದೆ!ಇದೇ ಶುಕ್ರವಾರ ಎಫ್ಎಟಿಎಫ್ ಸಭೆಯಲ್ಲಿ ಪಾಕಿಸ್ಥಾನವನ್ನು ಕಪ್ಪುಪಟ್ಟಿಗೆ ಸೇರಿಸಬೇಕೇ ಬೇಡವೇ ಎಂಬ ಕುರಿತು ಚರ್ಚೆ ನಡೆಯಲಿದ್ದು, ಅದರಲ್ಲಿ ಅಂತಾರಾಷ್ಟ್ರೀಯ ಹಣಕಾಸು ನಿಧಿ, ಸಂಯುಕ್ತ ರಾಷ್ಟ್ರಗಳು, ವಿಶ್ವ ಬ್ಯಾಂಕ್ ಸೇರಿದಂತೆ 205 ದೇಶಗಳ 800 ಪ್ರತಿನಿಧಿಗಳು ಇದರಲ್ಲಿ ಭಾಗವಹಿಸಲಿದ್ದಾರೆ. ಪಾಕಿಸ್ಥಾನವಂತೂ ಏನಕೇನ ಈ ಕುಣಿಕೆಯಿಂದ ಪಾರಾಗಲು ಸಕಲ ಪ್ರಯತ್ನ ನಡೆಸಿದೆ. ಇದೇ ಕಾರಣಕ್ಕಾಗಿಯೇ, ಕೆಲವೇ ದಿನಗಳ ಹಿಂದಷ್ಟೇ ಅದು, ಮುಂಬೈ ದಾಳಿಯ ಉಗ್ರ ಹಫೀಜ್ ಸಯೀದ್‌ಗೆ 11 ವರ್ಷ ಜೈಲು ಶಿಕ್ಷೆ ವಿಧಿಸುವ ನಾಟಕವನ್ನೂ ಮಾಡಿರುವುದು ಇಲ್ಲಿ ನೆನಪಿಸಲೇಬೇಕು.
ಕಳೆದ ಎರಡು ವರ್ಷಗಳಿಂದ ಪಾಕಿಸ್ಥಾನ ಗ್ರೇ ಪಟ್ಟಿಯಲ್ಲಿದ್ದು, ಅದೇನಾದರೂ ಕಪ್ಪು ಪಟ್ಟಿಯಲ್ಲಿ ಜಾಗ ಪಡೆಯಿತೆಂದರೆ, ತೀವ್ರ ಸಂಕಷ್ಟಕ್ಕೆ ಈಡಾಗಲಿರುವುದಂತೂ ನಿಶ್ಚಿತ. ಆದರೆ, ಕಳೆದ ಬಾರಿಯಂತೆ ಈ ಬಾರಿಯೂ ಕೆಲವು ರಾಷ್ಟ್ರಗಳು ಪಾಕಿಸ್ಥಾನದ ಪರ ನಿಂತು, ಅದನ್ನು ಬಚಾವು ಮಾಡಲು ಪ್ರಯತ್ನಿಸಲಿವೆ.
Related Articles
ಕಪ್ಪು ಪಟ್ಟಿಯಿಂದ ತಪ್ಪಿಸಿಕೊಳ್ಳಲು ಮೂರು ಮತಗಳ ಬೆಂಬಲ ಸಿಗಬೇಕು.
ಗ್ರೇ ಪಟ್ಟಿಯಿಂದ ತಪ್ಪಿಸಿಕೊಳ್ಳಲು 15 ಮತಗಳು ಬೇಕೇಬೇಕು. ಹೀಗಾಗಿ, ಪಾಕಿಸ್ಥಾನ ಕಪ್ಪು ಪಟ್ಟಿಯಿಂದ ತಪ್ಪಿಸಿಕೊಂಡರೂ ಗ್ರೇ ಪಟ್ಟಿಯಲ್ಲಂತೂ ಮುಂದುವರಿಯಲಿದೆ.
Advertisement
ಮಲೇಷ್ಯಾ, ಟರ್ಕಿ, ಚೀನ ಬೆನ್ನತ್ತಿಕಳೆದ ವರ್ಷವೇ ಪಾಕ್ ಕಪ್ಪು ಪಟ್ಟಿಗೆ ಸೇರಬೇಕಿತ್ತು. ಆದರೆ ಬಹುಕಾಲದ ಮಿತ್ರ ರಾಷ್ಟ್ರಗಳಾದ ಚೀನ, ಮಲೇಷ್ಯಾ, ಟರ್ಕಿ, ಸೌದಿಯ ಪ್ರಯತ್ನದಿಂದಾಗಿ ಅದು ಬಚಾವಾಗಿತ್ತು. ಕಳೆದೊಂದು ತಿಂಗಳಲ್ಲಿ ಪಾಕಿಸ್ಥಾನದ ಪ್ರಧಾನಿ ಇಮ್ರಾನ್ ಮಲೇಷ್ಯಾ ಪ್ರವಾಸಕೈಗೊಂಡದ್ದು, ಟರ್ಕಿಯ ಅಧ್ಯಕ್ಷ ಎಡೋìಗನ್ ಪಾಕಿಸ್ಥಾನದ ಪ್ರವಾಸ ಕೈಗೊಂಡಿರುವುದು, ಚೀನದ ರಾಯಭಾರಿಗಳು-ಪಾಕ್ ರಾಯಭಾರಿಗಳ ನಡುವೆ ಜೋರು ಮಾತುಕತೆ ನಡೆದಿದೆ. ಇತ್ತೀಚೆಗೆ ಸೌದಿ ದೊರೆಯನ್ನೂ ಇಮ್ರಾನ್ ಭೇಟಿಯಾಗಿದ್ದರು. ಈ ಬಾರಿಯೂ ಈ ರಾಷ್ಟ್ರಗಳೆಲ್ಲ ಪಾಕ್‌ಗೆ ಬೆಂಬಲ ನೀಡುವ ಸಾಧ್ಯತೆ ಇದೆ.
***
ಎಫ್ಎಟಿಎಫ್ ಕಪ್ಪು ಪಟ್ಟಿಯಲ್ಲಿರುವ ಪ್ರಮುಖ ರಾಷ್ಟ್ರಗಳೆಂದರೆ ಉತ್ತರ ಕೊರಿಯಾ ಹಾಗೂ ಇರಾನ್.
ಉತ್ತರ ಕೊರಿಯಾ: ಕಿಂ ಜಾಂಗ್ ಉನ್‌ರ ಈ ಏಷ್ಯನ್ ರಾಷ್ಟ್ರ ಅಂತಾರಾಷ್ಟ್ರೀಯ ಸಹಕಾರ, ಸಹಾಯಗಳಿಂದ ವಂಚಿತವಾಗಿದೆ.
ಇರಾನ್: ಆದಾಗ್ಯೂ ಇರಾನ್ ಜಾಗತಿಕ ಶಕ್ತಿಗಳೊಂದಿಗೆ 2015ರಲ್ಲೇ ಪರಮಾಣು ಒಪ್ಪಂದ ಮಾಡಿಕೊಂಡಿತಾದರೂ, ಅದಕ್ಕಿಂತ 7 ವರ್ಷಗಳ ಹಿಂದೆಯೇ, ಅಂದರೆ 2008ರಿಂದಲೇ ಅದು ಕಪ್ಪು ಪಟ್ಟಿಯಲ್ಲಿ ಇದೆ. ಪಾಕ್ ಕಪ್ಪು ಪಟ್ಟಿಗೆ ಸೇರಿದರೆ ಏನೆಲ್ಲ ಸಂಕಷ್ಟ?
1. ಅಂತಾರಾಷ್ಟ್ರೀಯ ಹಣಕಾಸು ನಿಧಿ, ವಿಶ್ವ ಬ್ಯಾಂಕ್, ಏಷ್ಯನ್ ಡೆವಲಪ್ ಮೆಂಟ್ ಬ್ಯಾಂಕ್‌ನಂಥ ಅಂತಾರಾಷ್ಟ್ರೀಯ ಸಂಸ್ಥೆಗಳಿಂದ, ಐರೋಪ್ಯ ಒಕ್ಕೂಟ ಹಾಗೂ ವಿವಿಧ ದೇಶಗಳಿಂದ ಸಹಾಯ ಸಿಗುವುದು ಬಹಳವೇ ಕಷ್ಟವಾಗುತ್ತದೆ. ಈಗಿನಂತೆ ಯಾವ ರಾಷ್ಟ್ರಕ್ಕೂ ಕೂಡ ಪಾಕಿಸ್ಥಾನಕ್ಕೆ ಮುಕ್ತವಾಗಿ ಸಾಲ ಕೊಡುವುದಕ್ಕೆ ಅಥವಾ ಹೂಡಿಕೆ ಮಾಡುವುದಕ್ಕೆ ಸಾಧ್ಯವಾಗುವುದಿಲ್ಲ. ಮಾಡಿದರೂ ಹಿಂಬಾಗಿಲಿನ ಮೂಲಕ ಮಾಡಬೇಕಷ್ಟೆ! 2. ರಾಷ್ಟ್ರವೊಂದು ಎಫ್ಎಟಿಎಫ್ನ ಕಪ್ಪು ಪಟ್ಟಿಗೆ ಸೇರಿತೆಂದರೆ, ಉದ್ಯಮಗಳಿಗೆ ಆ ರಾಷ್ಟ್ರದೊಂದಿಗೆ ವ್ಯವಹರಿಸುವುದು ಅಪಾಯಕಾರಿಯಾಗುತ್ತದೆ. ಉದಾಹರಣೆಗೆ, ಕಂಪನಿಯೊಂದು ಕಪ್ಪು ಪಟ್ಟಿಯಲ್ಲಿರುವ ದೇಶಕ್ಕೆ ಹಣ ಕಳುಹಿಸಲು ಅಥವಾ ಅಲ್ಲಿಂದ ಹಣ ಪಡೆಯಲು ಪ್ರಯತ್ನಿಸಿದರೆ, ಈ ಪ್ರಯತ್ನ ವಿಫಲವಾಗಬಹುದು. ಏಕೆಂದರೆ, ಹಣವನ್ನು ಕಳುಹಿಸುವ ಬ್ಯಾಂಕು, ಈ ವ್ಯವಹಾರವನ್ನು ರದ್ದುಪಡಿಸುವ ಸಾಧ್ಯತೆ ಅಧಿಕ. ಒಂದು ವೇಳೆ, ಅಂಥ ವ್ಯವಹಾರ ನಡೆದರೆ, ಸಂಬಂಧಿಸಿದ ಬ್ಯಾಂಕ್ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಭಾರೀ ಮೊತ್ತದ ದಂಡ, ನಿರ್ಬಂಧ ಎದುರಿಸುವುದಷ್ಟೇ ಅಲ್ಲದೆ ನಿರ್ವಾಹಕರು ಜೈಲು ಕೂಡ ಸೇರಬೇಕಾಗುತ್ತದೆ. ಉದಾಹರಣೆಗೆ, ಇರಾನ್ ಎಫ್ಎಟಿಎಫ್ನ ಕಪ್ಪು ಪಟ್ಟಿಯಲ್ಲಿದೆ. ಈ ರಾಷ್ಟ್ರದೊಂದಿಗೆ ರಹಸ್ಯವಾಗಿ ವ್ಯವಹರಿಸಿದ್ದಕ್ಕಾಗಿ ಚೀನ ಮೂಲದ ಹುವಾಯಿ ಕಂಪೆನಿಯ ಸ್ಥಾಪಕನ ಮಗಳಾದ ಮೆಂಗ್ ವ್ಯಾಂಗ್ ಝೋ ಬಂಧನಕ್ಕೊಳಗಾದರು…ಈಗಲೂ ಅಮೆರಿಕದಲ್ಲಿ ಅವರ ವಿರುದ್ಧ ಕೇಸು ನಡೆಯುತ್ತಿದೆ. 3.ಅಂತಾರಾಷ್ಟ್ರೀಯ ವ್ಯಾಪಾರ ಕಡಿಮೆಯಾಗುತ್ತದೆ. ಸಾಮಾನ್ಯವಾಗಿ ಕಪ್ಪು ಪಟ್ಟಿಯಲ್ಲಿರುವ ರಾಷ್ಟ್ರಗಳ ಜತೆ ವ್ಯಾಪಾರ ನಡೆಸಲು ಅನ್ಯರಾಷ್ಟ್ರಗಳು ಹಿಂಜರಿಯುತ್ತವೆ. 4. ಎನ್‌ಜಿಒಗಳಿಗೆ ದೇಣಿಗೆ ಪಡೆಯಲು ಕಷ್ಟವಾಗುತ್ತದೆ. ಪಾಕಿಸ್ಥಾನದಂಥ ರಾಷ್ಟ್ರಗಳ ಎನ್‌ಜಿಒಗಳಿಗೆ ವಿದೇಶಗಳಿಂದ ಹರಿದುಬರುವ ಹಣ ಉಗ್ರವಾದಕ್ಕೆ ಬಳಕೆಯಾಗುತ್ತಿದೆ ಎಂಬ ಆರೋಪವಿದೆ. ಸಮಾಜ ಸೇವೆಯ ಪೋಷಾಕಿನಲ್ಲಿ ವಿದೇಶಗಳಿಂದ ಭಾರೀ ಪ್ರಮಾಣದಲ್ಲಿ ಹಣ ಸಂಗ್ರಹಿಸುವ ಈ ರೀತಿಯ ಎನ್‌ಜಿಒಗಳು ಉತ್ತರದಾಯಿತ್ವದಿಂದ ತಪ್ಪಿಸಿಕೊಂಡು ಬಿಡುತ್ತವೆ. ಹೀಗಾಗಿ, ಒಂದು ದೇಶ ಕಪ್ಪು ಪಟ್ಟಿಗೆ ಸಿಲುಕಿತೆಂದರೆ, ಸಹಜವಾಗಿಯೇ, ಅಲ್ಲಿ ಉಗ್ರವಾದಕ್ಕೆ ಹರಿಯುವ ಹಣಕ್ಕೂ ಬಹಳ ದೊಡ್ಡಪೆಟ್ಟು ಬೀಳುತ್ತದೆ. 5. ಸೌದಿ ಮೇಲೆ ಭಾರತದ ಗಮನ!
ಪಾಕಿಸ್ಥಾನವನ್ನು ಕಪ್ಪು ಪಟ್ಟಿಯಿಂದ ಬಚಾವು ಮಾಡಲು ಮೂರು ರಾಷ್ಟ್ರಗಳ ಓಟು ಸಾಕು. ಮಲೇಷ್ಯಾ, ಟರ್ಕಿ, ಚೀನ ಮತ್ತು ಸೌದಿ ಮೊದಲಿನಿಂದಲೂ ಎಫ್ಎಟಿಎಫ್ನಲ್ಲಿ ಪಾಕಿಸ್ಥಾನವನ್ನು ಬಚಾವು ಮಾಡುತ್ತಾ ಬಂದಿವೆ. ಗಮನಾರ್ಹ ಸಂಗತಿಯೆಂದರೆ, ಕಾಶ್ಮೀರದ ವಿಚಾರ ಬಂದಾಗ ಮಾತ್ರ ಮೊದಲ ಮೂರೂ ರಾಷ್ಟ್ರಗಳು ಪಾಕಿಸ್ಥಾನದ ಪರ ಮಾತನಾಡಿದರೆ, ಸೌದಿ ಭಾರತದ ಪರ ನಿಲ್ಲುತ್ತದೆ. ಇದಕ್ಕೆ ಕಾರಣ ಕೆಲವು ವರ್ಷಗಳಿಂದ ಸೌದಿ ಮತ್ತು ಭಾರತದ ದೋಸ್ತಿ ಸದೃಢವಾಗುತ್ತಾ ಸಾಗುತ್ತಿರುವುದು. ಹೀಗಿದ್ದರೂ ಸೌದಿಗೆ ಪಾಕಿಸ್ಥಾನವನ್ನು ಕಪ್ಪುಪಟ್ಟಿಯಿಂದ ಬಚಾವು ಮಾಡುವುದು ಅನಿವಾರ್ಯವಾಗಿದೆ. ಏಕೆಂದರೆ, ಅದು ಪಾಕಿಸ್ಥಾನದಲ್ಲಿ ಸಾವಿರಾರು ಕೋಟಿ ರೂಪಾಯಿ ಹೂಡಿಕೆ ಮಾಡಿದೆ, ಅಷ್ಟೇ ಪ್ರಮಾಣದಲ್ಲಿ ಸಾಲವನ್ನೂ ನೀಡಿದೆ. ಒಮ್ಮೆ ಪಾಕಿಸ್ಥಾನವೇನಾದರೂ ಕಪ್ಪು ಪಟ್ಟಿಗೆ ಸಿಲುಕಿತೆಂದರೆ, ಈ ಹಣ ಸೌದಿಯ ಕೈ ಜಾರುವ ಅಪಾಯ ಹೆಚ್ಚು. ಒಂದರ್ಥದಲ್ಲಿ ಸೌದಿ ನಡೆ ಭಾರತಕ್ಕೆ ನುಂಗಲಾರದ ತುತ್ತಾದರೂ, ಭಾರತ ಸೌದಿಯ ಪರಿಸ್ಥಿತಿಯನ್ನೂ ಅರ್ಥಮಾಡಿಕೊಂಡಿದೆ. ಸೌದಿ ಅಷ್ಟೇ ಅಲ್ಲದೆ, ಅಮೆರಿಕ ಕೂಡ ಈ ಬಾರಿ ಪಾಕಿಸ್ಥಾನದ ಪರ ನಿಲ್ಲಬಹುದು ಎಂಬ ಅನುಮಾನವೂ ಇದೆ. ಪಾಕಿಸ್ಥಾನ ಸಂಪೂರ್ಣವಾಗಿ ಚೀನದ ತೆಕ್ಕೆಗೆ ಜಾರುವುದು ಅಮೆರಿಕಕ್ಕೆ ಇಷ್ಟವಿಲ್ಲ. ಏಷ್ಯಾ ಖಂಡದಲ್ಲಿ ಅದಕ್ಕೆ ಪಾಕಿಸ್ಥಾನ ದಂಥ ರಾಷ್ಟ್ರ ಅತ್ಯಗತ್ಯ. ಹೀಗಾಗಿ, ಅಮೆರಿಕ ಪಾಕಿಸ್ಥಾನವನ್ನು ಬಚಾವು ಮಾಡುವುದಷ್ಟೇ ಅಲ್ಲ, ಅದನ್ನು ಗ್ರೇ ಪಟ್ಟಿಯಿಂದಲೇ ಹೊರತರುವ ಯೋಚನೆಯಲ್ಲಿದೆ ಎಂದೂ ಹೇಳಲಾಗುತ್ತದೆ. ಆದರೆ, ಈ ಪ್ರಯತ್ನಕ್ಕೆ ಅದಕ್ಕೆ ಬೆಂಬಲ ಸಿಗಲಾರದು.