ಹೊಸದಿಲ್ಲಿ : ಪಾಕಿಸ್ಥಾನದ ಜೈಶ್ ಎ ಮೊಹಮ್ಮದ್ (ಜೆಇಎಂ) ಉಗ್ರ ಸಂಘಟನೆಗೆ ಸೇರಿದ ಕನಿಷ್ಠ ಆರು ಮಂದಿ ಉಗ್ರರು ಫಿರೋಜ್‌ಪುರದಲ್ಲಿನ ಅಂತಾರಾಷ್ಟ್ರೀಯ ಗಡಿ ಮೂಲಕ ದೇಶದೊಳಗೆ ನುಸುಳಿ ಬಂದಿದ್ದು ಇವರು ಬಹುಷಃ ರಾಷ್ಟ್ರ ರಾಜಧಾನಿ ದಿಲ್ಲಿಯತ್ತ ಸಾಗುತ್ತಿರಬಹುದು ಎಂದು ಪಂಜಾಬ್ ಪೊಲೀಸ್ ಉಗ್ರ ನಿಗ್ರಹ ದಳ ಎಚ್ಚರಿಸಿದೆ. ಮಾತ್ರವಲ್ಲದೆ ಪಂಜಾಬ್ ನಲ್ಲಿ ಕಟ್ಟೆಚ್ಚರ ಘೋಷಿಸಿದೆ.
ಜೆಇಎಂ ಉಗ್ರರು ಫಿರೋಜ್‌ಪುರ ಪ್ರದೇಶದಲ್ಲಿನ ಅಂತಾರಾಷ್ಟ್ರೀಯ ಗಡಿ ದಾಟಿ ಪಂಜಾಬ್ ಪ್ರವೇಶಿಸಿದ್ದಾರೆ ಎಂದು ಉಗ್ರ ನಿಗ್ರಹ ಗುಪ್ತಚರ ದಳದ ಇನ್ಸ್‌ಪೆಕ್ಟರ್ ಜನರಲ್ ಬರೆದಿರುವ ಪತ್ರದಲ್ಲಿ ಹೇಳಿದ್ದಾರೆ.
ಈ ಉಗ್ರರು ಪಂಜಾಬ್ ಕಡೆಯಿಂದ ದಿಲ್ಲಿಗೆ ಸಾಗುತ್ತಿರಬಹುದು ಎಂಬ ಎಚ್ಚರಿಕೆಯನ್ನು ಅವರು ನೀಡಿದ್ದಾರೆ. ಅಂತೆಯೇ ಭದ್ರತಾ ವ್ಯವಸ್ಥೆಯನ್ನು, ವಿಶೇಷವಾಗಿ ಗಡಿ ಭಾಗದಲ್ಲಿ, ಹೆಚ್ಚಿಸಬೇಕೆಂದು ಅವರು ಹೇಳಿದ್ದಾರೆ.
ಭಾರತ – ಪಾಕ್ ಗಡಿಯಲ್ಲಿ ಎರಡನೇ ಹಂತದ ಭದ್ರತೆಯನ್ನು ಬಲಪಡಿಸುವ ಅಗತ್ಯವಿದೆ ಮತ್ತು ಬಿಎಸ್‌ಎಫ್ ಮತ್ತು ಇತರ ಪೊಲೀಸ್/ರಕ್ಷಣಾ ವ್ಯವಸ್ಥೆಗಳ ಜತೆಗೆ ನಿಕಟವಾಗಿ ಕೆಲಸ ಮಾಡುವ ಅಗತ್ಯವಿದೆ ಎಂದವರು ಎಚ್ಚರಿಸಿದ್ದಾರೆ.
ಕೆಲ ದಿನಗಳ ಹಿಂದೆ ಮಾಧೋಪುರ ಸಮೀಪ ನಾಲ್ಕು ವ್ಯಕ್ತಿಗಳು ಬಂದೂಕು ತೋರಿಸಿ ಬೆದರಿಸಿ ಬೆಳ್ಳಿ ಬಣ್ಣದ ಟೊಯೋಟಾ ಇನ್ನೋವಾ ಟ್ಯಾಕ್ಸಿ ಯೊಂದನ್ನು ಸೆಳೆದುಕೊಂಡು ಹೋದ ಘಟನೆಯನ್ನು ಅನುಸರಿಸಿ ಗುಪ್ತಚರ ದಳದಿಂದ ಕಟ್ಟೆಚ್ಚರದ ಸೂಚನೆ ಬಂದಿದೆ. ಈ ಘಟನೆಯು 2016ರಲ್ಲಾದ ಪಠಾಣ್‌ಕೋಟ್ ವಾಯು ನೆಲೆ ಮೇಲಿನ ಪಾಕ್ ಉಗ್ರ ದಾಳಿ ರೀತಿಯ ಇನ್ನೊಂದು ಘಟನೆಯ ಸಂಭಾವ್ಯತೆಗೆ ಪುಷ್ಟಿ ನೀಡಿದೆ.