ಬ್ರಿಸ್ಟಲ್: ಬ್ರಿಸ್ಟಲ್‌ನಲ್ಲಿ ಎಡೆಬಿಡದೆ ಸುರಿದ ಭಾರೀ ಮಳೆಯಿಂದ ಶುಕ್ರವಾರದ ಬಹು ನಿರೀಕ್ಷೆಯ ಪಾಕಿಸ್ಥಾನ-ಶ್ರೀಲಂಕಾ ನಡುವಿನ ವಿಶ್ವಕಪ್ ಪಂದ್ಯ ಒಂದೂ ಎಸೆತ ಕಾಣದೆ ರದ್ದುಗೊಂಡಿದೆ. ಇದರಿಂದ ಎರಡೂ ತಂಡಗಳಿಗೆ ಒಂದೊಂದು ಅಂಕವನ್ನು ಹಂಚಲಾಯಿತು.
ಏಶ್ಯದ ಈ ಎರಡು ಪ್ರಮುಖ ತಂಡಗಳ ನಡುವಿನ ಪಂದ್ಯವನ್ನು ಕಾಣಲು ಕ್ರಿಕೆಟ್ ಜಗತ್ತು ಕಾತರದಿಂದ ಕಾಯುತ್ತಿತ್ತು. ಕಳೆದ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡನ್ನೇ ಬಗ್ಗುಬಡಿದ ಪಾಕಿಸ್ಥಾನವಂತೂ ಇನ್ನೊಂದು ಜಯದ ನಿರೀಕ್ಷೆಯಲ್ಲಿತ್ತು. ಈವರೆಗೆ ವಿಶ್ವಕಪ್‌ನಲ್ಲಿ ಲಂಕಾ ವಿರುದ್ಧ ಸತತವಾಗಿ ಗೆಲ್ಲುತ್ತ ಹೋದ ದಾಖಲೆಗೆ ಮತ್ತೂಂದು ಗೆಲುವನ್ನು ಸೇರಿಸುವ ತವಕ ಪಾಕ್‌ನದ್ದಾಗಿತ್ತು.
ಇನ್ನೊಂದೆಡೆ ಅಷ್ಟೇನೂ ಬಲಿಷ್ಠವಲ್ಲದ ಶ್ರೀಲಂಕಾಕ್ಕೆ ಇದರಿಂದ ಹೆಚ್ಚಿನ ಲಾಭವಾಗಿರಬಹುದಾದ ಸಾಧ್ಯತೆ ಇದೆ. ನ್ಯೂಜಿಲ್ಯಾಂಡ್ ವಿರುದ್ಧ ಎಡವಿದ ಕರುಣರತ್ನೆ ಪಡೆ ಅಫ್ಘಾನ್ ವಿರುದ್ಧ ಕಷ್ಟದಿಂದ ಜಯ ಸಾಧಿಸಿತ್ತು.
ಅಪರಾಹ್ನದ ಬಳಿಕ 3 ಸಲ ಮೈದಾನವನ್ನು ಪರಿಶೀಲಿಸಿದ ಅಂಪಾಯರ್‌ಗಳು ಅಂತಿಮವಾಗಿ 3.45ಕ್ಕೆ ಪಂದ್ಯವನ್ನು ಕೈಬಿಡಲು ನಿರ್ಧರಿಸಿದರು. ಆಗ ಸ್ಟೇಡಿಯಂನಲ್ಲಿ ಬೆರಳೆಣಿಕೆಯಷ್ಟು ವೀಕ್ಷಕರಿದ್ದರು.
ಕಾಕತಾಳೀಯವೆಂಬಂತೆ, 1992ರ ವಿಶ್ವಕಪ್‌ನಲ್ಲಿ ಪಾಕಿಸ್ಥಾನ ಮೊದಲ 3 ಪಂದ್ಯಗಳಲ್ಲಿ ಇದೇ ಫಲಿತಾಂಶ ಕಂಡಿತ್ತು. ಮೊದಲ ಪಂದ್ಯದಲ್ಲಿ ಸೋತ ಬಳಿಕ ಎರಡನೇ ಪಂದ್ಯದಲ್ಲಿ ಗೆಲುವು ಸಾಧಿಸಿತ್ತು. ಮೂರನೇ ಪಂದ್ಯ ಮಳೆಯಿಂದ ಕೊಚ್ಚಿ ಹೋಗಿತ್ತು!