ನವದೆಹಲಿ: ಬಾಲಕೋಟ್ ದಾಳಿ ನಂತರ, ಇದ್ದಕ್ಕಿದ್ದಂತೆ ಕಣ್ಮರೆಯಾಗಿದ್ದ ಪಾಕಿಸ್ತಾನ ನೌಕಾಪಡೆಯ ‘ಪಿಎನ್‌ಎಸ್ ಸಾದ್’ ಎಂಬ ಜಲಾಂತರ್ಗಾಮಿಗಾಗಿ (ಸಬ್‌ಮರೀನ್) ಭಾರತೀಯ ನೌಕಾಪಡೆ ಹಗಲಿರುಳೂ ಹುಡುಕಾಟ ನಡೆಸಿದ್ದ ಕುತೂಹಲಕಾರಿ ವಿದ್ಯಮಾನವೊಂದು ತಡವಾಗಿ ಬಹಿರಂಗಗೊಂಡಿದೆ.
ಬಾಲಕೋಟ್ ದಾಳಿಯ ನಂತರ, ಪಾಕಿಸ್ತಾನ ಭೂಮಿ, ವಾಯು ಅಥವಾ ಜಲ ಮಾರ್ಗಗಳ ಮೂಲಕ ಭಾರತದ ಮೇಲೆ ಯಾವುದೇ ಕ್ಷಣದಲ್ಲಿ ದಾಳಿ ಆಗಬಹುದು ಎಂದು ಭಾರತ ಮೊದಲೇ ಅಂದಾಜು ಮಾಡಿತ್ತು. ಬಾಲಕೋಟ್ ದಾಳಿ ಮರುದಿನವೇ ಪಾಕ್ ವಾಯುಪಡೆ, ಭಾರತದ ಮೇಲೆ ದಾಳಿ ನಡೆಸಲು ಆಗಮಿಸಿತ್ತು. ಹಾಗಾಗಿ, ಇಡೀ ಭಾರತವೇ ಅತ್ತ ದೃಷ್ಟಿ ನೆಟ್ಟಿದ್ದಾಗ, ಇತ್ತ ಭಾರತದ ಪಶ್ಚಿಮ ಕರಾವಳಿಯಿಂದ ಪಾಕಿಸ್ತಾನದವರೆಗಿನ ಅರಬ್ಬೀ ಸಮುದ್ರದಲ್ಲಿ ಪಾಕ್‌ಗಡಿಯೊಳಗಿದ್ದ ‘ಪಿಎನ್‌ಎಸ್ ಸಾದ್’ ಎಂಬ ಜಲಾಂತರ್ಗಾಮಿ ಇದ್ದಕ್ಕಿದ್ದಂತೆ ನಾಪತ್ತೆಯಾಗಿಬಿಟ್ಟಿದ್ದು,
‘ಸಾದ್’ ಇದ್ದ ಜಾಗದಿಂದ ಮಾಯವಾಗಿ ಸಮುದ್ರದ ತಳದಲ್ಲೇ ಚಲಿಸುತ್ತಾ ಬಂದರೆ ಮೂರು ದಿನದಲ್ಲಿ ಗುಜರಾತ್ ಕರಾವಳಿಯನ್ನು ಅಥವಾ ಐದು ದಿನದ ಹೊತ್ತಿಗೆ ಮುಂಬೈ ಬಂದರನ್ನು ತಲುಪಿ ಆ ಮೂಲಕ ಭಾರತದ ಮೇಲೆ ದಾಳಿ ನಡೆಸುವ ಅನುಮಾನ ಎದ್ದಿದ್ದವು. ಹಾಗಾಗಿ, ಅದನ್ನು ನಿಗ್ರಹಿಸಲು ಪಣ ತೊಟ್ಟಿದ್ದ ಐಎನ್‌ಎಸ್, ‘ಸಾದ್’ ಹುಡುಕಾಟಕ್ಕಾಗಿ ‘ಪಿ-8ಎಲ್’ ನೌಕೆಯನ್ನು ಸಾಗರಕ್ಕೆ ಇಳಿಸಿತು. ಒಂದು ವೇಳೆ ತನ್ನ ಕಣ್ಣು ತಪ್ಪಿಸಿ ‘ಸಾದ್’ ಭಾರತದ ಕಡೆಗೆ ಆಗಮಿಸಿದರೆ, ಅದನ್ನು ಧ್ವಂಸ ಮಾಡಲು ಆ್ಯಂಟಿ-ಸಬ್‌ಮೆರಿನ್‌ಗಳಾದ ಐಎನ್‌ಎಸ್ ಚಕ್ರ, ಸ್ಕಾರ್ಪಿಯನ್ ಶ್ರೇಣಿಯ ಐಎನ್‌ಎಸ್ ಕಾಲ್ವರಿ ಜಲಾಂತರ್ಗಾಮಿಗಳನ್ನು ಪಶ್ಚಿಮ ಕರಾವಳಿ ತೀರದಲ್ಲಿ ನಿಯೋಜಿಸಿತ್ತು. ರಾಷ್ಟ್ರವೊಂದರ ಜತೆಗೆ ನಡೆಯುತ್ತಿದ್ದ ಸಮರಾ ಭ್ಯಾಸವನ್ನೂ ಬಿಟ್ಟು ಶೋಧ ಕಾರ್ಯಕ್ಕೆ ಭಾರತದ ನೌಕಾಪಡೆ ಇಳಿದಿತ್ತು.
ಹೀಗೆ, 21 ದಿನಗಳ ನಿರಂತರ ಹುಡುಕಾಟದ ನಂತರ ಪಾಕಿಸ್ತಾನದ ಪಶ್ಚಿಮ ಕರಾವಳಿಡಿಯಲ್ಲಿ ಕೊನೆಗೂ ‘ಸಾದ್’ ಪತ್ತೆಯಾಯಿತು. ಆಗ ಎದ್ದಿದ್ದ ಭಾರತ-ಪಾಕ್ ನಡುವಿನ ಯುದ್ಧದ ಸನ್ನಿವೇಶ ನೋಡಿಕೊಂಡು ‘ಸಾದ್’ ಪ್ರಯೋಗಿಸುವ ಚಿಂತನೆ ನಡೆಸಿದ್ದ ಪಾಕಿಸ್ತಾನ ಅದನ್ನು ದಾಳಿಗೆ ಸಜ್ಜುಗೊಳಿಸುತ್ತಿತ್ತು ಎನ್ನಲಾಗಿದೆ.