ಕಾಶ್ಮೀರದ ವಿಚಾರದಲ್ಲಿ ಭಾರತದೊಂದಿಗೆ ಸದಾ ಕ್ಯಾತೆ ತೆಗೆಯುತ್ತಲೇ ಬಂದಿರುವ ಪಾಕಿಸ್ಥಾನ, ಈ ವಿಚಾರವನ್ನು ಅಂತಾರಾಷ್ಟ್ರೀಯ ಚರ್ಚೆಯ ಭಾಗವಾಗಿಸಬೇಕು ಎಂದು ಪ್ರಯತ್ನಿಸುತ್ತಲೇ ಇರುತ್ತದೆ. ಆದರೆ ಅದರ ಪ್ರಯತ್ನಗಳೆಲ್ಲ ಪ್ರತಿ ಬಾರಿಯೂ ವಿಫಲವಾಗುತ್ತಲೇ ಬಂದಿವೆ. ಇಂಥದ್ದೇ ಒಂದು ಪ್ರಯತ್ನದಲ್ಲಿ ಪಾಕಿಸ್ಥಾನಕ್ಕೆ ಕೆಲವು ದಿನಗಳ ಹಿಂದೆ ಬಹುದೊಡ್ಡ ರಾಜತಾಂತ್ರಿಕ ಪೆಟ್ಟು ಬಿದ್ದಿದೆ. ಅದೂ ಪಾಕಿಸ್ಥಾನಕ್ಕೆ ಕೆಲ ವರ್ಷಗಳಿಂದ ಆರ್ಥಿಕ ಸ್ತರದಲ್ಲಿ ಬಹಳ ಸಹಾಯ ಮಾಡುತ್ತಿರುವ ಸೌದಿ ಅರೇಬಿಯಾದಿಂದಲೇ.
ಪಾಕಿಸ್ಥಾನದ ವಿದೇಶಾಂಗ ಸಚಿವ ಮೊಹಮ್ಮದ್ ಖುರೇಷಿ ಇತ್ತೀಚೆಗೆ “ಕಾಶ್ಮೀರದ ವಿಚಾರದಲ್ಲಿ ಸೌದಿ ಸರಕಾರ ನಮಗೆ ಬೆಂಬಲ ನೀಡದಿದ್ದರೆ ಪಾಕಿಸ್ಥಾನ ಕ್ಕೇನೂ ನಷ್ಟವಿಲ್ಲ, ಪಾಕಿಸ್ಥಾನವೇ ಒಐಸಿ (ಆರ್ಗನೈಸೇಷನ್ ಆಫ್ ಇಸ್ಲಾಮಿಕ್ ಕೊ ಆಪರೇಶನ್) ರಾಷ್ಟ್ರಗಳ ಬೃಹತ್ ಸಮ್ಮೇಳನವನ್ನು ಆಯೋಜಿಸಿ, ಅವುಗಳ ಬೆಂಬಲ ಕೇಳಲಿದೆ’ ಎಂದಿದ್ದರು. ಅಲ್ಲದೇ ಪಾಕಿಸ್ಥಾನ, “ಒಐಸಿಯ ನೇತೃತ್ವವನ್ನು ಅನ್ಯ ದೇಶಗಳಿಗೆ ವಹಿಸುವುದಾಗಿ’ಯೂ ಸೌದಿಗೆ ಪರೋಕ್ಷವಾಗಿ ಬೆದರಿಕೆಯೊಡ್ಡಿತ್ತು.
ಕಾಶ್ಮೀರದ ವಿಚಾರದಲ್ಲಿ ಎಂದಷ್ಟೇ ಅಲ್ಲ, ಇಸ್ಲಾಮಿಕ್ ರಾಷ್ಟ್ರಗಳ ನೇತೃತ್ವದ ವಿಚಾರದಲ್ಲೂ ಪಾಕಿಸ್ಥಾನ ತನ್ನ ವಿರುದ್ಧ ಮಾತನಾಡುತ್ತಿರುವುದನ್ನು ಸೌದಿ ಗಂಭೀರವಾಗಿ ಪರಿಗಣಿಸಿದ್ದು, ಕೂಡಲೇ ತಾನು ಪಾಕಿಸ್ಥಾನಕ್ಕೆ ನೀಡಲಿರುವ ಸಾಲ ಮತ್ತು ತೈಲ ಸರಬರಾಜನ್ನು ತಿಳಿಸಿದೆ. ಜತೆಗೆ ಪಾಕಿಸ್ಥಾನವು ತನಗೆ ಕೊಡಬೇಕಾಗಿದ್ದ ಒಂದು ಶತಕೋಟಿ ಡಾಲರ್ ಹಣವನ್ನು ವಾಪಸ್ ಕೊಡ ಬೇಕೆಂದು ಸೂಚಿಸಿದೆ.
ಆರ್ಥಿಕವಾಗಿ ಅಧಃಪತನದ ಹಾದಿಯಲ್ಲಿರುವ ಪಾಕಿಸ್ಥಾನ, ಸೌದಿಯ ಈ ನಿರ್ಧಾರದಿಂದಾಗಿ ಎಷ್ಟು ತತ್ತರಿಸಿಹೋಗಿದೆಯೆಂದರೆ, ಸೌದಿಯೊಂದಿಗೆ ಸಂಬಂಧ ಹದಗೆಟ್ಟರೆ ತನ್ನ ಕಥೆ ಮುಗಿಯಿತು ಎಂಬ ಭಯದಿಂದ ಈಗ ತೇಪೆ ಹಚ್ಚುವ ಸಕಲ ಪ್ರಯತ್ನಗಳನ್ನೂ ನಡೆಸಿದೆ. ಈ ವಾರದಲ್ಲಿ ಪಾಕಿಸ್ಥಾನದ ಸೇನಾ ಮುಖ್ಯಸ್ಥ ಜನರಲ್ ಬಾಜ್ವಾ ಹಾಗೂ ಪಾಕ್‌ನ ರಾಯಭಾರಿಗಳ-ಅಧಿಕಾರಿಗಳ ಒಂದು ತಂಡ ಸೌದಿಗೆ ತೆರಳಲು ಸಿದ್ಧವಾಗಿ ನಿಂತಿದ್ದು, ಭೇಟಿಗೆ ಅನುಮತಿ ನೀಡಬೇಕೆಂದು ಸೌದಿ ಸರಕಾರಕ್ಕೆ ಮನವಿ ಮಾಡಲಾಗುತ್ತಿದೆ.
ಈ ಬಾರಿಯಂತೂ ಪಾಕಿಸ್ಥಾನ ರಾಜತಾಂತ್ರಿಕ ಮಟ್ಟದಲ್ಲಿ ದೊಡ್ಡ ಎಡವಟ್ಟು ಮಾಡಿಕೊಂಡಿರುವುದು ಸ್ಪಷ್ಟ. ಕಾಶ್ಮೀರದ ವಿಚಾರವಾಗಿ ತನ್ನನ್ನು ತೆಗಳಿತು ಎನ್ನುವುದಷ್ಟೇ ಅಲ್ಲದೇ, ನಿಜಕ್ಕೂ ಸೌದಿಯ ಕೆಂಗಣ್ಣಿಗೆ ಕಾರಣವಾಗಿರುವುದು, ಇಸ್ಲಾಮಿಕ್ ದೇಶಗಳ ನೇತೃತ್ವವನ್ನು ಅನ್ಯ ದೇಶಗಳಿಗೆ ವಹಿಸುತ್ತೇನೆ ಎಂಬ ಪಾಕಿಸ್ಥಾನ ಬೆದರಿಕೆಯ ಧ್ವನಿ. ಒಂದೆಡೆ ಟರ್ಕಿ ನೇತೃತ್ವದಲ್ಲಿ ಕೆಲವು ಮುಸ್ಲಿಂ ರಾಷ್ಟ್ರಗಳು ವರ್ಷದಿಂದ ಭಿನ್ನ ಗುಂಪೊಂದನ್ನು ರಚಿಸುವ ಪ್ರಯತ್ನ ನಡೆಸಿವೆ. ಈ ವಿಷಯಕ್ಕೆ ಆರಂಭದಿಂದಲೇ ಸೌದಿ ಮುನಿಸು ತೋರಿಸುತ್ತಲೇ ಬಂದಿತ್ತು. ಹೀಗಿರುವಾಗ, ಈಗ ಪಾಕಿಸ್ಥಾನವು ಸೌದಿಯ ವಿರುದ್ಧ ಮಾತನಾಡಿರುವುದನ್ನು ಸೌದಿ ಆಡಳಿತ ಗಂಭೀರವಾಗಿಯೇ ಪರಿಗಣಿಸಿದೆ. ಒಟ್ಟಿನಲ್ಲಿ, ಭಾರತಕ್ಕೆ ತೊಂದರೆ ಕೊಡುವುದನ್ನೇ ತನ್ನ ಗುರಿಯಾಗಿಸಿಕೊಂಡಿರುವ ಪಾಕಿಸ್ತಾನ ಈ ಪ್ರಯತ್ನದಲ್ಲಿ ವಿಫಲವಾಗುತ್ತಾ ತೊಂದರೆಯ ಜಾಲಕ್ಕೆ ಸಿಲುಕುತ್ತಲೇ ಸಾಗಿದೆ.