ಇಸ್ಲಾಮಾಬಾದ್: ಪಾಕಿಸ್ತಾನದ ನ್ಯೂಸ್ ಚಾನೆಲ್ ಸ್ಟುಡಿಯೋದಲ್ಲಿ ರಾಜಕೀಯ ಚರ್ಚೆಯ ಲೈವ್ ಶೋನಲ್ಲಿ ಪಾಕಿಸ್ತಾನ ಮುಸ್ಲಿಮ್ ಲೀಗ್ ನವಾಜ್ (PML-N) ಮತ್ತು ಪಾಕಿಸ್ತಾನ್ ತೆಹ್ರೀಕ್ ಇ ಇನ್ಸಾಫ್ (PTI) ಪಕ್ಷದ ಮುಖಂಡರು ಮಾರಾಮಾರಿ ಹೊಡೆದಾಡಿಕೊಂಡಿದ್ದು, ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ:Hoshiarpur; ಕಿರಾಣಿ ಅಂಗಡಿಯೆದುರು ಶಿರೋಮಣಿ ಅಕಾಲಿ ದಳ ನಾಯಕನ ಗುಂಡಿಕ್ಕಿ ಹತ್ಯೆ
ಪಾಕಿಸ್ತಾನದ ಜನಪ್ರಿಯ ಎಕ್ಸ್ ಪ್ರೆಸ್ ಟಿವಿ ಚಾನೆಲ್ ನ ಪತ್ರಕರ್ತ ಜಾವೇದ್ ಚೌಧರಿಯ “ಕಲ್ ತಕ್” ರಾಜಕೀಯ ಸಂಬಂಧಿತ ಚರ್ಚೆಯ ಲೈವ್ ಶೋನಲ್ಲಿ ಇಮ್ರಾನ್ ಖಾನ್ ವಕೀಲ ಶೇರ್ ಅಫ್ಜಲ್ ಖಾನ್ ಮಾರ್ವಾತ್ ಹಾಗೂ ಪಿಎಂಎಲ್ -ಎನ್ ಸಂಸದ ಅಫ್ನಾನ್ ಉಲ್ಲಾ ಖಾನ್ ವಾಕ್ಸಮರ ಮಿತಿಮೀರಿ ಹೋದಾಗ ಇಬ್ಬರ ನಡುವೆ ಮಾರಾಮಾರಿ ನಡೆದಿರುವುದಾಗಿ ವರದಿ ವಿವರಿಸಿದೆ.
ಪಿಎಂಎಲ್-ಎನ್ ಸಂಸದ ಅಫ್ನಾನ್ ಖಾನ್ ಚರ್ಚೆಯ ವೇಳೆ ಪಿಟಿಐ ಅಧ್ಯಕ್ಷ ಇಮ್ರಾನ್ ಖಾನ್ ಹಿಂಬಾಗಿಲ ಮೂಲಕ ಮಿಲಿಟರಿ ಅಧಿಕಾರಿಗಳ ಜತೆ ಮಾತುಕತೆ ನಡೆಸಿ ಹಲವು ಭ್ರಷ್ಟಾಚಾರ ನಡೆಸಿರುವುದಾಗಿ ಆರೋಪಿಸಿದ್ದರು. ಇದರಿಂದ ಆಕ್ರೋಶಗೊಂಡ ಇಮ್ರಾನ್ ಪಕ್ಷದ ವಕೀಲ ಅಫ್ಜಲ್ ವೈಯಕ್ತಿಕವಾಗಿ ವಾಗ್ದಾಳಿ ನಡೆಸಲು ಆರಂಭಿಸಿದ್ದರು.
ಬಳಿಕ ಪಿಟಿಐ ಪಕ್ಷದ ಅಫ್ನಾನ್ ಕುರ್ಚಿಯಿಂದ ಎದ್ದು ಅಫ್ಜಲ್ ಗೆ ಹಿಗ್ಗಾಮುಗ್ಗಾ ಹೊಡೆಯುತ್ತಿರುವುದು, ಅದಕ್ಕೆ ಅಫ್ನಾನ್ ತಿರುಗಿ ಹೊಡೆಯುತ್ತಿರುವ ದೃಶ್ಯ ವೈರಲ್ ವಿಡಿಯೋದಲ್ಲಿ ಸೆರೆಯಾಗಿದೆ.
ಘಟನೆಯ ಬಳಿಕ ಇಬ್ಬರೂ ಮುಖಂಡರು ಸಾಮಾಜಿಕ ಜಾಲತಾಣದಲ್ಲಿ ತಮ್ಮನ್ನು ಸಮರ್ಥಿಸಿಕೊಂಡು ಪೋಸ್ಟ್ ಅನ್ನು ಶೇರ್ ಮಾಡಿದ್ದು, ಪಿಟಿಐ ಮುಖಂಡ ಇಮ್ರಾನ್ ಖಾನ್ ಬಗ್ಗೆ ಮಾರ್ವಾತ್ ಕೀಳುಮಟ್ಟದ ಶಬ್ದ ಬಳಸಿದ್ದರಿಂದ ಹೊಡೆದಿರುವುದಾಗಿ ಪಿಎಂಎಲ್ ಎನ್ ಸಂಸದ ಖಾನ್ ತನ್ನನ್ನು ಸಮರ್ಥಿಸಿಕೊಂಡಿದ್ದಾರೆ.
ಘಟನೆ ಬಗ್ಗೆ ಸಾರ್ವಜನಿಕವಾಗಿ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಪಾಕಿಸ್ತಾನಿ ಎಕ್ಸ್ ಪ್ರೆಸ್ ಟಿವಿಯ ಕಲ್ ತಕ್ ಕಾರ್ಯಕ್ರಮದ ಸಿಬಂದಿಗಳು ಹೊಡೆದಾಟವನ್ನು ತಪ್ಪಿಸಲು ವಿಫಲರಾಗಿರುವುದಕ್ಕೆ ಖಂಡನೆ ವ್ಯಕ್ತವಾಗಿರುವುದಾಗಿ ವರದಿ ತಿಳಿಸಿದೆ.