Advertisement

ಪಾಕ್‌ ಈಗ ಒತ್ತಡಕ್ಕೆ ಸಿಲುಕಿದೆ

11:45 PM Oct 14, 2019 | Team Udayavani |

ಹೊಸದಿಲ್ಲಿ: ಉಗ್ರ ನಿಗ್ರಹಕ್ಕೆ ಸೂಕ್ತ ಕ್ರಮಗಳನ್ನು ಕೈಗೊಳ್ಳದ ಪಾಕಿಸ್ತಾನವು ಪ್ರಸ್ತುತ ಹಣಕಾಸು ಕಾರ್ಯಪಡೆ(ಎಫ್ಎಟಿಎಫ್)ಯ ತೀವ್ರ ಒತ್ತಡಕ್ಕೆ ಸಿಲುಕಿದೆ ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ದೋವಲ್‌ ಹೇಳಿದ್ದಾರೆ. ಹೊಸದಿಲ್ಲಿಯಲ್ಲಿ ನಡೆದ ಉಗ್ರ ನಿಗ್ರಹ ದಳ ಮುಖ್ಯಸ್ಥರುಗಳ ಸಭೆಯಲ್ಲಿ ಅವರು ಮಾತನಾಡಿದರು.

Advertisement

ಪ್ಯಾರಿಸ್‌ನಲ್ಲಿ ಈಗ ಎಫ್ಎಟಿ ಎಫ್ ಸಭೆ ನಡೆಯುತ್ತಿದ್ದು, ಉಗ್ರರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳದ ಪಾಕಿಸ್ತಾನವು ಇಕ್ಕಟ್ಟಿಗೆ ಸಿಲುಕಿದೆ. ಎಫ್ಎಟಿಎಫ್ ಸೂಚಿಸಿದ್ದ ಕ್ರಮ ಗಳನ್ನು ಕೈಗೊಳ್ಳುವಲ್ಲಿ ಪಾಕ್‌ ಸಂಪೂರ್ಣ ವಿಫ‌ಲವಾಗಿರುವ ಕಾರಣ, ಆ ದೇಶವನ್ನು ಕಪ್ಪುಪಟ್ಟಿಗೆ ಸೇರಿಸುವ ಅಥವಾ ಬೂದು ಪಟ್ಟಿಯಲ್ಲಿಯೇ ಮುಂದುವರಿಸುವ ಸಾಧ್ಯತೆ ಇದೆ ಎಂದೂ ದೋವಲ್‌ ಹೇಳಿದ್ದಾರೆ.

ಇದೇ ವೇಳೆ, ಭಯೋತ್ಪಾದನೆಗೆ ಪ್ರಾಯೋಜಕತ್ವ ಮತ್ತು ಹಣಕಾಸು ನೆರವು ನೀಡುತ್ತಿರುವುದು ಪಾಕಿಸ್ತಾನ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಅದರಲ್ಲಿ ಎರಡು ಮಾತಿಲ್ಲ. ಉಗ್ರ ನಿಗ್ರಹಕ್ಕೆ ಸಂಬಂಧಿಸಿದ ಎಲ್ಲ ಸಂಸ್ಥೆಗಳು ಕೂಡ ಪಾಕಿಸ್ತಾನವು ಉಗ್ರರಿಗೆ ಬೆಂಬಲ ನೀಡುತ್ತಿರುವುದನ್ನು ಪುಷ್ಟೀಕರಿಸುವಂಥ ಸೂಕ್ತ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸ ಬೇಕು. ಆಗ ಅವುಗಳನ್ನು ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಪ್ರಸ್ತುತಪಡಿಸುವ ಮೂಲಕ ನೆರೆರಾಷ್ಟ್ರದ ನಿಜ ಬಣ್ಣ ಬಯಲು ಮಾಡಬಹುದು’ ಎಂದಿದ್ದಾರೆ.

ಪಾಕ್‌ ವಿರುದ್ಧ ಪುರಾವೆಗಳನ್ನು ಸಂಗ್ರಹಿಸಿ ಅಂತಾ ರಾಷ್ಟ್ರೀಯ ಮಟ್ಟದಲ್ಲಿ ಆ ದೇಶಕ್ಕೆ ಮುಜುಗರ ಉಂಟು ಮಾಡಬೇಕು. ಇದಕ್ಕಾಗಿ ನೀವೆಲ್ಲರೂ ನಿಮ್ಮ ಕೈಲಾದ ಮಟ್ಟ ದಲ್ಲಿ ಕೊಡುಗೆ ನೀಡಬಹುದು ಎಂದು ಕರೆ ನೀಡಿದ್ದಾರೆ.

“ಭಯೋತ್ಪಾದನೆ ಎನ್ನುವುದು ಹೊಸದಲ್ಲ. ಅದರ ವಿರುದ್ಧ ಹೋರಾಡಿದರೆ ಲಾಭವಿಲ್ಲ. ಬದಲಿಗೆ ಭಯೋತ್ಪಾದಕರ ಬೆನ್ನೆ ಲುಬು ಎಲ್ಲಿದೆ, ಅವರ ಹಿನ್ನೆಲೆ ಏನು, ಹಣಕಾಸಿನ ಮೂಲ ವೇನು, ಅವರಿಗೆ ಬೇರೆ ದೇಶದಿಂದ ನೆರವು ಸಿಗುತ್ತಿದೆಯೇ ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬೇಕು. ನಂತರ, ಇವುಗಳನ್ನು ಒಂದೊಂದಾಗಿ ನಾಶಪಡಿಸುವ ಮೂಲಕ ಭಯೋತ್ಪಾದನೆಗೆ ಅಂತ್ಯ ಹಾಡಬಹುದು’ ಎಂದು ದೋವಲ್‌ ಅಭಿಪ್ರಾಯಪಟ್ಟಿದ್ದಾರೆ.

Advertisement

ಭಯೋತ್ಪಾದಕರನ್ನು ನ್ಯಾಯಾಂಗವು ನೋಡುತ್ತಿರುವ ಬಗೆಯ ಕುರಿತು ಅಸಮಾಧಾನ ವ್ಯಕ್ತಪಡಿಸಿರುವ ದೋವಲ್‌, “ಉಗ್ರರ ವಿಚಾರದಲ್ಲೂ ಕೋರ್ಟ್‌ಗಳು ಹಳೆಯ ಮಾನ ದಂಡವನ್ನೇ ಅನುಸರಿಸುತ್ತಿವೆ. ಭಯೋತ್ಪಾದನೆಯಂಥ ಪ್ರಕ ರಣಗಳಲ್ಲಿ ನೀವು ಪ್ರತ್ಯಕ್ಷ ಸಾಕ್ಷಿಯನ್ನು ಎಲ್ಲಿಂದ ತರುತ್ತೀರಿ? ಅಪಾಯಕಾರಿ ಜೈಶ್‌, ಲಷ್ಕರ್‌ನಂಥ ಉಗ್ರ ಸಂಘಟನೆಗಳನ್ನು ಎದುರುಹಾಕಿಕೊಂಡು ಸಾಕ್ಷ್ಯ ಹೇಳಲು ಜನಸಾಮಾನ್ಯನಿಗೆ ಸಾಧ್ಯವಾಗುತ್ತದೆಯೇ’ ಎಂದೂ ಪ್ರಶ್ನಿಸಿದ್ದಾರೆ.

ಬಾಲಕೋಟ್‌ನಲ್ಲಿ 50 ಉಗ್ರರಿಗೆ ತರಬೇತಿ
ಪಾಕಿಸ್ತಾನದ ಬಾಲಕೋಟ್‌ನಲ್ಲಿರುವ ಜೈಶ್‌-ಎ-ಮೊಹಮ್ಮದ್‌ ಶಿಬಿರದಲ್ಲಿ ಆತ್ಮಾಹುತಿ ದಾಳಿಕೋರರು ಸೇರಿದಂತೆ ಸುಮಾರು 40-50 ಹಾರ್ಡ್‌ಕೋರ್‌ ಉಗ್ರರಿಗೆ ತರಬೇತಿ ನೀಡಲಾಗುತ್ತಿದೆ ಎಂದು ಗುಪ್ತಚರ ಸಂಸ್ಥೆಗಳನ್ನು ಉಲ್ಲೇಖೀಸಿ ಸರಕಾರದ ಮೂಲಗಳು ಮಾಹಿತಿ ನೀಡಿವೆ. ಇಲ್ಲಿ ತರಬೇತಿ ಪಡೆದ ಕೆಲವು ಉಗ್ರರನ್ನು ಈಗಾಗಲೇ ಭಾರತದ ಭದ್ರತಾ ಪಡೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲೆಂದೇ ಕಾಶ್ಮೀರಕ್ಕೆ ಕಳುಹಿಸಲಾಗಿದೆ ಎಂಬ ವಿಚಾರವನ್ನೂ ಗುಪ್ತಚರ ಸಂಸ್ಥೆಗಳು ಬಹಿರಂಗಪಡಿಸಿವೆ. ಕಾಶ್ಮೀರದಲ್ಲಿ ಹಿಂಸಾಚಾರ ಭುಗಿಲೇಳುವಂತೆ ಮಾಡಿ, ವಿಶೇಷ ಸ್ಥಾನಮಾನ ರದ್ದಾದ ಬಳಿಕ ಆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಜಾಗತಿಕ ಮಟ್ಟದಲ್ಲಿ ಬಿಂಬಿಸುವುದು ಪಾಕಿಸ್ತಾನದ ಸಂಚು. ಈ ಹಿನ್ನೆಲೆಯಲ್ಲಿ ಸೇನೆ ಅಲರ್ಟ್‌ ಆಗಿದ್ದೂ, ಯಾವುದೇ ಪರಿಸ್ಥಿತಿಯನ್ನು ಪರಿಣಾಮಕಾರಿಯಾಗಿ ಎದುರಿಸುವಂತೆ ಸೇನೆಗೆ ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ ಎಂದು ಮೂಲಗಳು ಹೇಳಿವೆ. ಕಳೆದ ತಿಂಗಳು ಸೇನಾ ಮುಖ್ಯಸ್ಥ ರಾವತ್‌ ಅವರೇ ಬಾಲಕೋಟ್‌ನಲ್ಲಿ ಉಗ್ರರು ಸಕ್ರಿಯರಾಗಿರುವ ಕುರಿತು ಮಾಹಿತಿ ನೀಡಿದ್ದರು.

ದೋವಲ್‌ ಹೇಳಿದ್ದೇನು?
ಭಯೋತ್ಪಾದನೆಯ ವಿರುದ್ಧ ಹೋರಾಡಿದರೆ ಸಾಲದು, ಉಗ್ರರಿಗೆ ಬರುವ ಹಣಕಾಸಿನ ಮೂಲಕ್ಕೆ ಕೊಡಲಿಪೆಟ್ಟು ಕೊಡಬೇಕು ಪ್ರಸ್ತುತ ಸನ್ನಿವೇಶದಲ್ಲಿ ಯಾವ ದೇಶ ಕೂಡ ಯುದ್ಧ ಮಾಡಲು ಉತ್ಸುಕವಾಗಿಲ್ಲ. ಏಕೆಂದರೆ, ಯುದ್ಧದಿಂದ ಆರ್ಥಿಕವಾಗಿಯೂ ನಷ್ಟ, ಪ್ರಾಣಹಾನಿಯೂ ಜಾಸ್ತಿ. ಅಲ್ಲದೆ, ಯಾವ ದೇಶವೂ ಗೆಲುವಿನ ಬಗ್ಗೆ ಖಾತ್ರಿಯನ್ನೂ ಹೊಂದಿಲ್ಲ. ಇಂಥ ಪರಿಸ್ಥಿತಿಯಲ್ಲಿ ಭಯೋತ್ಪಾದನೆ ಎನ್ನುವುದು ವೆಚ್ಚದಾಯಕವಲ್ಲದ ಸುಸ್ಥಿರ ಆಯ್ಕೆ ಯಾಗಿದ್ದು, ಇದರಿಂದ ಶತ್ರುಗಳಿಗೆ ಸಾಕಷ್ಟು ಹಾನಿ ಉಂಟುಮಾಡಲು ಸಾಧ್ಯವಾಗುತ್ತದೆ.

ಹೀಗಾಗಿ ಪಾಕಿಸ್ತಾನವು ಉಗ್ರವಾದವನ್ನೇ ಸರಕಾರದ ನೀತಿಯನ್ನಾಗಿಸಿಕೊಂಡಿದೆ. ಇದು ಭಾರತದ ಭದ್ರತಾ ಸಂಸ್ಥೆಗಳಿಗೆ ಅತಿದೊಡ್ಡ ಸವಾಲಾಗಿ ಪರಿಣಮಿಸಿದೆ
ಉಗ್ರವಾದದಂಥ ವಿಚಾರಕ್ಕೆ ಬಂದಾಗ “ಗ್ರಹಿಕೆಯ ನಿರ್ವಹಣೆ’ ಕೂಡ ಅತಿ ಮುಖ್ಯ. ನಾವು ಯಾವ ಕ್ರಮಗಳನ್ನು ಕೈಗೊಳ್ಳುತ್ತಿದ್ದೇವೆ ಎಂಬುದರ ಮಾಹಿತಿಯನ್ನು ಮಾಧ್ಯಮಗಳಿಗೆ ನೀಡಬೇಕಾಗುತ್ತದೆ. ನಾವು ಅದನ್ನು ನೀಡದಿದ್ದರೆ, ಮಾಧ್ಯಮಗಳು ಊಹಿಸಿಕೊಂಡು ಬರೆಯಲು ಶುರು ಮಾಡುತ್ತವೆ. ಆಗ ಸಮಸ್ಯೆ ಎದುರಾಗುವುದು ಸಹಜ.

Advertisement

Udayavani is now on Telegram. Click here to join our channel and stay updated with the latest news.

Next