Advertisement
ರಾಜ್ ಕಪೂರ್ ಮತ್ತು ದಿಲೀಪ್ ಕುಮಾರ್ ಅವರ ಪೂರ್ವಜರ ಐತಿಹಾಸಿಕ ಕಟ್ಟಡಗಳು ಶಿಥಿಲಾವಸ್ಥೆಯಲ್ಲಿದ್ದು, ಒಡೆಯಬೇಕಾದ ಸ್ಥಿತಿಯನ್ನು ಎದುರಿಸುತ್ತಿದೆ ಎಂದು ವರದಿ ವಿವರಿಸಿದೆ. ಈ ನಿಟ್ಟಿನಲ್ಲಿ ಖೈಬರ್ ಪಾಖ್ತುನ್ ಖವಾ ಪ್ರಾಂತ್ಯದ ಪುರಾತತ್ವ ಇಲಾಖೆ ಈ ಎರಡು ಕಟ್ಟಡಗಳನ್ನು ಖರೀದಿಸಲು ಅಗತ್ಯವಾದ ಹಣಕಾಸು ಬಿಡುಗಡೆಗೆ ನಿರ್ಧರಿಸಿದೆ.
Related Articles
Advertisement
ಭಾರತದ ಇಬ್ಬರು ಮಹಾನ್ ನಟರಾದ ರಾಜ್ ಕಪೂರ್, ದಿಲೀಪ್ ಕುಮಾರ್ ದೇಶ ಇಬ್ಭಾಗವಾಗುವ ಮುನ್ನ ತಮ್ಮ ಬಾಲ್ಯವನ್ನು ಪೇಶಾವರದಲ್ಲಿಯೇ ಕಳೆದಿರುವುದಾಗಿ ಪುರಾತತ್ವ ಇಲಾಖೆಯ ಮುಖ್ಯಸ್ಥ ಡಾ.ಅಬ್ದುಸ್ ಸಮದ್ ಖಾನ್ ತಿಳಿಸಿದ್ದಾರೆ.
ನಟ ರಾಜ್ ಕಪೂರ್ ಅವರ ಪೂರ್ವಜರ ಮನೆ “ಕಪೂರ್ ಹವೇಲಿ” ಎಂದೇ ಕರೆಯಲಾಗುತ್ತಿದೆ. ಇದು ಪ್ರಸಿದ್ಧ ಕ್ವಿಸ್ಸಾ ಖಾವಾನಿ ಬಜಾರ್ ಸಮೀಪ ಕಟ್ಟಲಾಗಿದೆ. ಈ ಮನೆಯನ್ನು 1918 ಮತ್ತು 1922ರ ನಡುವೆ ದಂತಕತೆ ನಟ ಕಪೂರ್ ಅಜ್ಜ ದೀವಾನ್ ಬಾಶೇವರ್ನಾಥ್ ಕಪೂರ್ ಕಟ್ಟಿಸಿದ್ದರು. ಈ ಮನೆಯಲ್ಲಿ ಕಪೂರ್ ಮತ್ತು ಅವರ ಚಿಕ್ಕಪ್ಪ ತ್ರಿಲೋಕ್ ಕಪೂರ್ ಜನಿಸಿದ್ದರು. ಈ ಮನೆಯನ್ನು ಪೇಶಾವರದ ಪ್ರಾಂತೀಯ ಸರ್ಕಾರ ರಾಷ್ಟ್ರೀಯ ಪಾರಂಪರಿಕ ತಾಣ ಎಂದು ಘೋಷಿಸಿದೆ.
ಹಿರಿಯ ನಟ ದಿಲೀಪ್ ಕುಮಾರ್ ಅವರ ಪೂರ್ವಜರ ಮನೆ ನೂರು ವರ್ಷಕ್ಕಿಂತ ಹಿಂದೆಯೇ ಕಟ್ಟಲಾಗಿದ್ದು, ಇದು ಕೂಡಾ ಕಪೂರ್ ಮನೆಯ ಪ್ರದೇಶದಲ್ಲಿಯೇ ಇದೆ. ಈ ಮನೆಯನ್ನು 2014ರಲ್ಲಿ ನವಾಜ್ ಷರೀಫ್ ಸರ್ಕಾರ ರಾಷ್ಟ್ರೀಯ ಪಾರಂಪರಿಕ ತಾಣ ಎಂದು ಘೋಷಿಸಿತ್ತು. ಈ ಎರಡು ಮನೆಗಳ ಮಾಲೀಕರು ಹಲವಾರು ಬಾರಿ ಒಡೆಯಲು ಯತ್ನಿಸಿದ್ದು, ಇದಲ್ಲಿ ಕಮರ್ಷಿಯಲ್ ಪ್ಲಾಜಾ ನಿರ್ಮಿಸಲು ಸಿದ್ದತೆ ನಡೆಸಿದ್ದರು. ಆದರೆ ಪುರಾತತ್ವ ಇಲಾಖೆ ಅದಕ್ಕೆ ಅವಕಾಶ ನೀಡದೆ, ಐತಿಹಾಸಿಕ ಪ್ರಾಮುಖ್ಯತೆ ನೀಡಲು ನಿರ್ಧರಿಸಿ ಮನೆ ಧ್ವಂಸಕ್ಕೆ ತಡೆಯೊಡ್ಡಿರುವುದಾಗಿ ತಿಳಿಸಿದೆ.