ಇಸ್ಲಾಮಾಬಾದ್: ತೋಷಖಾನ ಭ್ರಷ್ಟಾಚಾರ ಪ್ರಕರಣದಲ್ಲಿ ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅಪರಾಧಿ ಎಂದು ಘೋಷಿಸಿ, ಮೂರು ವರ್ಷಗಳ ಶಿಕ್ಷೆ ವಿಧಿಸಿದ್ದ ಆದೇಶವನ್ನು ಇಸ್ಲಾಮಾಬಾದ್ ಹೈಕೋರ್ಟ್ ಮಂಗಳವಾರ (ಆಗಸ್ಟ್ 29) ಅಮಾನತುಗೊಳಿಸಿದ್ದು, ಇದರಿಂದ ಇಮ್ರಾನ್ ಖಾನ್ ಗೆ ರಿಲೀಫ್ ಸಿಕ್ಕಂತಾಗಿದೆ.
ಇದನ್ನೂ ಓದಿ:Asia Cup 2023: ಮೊದಲೆರಡು ಪಂದ್ಯದಿಂದ ಕೆಎಲ್ ರಾಹುಲ್ ಔಟ್
ತನಗೆ ವಿಧಿಸಿದ್ದ ಶಿಕ್ಷೆ ವಿರುದ್ಧ ಇಮ್ರಾನ್ ಖಾನ್ ಇಸ್ಲಾಮಾಬಾದ್ ಹೈಕೋರ್ಟ್ ಗೆ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ್ದ ಚೀಫ್ ಜಸ್ಟೀಸ್ ಅಮೀರ್ ಫಾರೂಖ್ ಮತ್ತು ಜಸ್ಟೀಸ್ ತಾರಿಖ್ ಮೆಹಮೂದ್ ಜಹಾಂಗಿರಿ ಆದೇಶವನ್ನು ಕಾಯ್ದಿರಿಸಿದ್ದರು.
ಇಸ್ಲಾಮಾಬಾದ್ ಹೈಕೋರ್ಟ್ ತೀರ್ಪಿನ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಇಮ್ರಾನ್ ಖಾನ್ ಕಾನೂನು ಸಲಹೆಗಾರ ನಯೀಮ್ ಹೈದರ್, ಮುಖ್ಯ ನ್ಯಾಯಮೂರ್ತಿಗಳು ನಮ್ಮ ಮನವಿಯನ್ನು ಪುರಸ್ಕರಿಸಿದ್ದಾರೆ. ಜಿಲ್ಲಾ ಕೋರ್ಟ್ ತೀರ್ಪನ್ನು ಅಮಾನತುಗೊಳಿಸಿದ್ದು, ಈ ಕುರಿತ ವಿವರನ್ನು ನಂತರ ನೀಡಲಾಗುವುದು ಎಂದು ತಿಳಿಸಿದ್ದಾರೆ.
ತೋಷಖಾನ ಭ್ರಷ್ಟಾಚಾರ ಪ್ರಕರಣದಲ್ಲಿ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ದೋಷಿ ಎಂದು ವಿಚಾರಣಾಧೀನ ಕೋರ್ಟ್ ಆಗಸ್ಟ್ 5ರಂದು ತೀರ್ಪು ನೀಡಿ, ಮೂರು ವರ್ಷಗಳ ಶಿಕ್ಷೆ ವಿಧಿಸಿತ್ತು. ಅಲ್ಲದೇ ಐದು ವರ್ಷಗಳ ಕಾಲ ರಾಜಕೀಯ ಚಟುವಟಿಕೆಗೆ ನಿಷೇಧ ಹೇರಿ, ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸದಂತೆ ನಿರ್ಬಂಧ ವಿಧಿಸಿತ್ತು.