ಇಸ್ಲಾಮಾಬಾದ್: ಆಡಳಿತಾರೂಢ ಇಮ್ರಾನ್ ಖಾನ್ ನೇತೃತ್ವದ ಪಾಕಿಸ್ತಾನ್ ತೆಹ್ರೀಕ್ ಇ ಇನ್ಸಾಫ್ ಜತೆಗಿನ ಪ್ರಮುಖ ಮೈತ್ರಿ ಪಕ್ಷವಾದ ಮುತ್ತಾಹಿದಾ ಖ್ವಾಮಿ ಮೂವ್ ಮೆಂಟ್ ಪಾಕಿಸ್ತಾನ್ (ಎಂಕ್ಯೂಎಂ) ಮೈತ್ರಿಯನ್ನು ತೊರೆದು ವಿರೋಧ ಪಕ್ಷದೊಂದಿಗೆ ಕೈಜೋಡಿಸಿದ ಪರಿಣಾಮ ಇಮ್ರಾನ್ ಖಾನ್ ಪಿಟಿಐ ಬಹುಮತ ಕಳೆದುಕೊಂಡಂತಾಗಿದೆ.
ಇದನ್ನೂ ಓದಿ:ಮುಸ್ಲಿಮರ ಬಳಿ ಮಾಂಸ ಖರೀದಿ ಬೇಡ: ಚಿಕ್ಕಮಗಳೂರಿನಲ್ಲಿ ಹಲಾಲ್ ಬ್ಯಾನ್ ಅಭಿಯಾನ
ಈ ದಿಢೀರ್ ಬೆಳವಣಿಗೆಯಲ್ಲಿ ಸಂಸತ್ ನಲ್ಲಿ ಇಮ್ರಾನ್ ಖಾನ್ ಪಕ್ಷ ಬಹುಮತ ಕಳೆದುಕೊಂಡಿದ್ದು, ಇದೀಗ ಪಾಕಿಸ್ತಾನದ ವಿರೋಧ ಪಕ್ಷಗಳು 177 ಸದಸ್ಯ ಬಲವನ್ನು ಹೊಂದುವ ಮೂಲಕ ಅಧಿಕಾರದ ಗದ್ದುಗೆ ಹಿಡಿಯುವಂತಾಗಿದೆ ಎಂದು ವರದಿ ತಿಳಿಸಿದೆ.
ಪಾಕ್ ಪ್ರಧಾನಿ ಇಮ್ರಾನ್ ಖಾನ್ ವಿರುದ್ಧ ವಿರೋಧ ಪಕ್ಷಗಳು ಸಂಸತ್ ನಲ್ಲಿ ಅವಿಶ್ವಾಸ ನಿರ್ಣಯ ಮಂಡಿಸುವ ಮುನ್ನವೇ ಮಂಗಳವಾರ (ಮಾರ್ಚ್ 29) ತಡರಾತ್ರಿ ನಡೆದ ಬೆಳವಣಿಗೆಯಲ್ಲಿ ಪಿಟಿಐ ಪಕ್ಷದ ಜತೆಗಿನ ಮೈತ್ರಿಯಿಂದ ಎಂಕ್ಯೂಎಂ ಪಕ್ಷ ಹೊರಬಂದಿದ್ದು, ವಿರೋಧ ಪಕ್ಷಗಳ ಜತೆಗೆ ಒಪ್ಪಂದ ಮಾಡಿಕೊಂಡಿರುವುದಾಗಿ ಎಂಕ್ಯೂಎಂ(ಪಿ)ನ ಸೆನೆಟರ್ ಫೈಸಲ್ ಸಬ್ಝಾವರಿ ತಿಳಿಸಿದ್ದಾರೆ.
ಮುತ್ತಾಹಿದಾ ಖ್ವಾಮಿ ಮೂವ್ ಮೆಂಟ್ (ಪಾಕಿಸ್ತಾನ್) ಪಕ್ಷದ ಖಾಲಿದ್ ಮಕ್ಬೂಲ್ ಸಿದ್ಧಿಖಿ ನಿವಾಸಕ್ಕೆ ಪಾಕಿಸ್ತಾನ್ ಸಂಸತ್ ನ ವಿಪಕ್ಷ ನಾಯಕ ಪಾಕಿಸ್ತಾನ್ ಮುಸ್ಲಿಮ್ ಲೀಗ್ (ನವಾಜ್) ಅಧ್ಯಕ್ಷ ಶಬಾಝ್ ಶರೀಫ್, ಮಾಜಿ ಅಧ್ಯಕ್ಷ ಅಸಿಫ್ ಅಲಿ ಜರ್ದಾರಿ, ಪಾಕಿಸ್ತಾನ್ ಪೀಪಲ್ಸ್ ಪಕ್ಷದ ಅಧ್ಯಕ್ಷ ಬಿಲಾವಲ್ ಭುಟ್ಟೋ ಜರ್ದಾರಿ, ಪಾಕಿಸ್ತಾನ್ ಡೆಮೊಕ್ರಟಿಕ್ ಮೂವ್ ಮೆಂಟ್ ಅಧ್ಯಕ್ಷ ಮೌಲಾನಾ ಫಝ್ಲುರ್ ರೆಹಮಾನ್ ಭೇಟಿ ನೀಡಿ ಮಾತುಕತೆ ನಡೆಸಿರುವುದಾಗಿ ವರದಿ ತಿಳಿಸಿದೆ.
342 ಸದಸ್ಯ ಬಲದ ಪಾಕಿಸ್ತಾನ್ ನ್ಯಾಷನಲ್ ಅಸೆಂಬ್ಲಿಯಲ್ಲಿ ಅಧಿಕಾರದ ಗದ್ದುಗೆ ಏರಲು 172 ಸದಸ್ಯರ ಬೆಂಬಲದ ಅಗತ್ಯವಿದೆ. 179 ಸದಸ್ಯರ ಬೆಂಬಲದೊಂದಿಗೆ ಪಿಟಿಐ ನೇತೃತ್ವದ ಮೈತ್ರಿಕೂಟ ಸರ್ಕಾರ ರಚಿಸಿತ್ತು. ಆದರೆ ಈಗ ಎಂಕ್ಯೂಎಂ-ಪಿ ಮೈತ್ರಿ ತೊರೆದ ಪರಿಣಾಮ ಆಡಳಿತಾರೂಢ ಪಿಟಿಐ ಪಕ್ಷದ ಬಲ 164ಕ್ಕೆ ಇಳಿಕೆಯಾಗಿದೆ. ವಿರೋಧ ಪಕ್ಷಗಳ ಸದಸ್ಯರ ಬಲ 177ಕ್ಕೆ ಏರಿಕೆಯಾಗಿದೆ ಎಂದು ವರದಿ ಹೇಳಿದೆ.