ಹೊಸದಿಲ್ಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಹಿಂದೂಗಳು ವಾಸಿಸುವ ಪ್ರದೇಶಗಳ ಮೇಲೆ ದಾಳಿ ನಡೆಸಲು ಪಾಕಿಸ್ಥಾನದ ಐಎಸ್‌ಐ ಸಿದ್ಧತೆ ನಡೆಸುತ್ತಿದೆ. ಶೀಘ್ರದಲ್ಲಿಯೇ ಶುರುವಾಗುವ ಸರಣಿ ಹಬ್ಬಗಳ ಸಂದರ್ಭಗಳಲ್ಲಿಯೇ ದಾಳಿ, ನಡೆಸಿ ಕೋಮುಗಳ ನಡುವೆ ವೈಷಮ್ಯ ಸೃಷ್ಟಿಸಲು ಪ್ರಯತ್ನಿಸುತ್ತಿದೆ. ಅದಕ್ಕಾಗಿ ಹಲವಾರು ಮಂದಿಗೆ ತರಬೇತಿ ನೀಡುತ್ತಿದೆ ಎಂದು ಗುಪ್ತಚರ ಮೂಲಗಳನ್ನು ಉಲ್ಲೇಖೀಸಿ “ಟೈಮ್ಸ್ ನೌ’ ಸುದ್ದಿ ವಾಹಿನಿ ವರದಿ ಮಾಡಿದೆ.
ಅದಕ್ಕಾಗಿ ಪಾಕಿಸ್ಥಾನ ಆಕ್ರಮಿತ ಕಾಶ್ಮೀರದ ಮುಜಫ್ಫರಾಬಾದ್ ನಲ್ಲಿ, ಅಲ್ ಬದ್ರ್ ಮತ್ತು ಜೈಶ್- ಎ- ಮೊಹಮ್ಮದ್ ಉಗ್ರರಿಗೆ ಐಎಸ್‌ಐ ಇದಕ್ಕಾಗಿಯೇ ತರಬೇತಿ ನೀಡುತ್ತಿದೆ ಎಂದು ವರದಿಯಲ್ಲಿ ಹೇಳಿ ಕೊಳ್ಳಲಾಗಿದೆ.
ಈ ತಿಂಗಳಲ್ಲಿ ಎರಡು ಬಾರಿ, ಪಾಕಿಸ್ಥಾನದ ಉಗ್ರಸಂಘಟನೆಗಳು ಗಡಿ ಮೂಲಕ ದೇಶದೊಳಕ್ಕೆ ನುಸುಳಲು ಮಾಡಿದ ಯತ್ನಗಳನ್ನು ಭಾರತೀಯ ಸೇನೆ ವಿಫಲ ಮಾಡಿದೆ. ಉತ್ತರ ಕಾಶ್ಮೀರದ ತಂಗ್ಧರ್ ವಲಯದಲ್ಲಿ ನಿಯೋಜಿಸಲ್ಪಟ್ಟಿರುವ ಭಾರತೀಯ ಸೇನೆಯ ಕಣ್ಗಾವಲು ಪಡೆ, ಒಳ ನುಸುಳುವಿಕೆ ಯತ್ನವನ್ನು ತಡೆದು, 5 ಪಿಸ್ತೂಲುಗಳು, 10 ಮದ್ದುಗುಂಡು ಕೋಶಗಳು, 138 ಸುತ್ತು ಮದ್ದುಗುಂಡುಗಳನ್ನು ವಶಪಡಿಸಿ ಕೊಂಡಿತ್ತು.
ಇದನ್ನೂ ಓದಿ:ಚೀನ ಅಧ್ಯಕ್ಷರ ಯುದ್ಧ ವ್ಯಾಮೋಹ ಬಯಲು!
ಪಾಕ್ ಸಭೆ: ಒಂದು ಕಡೆ ಭಾರತದ ಮೇಲೆ ದಾಳಿ ನಡೆಸಲು ಹುನ್ನಾರ ಮಾಡುತ್ತಲೇ, ಮತ್ತೂಂದು ಕಡೆ ಅಕ್ರಮ ಹಣ ಸಾಗಣೆ, ಭಯೋತ್ಪಾದಕರಿಗೆ ಹಣಕಾಸಿನ ನೆರವು ನಿಗ್ರಹಿಸಲು ಅ.21ರಿಂದ 23ರ ವರೆಗೆ ಪಾಕಿಸ್ಥಾನ ಸಭೆ ನಡೆಸಲಿದೆ. ಪಾಕಿಸ್ಥಾನ ಉಗ್ರರನ್ನು ಸಾಕಲು ಹಣಕಾಸಿನ ನೆರವು ನೀಡುತ್ತಿದೆ ಎಂದು ಭಾರತ ಸಾಕ್ಷಿ ಸಮೇತ ಸಾಬೀತು ಮಾಡಿದ ಹಿನ್ನೆಲೆಯಲ್ಲಿ, ಇದರ ವಿರುದ್ಧ ಕ್ರಮ ಕೈಗೊಳ್ಳಲು ಪಾಕಿಸ್ಥಾನಕ್ಕೆ ವಿಶ್ವಸಂಸ್ಥೆ ತಾಕೀತು ಮಾಡಿದೆ.