ಇಸ್ಲಾಮಾಬಾದ್/ನವದೆಹಲಿ: ಭಾರತದ ವಿರುದ್ಧ ಸದಾ ಕಾಲು ಕೆದರಿಕೊಂಡು ಜಗಳಕ್ಕೆ ಬರುವ ಪಾಕಿಸ್ತಾನ ಈಗ ಹೊಸ ರಾಗ ಹಾಡಿದೆ. ಇಸ್ಲಾಮಾಬಾದ್‌ನಲ್ಲಿ ಭಾರತೀಯ ಹೈಕಮಿಷನ್ ಸಿಬ್ಬಂದಿಗೆ ನೀರು ಮತ್ತು ವಿದ್ಯುತ್ ಪೂರೈಕೆ ಸ್ಥಗಿತ ಮಾಡಿದ್ದ ನೆರೆಯ ದೇಶ ಈಗ ಭಾರತವೇ ತನ್ನ ಹೈಕಮಿಷನರ್ ಕಚೇರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಿದೆ. ಜತೆಗೆ ಹೈಕಮಿಷನರ್ ಸೊಹೈಲ್ ಮೊಹಮ್ಮದ್‌ರನ್ನು ಹಿಂದಕ್ಕೆ ಕರೆಯಿಸಿಕೊಂಡಿದೆ. ಆದರೆ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ವಿದೇಶಾಂಗ ಇಲಾಖೆ ಹೈಕಮಿಷನರ್ ಅವರ ದೇಶಕ್ಕೆ ತೆರಳುವುದು ಸಾಮಾನ್ಯ ಪ್ರಕ್ರಿಯೆ ಎಂದು ಹೇಳಿದೆ.
ಈ ಬಗ್ಗೆ ಮಾತನಾಡಿರುವ ಪಾಕ್ ವಿದೇಶಾಂಗ ಇಲಾಖೆ ವಕ್ತಾರ ಮೊಹಮ್ಮದ್ ಫೈಸಲ್ ಭಾರತ ಸರ್ಕಾರ ಉದ್ದೇಶ ಪೂರ್ವಕವಾಗಿಯೇ ಇಂಥ ಕ್ರಮಗಳನ್ನು ಎಸಗುತ್ತಿದೆ ಎಂದು ಟೀಕಿಸಿದ್ದಾರೆ. ಮಂಗಳವಾರ ಭಾರತೀಯ ಉಪ ಹೈಕಮಿಷನರ್ ಜೆ.ಪಿ.ಸಿಂಗ್ ಅವರನ್ನು ಕರೆಯಿಸಿಕೊಂಡು ಪ್ರತಿಭಟನೆ ವ್ಯಕ್ತಪಡಿಸಲಾಗಿತ್ತು. ನವದೆಹಲಿಯಲ್ಲಿ ವಿದೇಶಾಂಗ ಇಲಾಖೆಗೆ ಈ ಬಗ್ಗೆ ಫೋಟೋಗಳನ್ನು ತೋರಿಸಿ ಪರಿಸ್ಥಿತಿ ವಿವರಿಸಲಾಗಿತ್ತು ಎಂದು ಹೇಳಿದ್ದಾರೆ. ಭಾರತ ಇಂಥ ಕ್ರಮ ಕೈಗೊಳ್ಳುವ ಮೂಲಕ ರಾಜತಾಂತ್ರಿಕರ ರಕ್ಷಣೆ ಬಗ್ಗೆ ಇರುವ ವಿಯೆನ್ನಾ ಒಪ್ಪಂದವನ್ನು ಉಲ್ಲಂ ಸಿದೆ ಎಂದು ಅವರು ದೂರಿದ್ದಾರೆ. ಇತ್ತೀಚೆಗಷ್ಟೇ ಭಾರತದ ಅಧಿಕಾರಿಗಳು ಪಾಕಿಸ್ತಾನದ ಹೈಕಮಿಷನ್‌ನ ಹಿರಿಯ ಅಧಿಕಾರಿಯೊಬ್ಬರ ಕಾರನ್ನು 40 ನಿಮಿಷಗಳ ಕಾಲ ತಪಾಸಣೆಯ ನೆಪದಲ್ಲಿ ತಡೆದು ನಿಲ್ಲಿಸಿದ್ದು ಇದಕ್ಕೆ ಉದಾಹರಣೆ ಎಂದಿದ್ದಾರೆ.
ಸಾಮಾನ್ಯ ಪ್ರಕ್ರಿಯೆ: ಪಾಕ್ ಹೈಕಮಿಷನರ್ ಸೊಹೈಲ್ ಸ್ವದೇಶಕ್ಕೆ ತೆರಳಿರುವುದರ ಬಗ್ಗೆ ಕೇಂದ್ರ ಸರ್ಕಾರ ಹೆಚ್ಚಿನ ಸೊಪ್ಪು ಹಾಕಿಲ್ಲ. ಅದೊಂದು ಸಾಮಾನ್ಯ ಪ್ರಕ್ರಿಯೆ ಎಂದು ಹೇಳಿದೆ. ಬೆಳವಣಿಗೆ ಬಗ್ಗೆ ಮಾತನಾಡಿದ ವಿದೇಶಾಂಗ ಇಲಾಖೆ ವಕ್ತಾರ ರವೀಶ್ ಕುಮಾರ್ ಇದೊಂದು ಸಾಮಾನ್ಯ ಪ್ರಕ್ರಿಯೆ ಎಂದು ಹೇಳಿದ್ದಾರೆ. ಇಸ್ಲಾಮಾಬಾದ್‌ನಲ್ಲಿರುವ ಭಾರತದ ಹೈಕಮಿಷನ್ ಕಚೇರಿಯ ಅಧಿಕಾರಿಗಳು ಮತ್ತು ಸಿಬ್ಬಂದಿ ಕೆಲವೊಂದು ವಿಚಾರಗಳಲ್ಲಿ ಸಮಸ್ಯೆ ಎದುರಿಸುತ್ತಿದ್ದಾರೆ. ಅವುಗಳ ಬಗ್ಗೆ ಇನ್ನೂ ಪರಿಹಾರ ಕಂಡುಕೊಳ್ಳಲಾಗಿಲ್ಲ ಎಂದು ಹೇಳಿದ್ದಾರೆ. ಈ ಬಗ್ಗೆ ಪಾಕಿಸ್ತಾನ ಸರ್ಕಾರದ ಗಮನ ಸೆಳೆಯಲಾಗಿದೆ ಎಂದಿದ್ದಾರೆ. ರಾಜತಾಂತ್ರಿಕ ಮಟ್ಟದಲ್ಲಿಯೂ ಅದನ್ನು ಪ್ರಸ್ತಾಪಿಸಲಾಗಿದೆ ಎಂದಿದ್ದಾರೆ. ಪಾಕಿಸ್ತಾನ ಸರ್ಕಾರದ ಬೆಳವಣಿಗೆಯಿಂದ ಅಚ್ಚರಿಯಾಗಿದೆ. ಈ ಬಗ್ಗೆ ವಿದೇಶಾಂಗ ಇಲಾಖೆಗೆ ಯಾಕೆ ಪ್ರಶ್ನೆ ಕೇಳಲಾಗುತ್ತದೆ ಎಂದು ಗೊತ್ತಾಗುತ್ತಿಲ್ಲ. ರಾಯಭಾರಿ ಅಥವಾ ಹೈಕಮಿಷನರ್ ತಮ್ಮ ರಾಷ್ಟ್ರಕ್ಕೆ ಹೋಗುವುದು ಸಾಮಾನ್ಯ ಪ್ರಕ್ರಿಯೆ ಎಂದರು.
ನವದೆಹಲಿಯಲ್ಲಿ ನಮ್ಮ ಹೈಕಮಿಷನ್ ಕಚೇರಿ ಸಿಬ್ಬಂದಿಗೆ ಕಿರುಕುಳ ನೀಡಲಾಗುತ್ತಿದೆ. ಈ ಬಗ್ಗೆ ಭಾರತದ ವಿದೇಶಾಂಗ ಇಲಾಖೆಯ ಗಮನ ಸೆಳೆದರೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ.
ಮೊಹಮ್ಮದ್ ಫೈಸಲ್, ಪಾಕ್ ವಿದೇಶಾಂಗ ಖಾತೆ ವಕ್ತಾರ
ಪಾಕಿಸ್ತಾನದ ಹೈಕಮಿಷನರ್ ತಮ್ಮ ದೇಶಕ್ಕೆ ತೆರಳಿರುವುದರಲ್ಲಿ ಯಾವುದೇ ಮಹತ್ವ ಇಲ್ಲ. ಆಯಾ ದೇಶದ ರಾಯಭಾರಿಗಳು ಅಥವಾ ಹೈಕಮಿಷನರ್ ಸ್ವದೇಶಕ್ಕೆ ತೆರಳುವುದು ಸಾಮಾನ್ಯ ಪ್ರಕ್ರಿಯೆ.
ರವೀಶ್ ಕುಮಾರ್, ಭಾರತದ ವಿದೇಶಾಂಗ ಇಲಾಖೆ ವಕ್ತಾರ