ಕರಾಚಿ: ಶಸ್ತ್ರ ಸಜ್ಜಿತ ಬಲೂಚಿ ಉಗ್ರಗಾಮಿಗಳು ಪಾಕಿಸ್ತಾನದ ಬಲೂಚಿಸ್ತಾನ್ ಪ್ರಾಂತ್ಯದ ನೌಕಾ ವಾಯುನೆಲೆ ಒಳಗೆ ನುಸುಳಲು ಯತ್ನಿಸಿದ್ದು, ಈ ಸಂದರ್ಭದಲ್ಲಿ ಪಾಕ್ ಭದ್ರತಾ ಪಡೆ ಸಂಭಾವ್ಯ ದಾಳಿಯನ್ನು ವಿಫಲಗೊಳಿಸಿದ್ದು, ಆರು ಮಂದಿ ಉಗ್ರರನ್ನು ಹತ್ಯೆಗೈದಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಚಿಕ್ಕಮಗಳೂರು: ದೇಶಕ್ಕೆ ಒಳ್ಳೆಯದಾಗಬೇಕು, ರೈತರಿಗೆ ಒಳ್ಳೆಯದಾಗಬೇಕು ಕಣಪ್ಪ ಅಷ್ಟೆ …
ಜನನಿಬಿಡ ಟುರ್ಬುಲೆಂಟ್ ಜಿಲ್ಲೆಯ ಟುರ್ಬಾಟ್ ಪ್ರದೇಶದಲ್ಲಿ ಸೋಮವಾರ ತಡರಾತ್ರಿ ಈ ಘಟನೆ ನಡೆದಿದೆ. ಶಸ್ತ್ರ ಸಜ್ಜಿತ ಉಗ್ರರ ದಾಳಿಯನ್ನು ಭದ್ರತಾ ಪಡೆಗಳು ವಿಫಲಗೊಳಿಸಿರುವುದಾಗಿ ಮಕ್ರಾನ್ ಕಮಿಷನರ್ ಸಯೀದ್ ಅಹ್ಮದ್ ಉಮ್ರಾಣಿ ಸುದ್ದಿಗಾರರ ಜತೆ ಮಾತನಾಡುತ್ತ ತಿಳಿಸಿದ್ದಾರೆ.
ವೈಮಾನಿಕ ನೆಲೆಯ ಗಡಿಯ ಮೂರು ಕಡೆಗಳಿಂದಲೂ ಉಗ್ರರು ದಾಳಿ ನಡೆಸಿದ್ದು, ಈ ಸಂದರ್ಭದಲ್ಲಿ ಭದ್ರತಾ ಪಡೆ ಪ್ರತಿದಾಳಿ ನಡೆಸುವ ಮೂಲಕ ನುಸುಳುಕೋರರ ದಾಳಿಯನ್ನು ವಿಫಲಗೊಳಿಸಿರುವುದಾಗಿ ತಿಳಿಸಿದರು.
ಇಡೀ ರಾತ್ರಿ ಗುಂಡಿನ ದಾಳಿ ಮತ್ತು ಸ್ಫೋಟದ ಶಬ್ದ ಕೇಳಿಸುತ್ತಲೇ ಇತ್ತು ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ. ಕಾರ್ಯಾಚರಣೆಯಲ್ಲಿ ಆರು ಮಂದಿ ಉಗ್ರರು ಸಾವನ್ನಪ್ಪಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ನಿಷೇಧಿತ ಬಲೂಚಿಸ್ತಾನ್ ಲಿಬರೇಶನ್ ಆರ್ಮಿ ದಾಳಿಯ ಹೊಣೆ ಹೊತ್ತುಕೊಂಡಿದೆ.