ನವದೆಹಲಿ: ಮುಂಬೈ ಮೇಲೆ 2008ರಲ್ಲಿ ದಾಳಿ ನಡೆಸಿದ ಪ್ರಕರಣದ ಸೂತ್ರಧಾರಿ ಲಷ್ಕರ್-ಎ-ತೊಯ್ಬಾ ಉಗ್ರ ಸಂಘಟನೆಯ ಸಾಜಿದ್ ಮಿರ್ ಎಂಬಾತನನ್ನು ಬಂಧಿಸಿ, ಜೈಲಿಗೆ ಕಳುಹಿಸಿದ ಸಂಗತಿ ಈಗ ಬೆಳಕಿಗೆ ಬಂದಿದೆ.
ಏ.21ರಂದು ಆತನನ್ನು ಬಂಧಿಸಿ, ಮೂರು ವಾರಗಳ ಒಳಗಾಗಿ ಆತನ ವಿರುದ್ಧದ ವಿಚಾರಣಾ ಪ್ರಕ್ರಿಯೆ ನಡೆಸಿ, ಲಾಹೋರ್‌ನ ಕೋಟ್ ಲಾಖ್‌ಪಟ್ ಜೈಲಿಗೆ ಕಳುಹಿಸಲಾಗಿದೆ. ಆತನಿಗೆ ಎಂಟು ವರ್ಷಗಳ ಕಾಲ ಕಠಿಣ ಜೈಲು ಶಿಕ್ಷೆ ವಿಧಿಸಲಾಗಿದೆ.
ಉಗ್ರ ಚಟುವಟಿಕೆಗಳಿಗೆ ಕುಮ್ಮಕ್ಕು ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಏಳು ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. ಜತೆಗೆ 4,20,000 ಪಾಕಿಸ್ತಾನ ರೂಪಾಯಿಗಳಲ್ಲಿ ದಂಡವನ್ನೂ ವಿಧಿಸಲಾಗಿದೆ.
ಹಿಂದಿನ ಹಲವು ಸಂದರ್ಭಗಳಲ್ಲಿ ಕೇಂದ್ರ ಸರ್ಕಾರ 26/11 ದಾಳಿಯ ಸೂತ್ರಧಾರರ ಬಗ್ಗೆ ಪಾಕಿಸ್ತಾನ ಸರ್ಕಾರಕ್ಕೆ ದಾಖಲೆಗಳ ಮೇಲೆ ದಾಖಲೆಗಳನ್ನು ಸಲ್ಲಿಸಿದ್ದರೂ, ಲಕ್ಷ್ಯ ಉಂಟಾಗಿರಲಿಲ್ಲ.
ಇತ್ತೀಚೆಗೆ ಮುಕ್ತಾಯಗೊಂಡ ಉಗ್ರರಿಗೆ ವಿತ್ತೀಯ ನೆರವಿನ ಮೇಲೆ ನಿಗಾ ಇರಿಸುವ ಕಾರ್ಯಪಡೆ (ಎಫ್ಎಟಿಎಫ್)ಯ ಸಭೆ ಮತ್ತು ಅಮೆರಿಕ ಮತ್ತು ಪಾಕಿಸ್ತಾನ ಸರ್ಕಾರಗಳ ನಡುವೆ ಸಮಾಲೋಚನೆ ನಡೆಯುವುದಕ್ಕೂ ಮುನ್ನವೇ ರಹಸ್ಯವಾಗಿ ಸಾಜಿದ್ ಮಿರ್‌ನನ್ನು ಬಂಧಿಸಿ, ಕಾನೂನು ಪ್ರಕ್ರಿಯೆ ಮುಕ್ತಾಯಗೊಳಿಸಲಾಗಿದೆ. ಉಗ್ರರ ವಿರುದ್ಧ ಕ್ರಮಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಒತ್ತಡ ಹೆಚ್ಚಿದ್ದರಿಂದ ಈ ಬೆಳವಣಿಗೆಯಾಗಿದೆ.
ಬಾಕಿ ಇದೆ:
ಮುಂಬೈ ದಾಳಿಯ ಯೋಜನೆ ರೂಪಿಸಿದ್ದಕ್ಕೆ, ಉಗ್ರರಾದ ಅಜ್ಮಲ್ ಕಸಬ್, ಡೇವಿಡ್ ಹೆಡ್ಲಿ ಮತ್ತಿತರರನ್ನು ನೇಮಕಗೊಳಿಸಿ, ಭಾರತಕ್ಕೆ ಕಳುಹಿಸಿದ ಆರೋಪಗಳ ಬಗ್ಗೆ ಇನ್ನಷ್ಟೇ ವಿಚಾರಣೆಯಾಗಬೇಕಾಗಿದೆ.
ಪ್ರತಿಕ್ರಿಯೆ ಇಲ್ಲ:
ಈ ಬಗ್ಗೆ ಪಾಕಿಸ್ತಾನ ಸರ್ಕಾರ ಅಧಿಕೃತ ಹೇಳಿಕೆ ನೀಡಿಲ್ಲ. ಹೀಗಾಗಿಯೇ, ಕೇಂದ್ರ ವಿದೇಶಾಂಗ ಸಚಿವಾಲಯ ಈ ಬಗ್ಗೆ ಪ್ರತಿಕ್ರಿಯೆ ನೀಡಿಲ್ಲ.