ಜಮ್ಮು : ಪಾಕ್ ಸೇನೆ ಇಂದು ಬುಧವಾರ ಕೂಡ ಜಮ್ಮು ಕಾಶ್ಮೀರದ ರಾಜೋರಿ ಜಿಲ್ಲೆಯ ಎಲ್‌ಓಸಿಯಲ್ಲಿನ ಹೊರ ಠಾಣೆಗಳ ಮೇಲೆ ಬೇಕಾಬಿಟ್ಟಿ ಗುಂಡಿನ ದಾಳಿ ನಡೆಸಿ ಕದನ ವಿರಾಮ ಉಲ್ಲಂಘನೆ ಮಾಡಿದೆ.
ಪಾಕ್ ಸೇನೆಯ ಈ ಗುಂಡಿನ ದಾಳಿಗೆ ಭಾರತೀಯ ಸೈನಿಕರು ಅತ್ಯಂತ ಪರಿಣಾಮಕಾರಿಯಾದ ರೀತಿಯಲ್ಲಿ ಮರು ಗುಂಡಿನ ದಾಳಿ ನಡೆಸಿದ್ದಾರೆ.
ನೌಶೇರಾ ವಲಯದಲ್ಲಿ ಇಂದು ಬೆಳಗ್ಗೆ ಉಭಯ ಪಡೆಗಳು ಸುಮಾರು ನಾಲ್ಕು ತಾಸುಗಳ ಕಾಲ ಗುಂಡಿನ ವಿನಿಮಯ ಮಾಡಿಕೊಂಡವು. ಆದರೆ ಯಾವುದೇ ಸಾವು ನೋವು ಸಂಭವಿಸಿದ ವರದಿಗಳಿಲ್ಲ.
ಪಾಕ್ ಸೇನೆ ಸಣ್ಣ ಶಸ್ತ್ರಾಸ್ತ್ರಗಳು, ಆಟೋಮ್ಯಾಟಿಕ್ ಗನ್‌ಗಳು ಮತ್ತು ಮೊಆರ್ಟಾರಗಳನ್ನು ಬಳಸಿಕೊಂಡು ಬೆಳಗ್ಗೆ ಸುಮಾರು 8.15ರ ಹೊತ್ತಿಗೆ ಅಪ್ರಚೋದಿತವಾಗಿ ಗುಂಡಿನ ದಾಳಿ ಆರಂಭಿಸಿತು. ಭಾರತೀಯ ಸೈನಿಕರು ಇದಕ್ಕೆ ತಕ್ಕುದಾದ ಉತ್ತರವನ್ನೇ ನೀಡಿದರು. ಮಧ್ಯಾಹ್ನ ಸುಮಾರು 12 ಗಂಟೆಗೆ ಪಾಕ್ ಗುಂಡಿನ ದಾಳಿ ನಿಂತಿತು ಎಂದು ಭಾರತೀಯ ಸೇನಾ ವಕ್ತಾರ ತಿಳಿಸಿದ್ದಾರೆ.
ಐದು ದಿನಗಳ ಹಿಂದೆ ಪಾಕ್ ಸೇನೆ ಡಿ.23ರಂದು ಜಮ್ಮು ಕಾಶ್ಮೀರದ ರಾಜೋರಿ ಜಿಲ್ಲೆಯ ಕೇರಿ ವಲಯದಲ್ಲಿ ಕದನ ವಿರಾಮ ಉಲ್ಲಂಘನೆ ಗೈದು ನಡೆಸಿದ್ದ ಗುಂಡಿನ ದಾಳಿಗೆ ಭಾರತದ ಓರ್ವ ಸೇನಾ ಮೇಜರ್ ಸೇರಿದಂತೆ ಒಟ್ಟು ನಾಲ್ವರು ಯೋಧರು ಹುತಾತ್ಮರಾಗಿದ್ದರು. ಇದಕ್ಕೆ ಸೇಡು ತೀರಿಸಿಕೊಳ್ಳಲು ಭಾರತೀಯ ಸೇನೆ ಎಲ್‌ಓಸಿ ದಾಟಿ ಸರ್ಜಿಕಲ್ ದಾಳಿ ನಡೆಸಿ ಮೂವರು ಪಾಕ್ ಸೈನಿಕರನ್ನು ಕೊಂದು ಇತರ ಹಲವು ಸೈನಿಕರನ್ನು ಗಾಯಗೊಳಿಸಿತ್ತು.