ಇಸ್ಲಾಮಾಬಾದ್ : ”ಭಾರತ, ಗಡಿ ನಿಯಂತ್ರಣ ರೇಖೆಯ ಉಲ್ಲಂಘನೆಗೈದು ಪಾಕಿಸ್ಥಾನದ ಮೇಲೆ ಆಕ್ರಮಣ ನಡೆಸಿದೆ; ಇದಕ್ಕೆ ತಕ್ಕುದಾದ ಉತ್ತರ ನೀಡುವ ಹಕ್ಕು ಇಸ್ಲಾಮಾಬಾದ್ ಗೆ ಇದೆ” ಎಂದು ಪಾಕ್ ವಿದೇಶ ಸಚಿವ ಶಾ ಮಹಮೂದ್ ಕುರೇಶಿ ಗುಡುಗಿದ್ದಾರೆ.
ಪಾಕ್ ವಿದೇಶ ಸಚಿವ ಕುರೇಶಿ ಅವರು ತಮ್ಮ ಇಲಾಖೆಯ ಉನ್ನತ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಪತ್ರಕರ್ತರೊಂದಿಗೆ ಮಾತನಾಡುತ್ತಾ, ‘ಭಾರತ ಎಲ್‌ಓಸಿ ಉಲ್ಲಂಘನೆ ಗೈದು ಪಾಕಿಸ್ಥಾನದ ಮೇಲೆ ಆಕ್ರಮಣ ನಡೆಸಿದೆ. ಆದುದರಿಂದ ಈ ಆಕ್ರಮಣಕ್ಕೆ ಅತ್ಯಂತ ಪರಿಣಾಮಕಾರಿ ಉತ್ತರ ನೀಡುವ ಹಕ್ಕು ಪಾಕಿಸ್ಥಾನಕ್ಕೆ ಇದೆ ಮತ್ತು ಇದು ಆತ್ಮರಕ್ಷಣೆಗಾಗಿ ನಡೆಸುವ ಪ್ರತಿ ದಾಳಿಯಾಗಲಿದೆ’ ಎಂದು ಹೇಳಿದರು.
ಭಾರತೀಯ ವಾಯು ಪಡೆ ಇಂದು ಮಂಗಳವಾರ ನಸುಕಿನ ವೇಳೆ ಪಾಕ್ ಎಲ್‌ಓಸಿ ದಾಟಿ ಮುನ್ನುಗ್ಗಿ ಪಾಕಿಸ್ಥಾನದ ವಿವಿಧೆಡೆಗಳಲ್ಲಿನ ಉಗ್ರ ಶಿಬಿರಗಳ ಮೇಲೆ ಒಂದು ಸಾವಿರ ಕಿಲೋ ಸಾಮರ್ಥ್ಯದ ಬಾಂಬುಗಳನ್ನು ಎಸೆದು 300ಕ್ಕೂ ಅಧಿಕ ಜೈಶ್ ಉಗ್ರರು ಮತ್ತು ಅವರ ನಾಯಕರನ್ನು ಬಲಿಪಡೆದು ಅನೇಕ ಉಗ್ರ ಶಿಬಿರಗಳನ್ನು ನಾಶಪಡಿಸಿದೆ.
ಇದರ ಬೆನ್ನಿಗೇ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅಧ್ಯಕ್ಷತೆಯಲ್ಲಿ ಅತ್ಯಂತ ತುರ್ತಿನ ಬಹು ಮುಖ್ಯ ಸಭೆ ನಡೆದಿದ್ದು ಪರಿಸ್ಥಿತಿಯನ್ನು ನಿಭಾಯಿಸುವ ಮಾರ್ಗೋಪಾಯಗಳನ್ನು ಚರ್ಚಿಸಲಾಗಿದೆ.
ಪುಲ್ವಾಮಾ ಉಗ್ರ ದಾಳಿ ನಡೆದ 12 ದಿನಗಳ ಬಳಿಕ ಭಾರತ ಇಂದು ಪಾಕ್ ಮೇಲೆ ವೈಮಾನಿಕ ದಾಳಿ ನಡೆಸಿದೆ.