ಇಸ್ಲಮಾಬಾದ್: ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಮಹಮದ್ ಅಲಿ ಗುಜ್ಜರ್ ಎಂಬ ದರ್ಗಾದಲ್ಲಿ 20 ಮಂದಿ ಭಕ್ತರನ್ನು ಮಾನಸಿಕ ಖಿನ್ನತೆಗೊಳಾಗಿದ್ದ ಮೇಲ್ವಿಚಾರಕ ಸಹಚರರೊಂದಿಗೆ ಸೇರಿ ಬರ್ಬರವಾಗಿ ಇರಿದು ಕೊಲೆಗೈದು ಮಾರಣ ಹೋಮ ನಡೆಸಿದ ಭೀಕರ ಘಟನೆ ಶನಿವಾರ ತಡರಾತ್ರಿ ನಡೆದಿದೆ.
ದರ್ಗಾಕ್ಕೆ ಬಂದವರಿಗೆ ಅಮಲು ಪದಾರ್ಥ ನೀಡಿ ಪ್ರಜ್ಞೆ ತಪ್ಪಿಸಿ, ಆ ಬಳಿಕ ಬಡಿಗೆಗಳಿಂದ ಬಡಿದು, ಚೂರಿಯಿಂದ ಬರ್ಬರವಾಗಿ ಇರಿದು ಕೊಲೆಗೈಯಲಾಗಿದೆ.
ಮೃತರಲ್ಲಿ ಒಂದೇ ಕುಟುಂಬದ ಆರು ಮಂದಿ ಸೇರಿದ್ದು, ಆ ಪೈಕಿ ಇಬ್ಬರು ಮಹಿಳೆಯರು ಎಂದು ತಿಳಿದು ಬಂದಿದೆ. ಘಟನೆಯಲ್ಲಿ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ದರ್ಗಾದಲ್ಲಿ ಮೇಲ್ವಿಚಾರಕರ 2 ಗಂಪುಗಳ ನಡುವೆ ಜಗಳ ನಡೆದು ಆ ಬಳಿಕ ಭಕ್ತರನ್ನು ಹತ್ಯೆಗೈಯಲಾಗಿದೆ ಎಂದು ಪ್ರತ್ಯಕ್ಷ ದರ್ಶಿಯಾಗಿರುವ ಗಾಯಾಳು ತಿಳಿಸಿದ್ದಾನೆ.
ಮಾನಸಿಕ ಖಿನ್ನತೆಯಿಂದ ಬಳಲುತ್ತಿರುವ ದರ್ಗಾ ಮೇಲ್ವಿಚಾರಕ ವಾಹೀದ್ ಎಂಬಾತ ಈ ಕೃತ್ಯ ನಡೆಸಿದ್ದಾನೆ ಎಂದು ಹೇಳಲಾಗಿದೆ.
ಈಗಾಗಲೇ ವಾಹಿದ್ ಸೇರಿ ಐವರು ಆರೋಪಿಗಳನ್ನು ವಶಕ್ಕೆ ಪಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.