Advertisement

ಪಾಕ್‌ ಸಂಚು ವಿಫ‌ಲ

09:19 AM Aug 04, 2019 | Team Udayavani |

ನವದೆಹಲಿ: ಶಾಂತಿಯುತವಾಗಿ ಸಾಗುತ್ತಿದ್ದ ಅಮರನಾಥ ಯಾತ್ರೆಯ ಮೇಲೆ ಮತ್ತೆ ಉಗ್ರರ ಕೆಂಗಣ್ಣು ಬಿದ್ದಿದೆ. ಯಾತ್ರಿಕ ರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲು ಪಾಕಿಸ್ತಾನ ಮೂಲದ ಉಗ್ರರು ಸಂಚು ರೂಪಿಸಿದ್ದ ಆಘಾತಕಾರಿ ವಿಚಾರವು ಬಹಿರಂಗಗೊಂಡಿದೆ. ಆದರೆ, ಭದ್ರತಾ ಪಡೆಗಳ ಸಮಯಪ್ರಜ್ಞೆ ಹಾಗೂ ಹದ್ದಿನ ಕಣ್ಣಿನಿಂದಾಗಿ ಉಗ್ರರು ಯೋಜಿಸಿದ್ದ ಅತಿದೊಡ್ಡ ವಿಧ್ವಂಸಕ ಕೃತ್ಯವೊಂದು ವಿಫ‌ಲವಾಗಿದೆ.

Advertisement

ಅಮರನಾಥ ಯಾತ್ರೆ ಸಾಗುವ ಮಾರ್ಗದಲ್ಲಿ ಶುಕ್ರವಾರ ಪಾಕಿಸ್ತಾನ ನಿರ್ಮಿತ ಬಾಂಬ್‌ಗಳು, ಸ್ನೈಪರ್‌ ರೈಫ‌ಲ್ ಹಾಗೂ ಇನ್ನಿತರೆ ಸ್ಫೋಟಕಗಳು ಪತ್ತೆಯಾಗಿವೆ. ಈ ವಿಷಯ ಬಹಿರಂಗವಾಗುತ್ತಿದ್ದಂತೆ, ಸೇನೆ ಮತ್ತಷ್ಟು ಅಲರ್ಟ್‌ ಆಗಿದೆ. ಜತೆಗೆ, ಅಮರನಾಥ ಯಾತ್ರೆಯನ್ನು ಸದ್ಯಕ್ಕೆ ಸ್ಥಗಿತಗೊಳಿಸ ಲಾಗಿದ್ದು, ಎಲ್ಲರೂ ಕೂಡಲೇ ಜಮ್ಮು-ಕಾಶ್ಮೀರದಿಂದ ವಾಪಸಾಗಿ ಎಂದು ಯಾತ್ರಾರ್ಥಿಗಳಿಗೆ ಜಮ್ಮು-ಕಾಶ್ಮೀರ ಪ್ರಧಾನ ಕಾರ್ಯದರ್ಶಿ(ಗೃಹ) ಸೂಚಿಸಿದ್ದಾರೆ.

ಎಲ್ಲ ಯಾತ್ರಿಗಳು ಹಾಗೂ ಪ್ರವಾಸಿಗರು ತಮ್ಮ ಪ್ರವಾಸವನ್ನು ಮೊಟಕುಗೊಳಿಸಿ, ತಮ್ಮ ತಮ್ಮ ಊರಿಗೆ ವಾಪಸಾಗಬೇಕು. ಆದಷ್ಟು ಬೇಗ ಕಣಿವೆ ರಾಜ್ಯವನ್ನು ತೊರೆಯಬೇಕು ಎಂದು ಸರ್ಕಾರ ಸೂಚಿಸಿದೆ. ಯಾತ್ರಿಕರು ಮತ್ತು ಪ್ರವಾಸಿಗರ ಸುರಕ್ಷತೆ ಹಾಗೂ ಭದ್ರತೆಯ ದೃಷ್ಟಿಯಿಂದ ಈ ಸೂಚನೆ ನೀಡಲಾಗಿದೆ ಎಂದೂ ಹೇಳಲಾಗಿದೆ. ಜುಲೈ1ರಿಂದ ಆರಂಭವಾಗಿರುವ ಅಮರನಾಥ ಯಾತ್ರೆಯು ಆಗಸ್ಟ್‌ 15ರಂದು ಕೊನೆಗೊಳ್ಳಲಿದೆ.

3 ದಿನಗಳಿಂದ ನಡೆದಿತ್ತು ಕಾರ್ಯಾಚರಣೆ
ಪಾಕ್‌ ಸಂಚು ಕುರಿತು ಸುದ್ದಿಗೋಷ್ಠಿ ಯಲ್ಲಿ ವಿವರ ನೀಡಿದ ಸೇನೆಯ 15 ಕಾರ್ಪ್ಸ್ನ ಜನರಲ್ ಆಫೀಸರ್‌ ಕಮಾಂಡಿಂಗ್‌ ಆಗಿರುವ ಲೆ.ಜ. ಕೆಜೆಎಸ್‌ ಧಿಲ್ಲಾನ್‌, ‘ಪಾಕ್‌ ಸೇನೆಯ ನೇತೃತ್ವದಲ್ಲೇ ಉಗ್ರರು ಅಮರನಾಥ ಯಾತ್ರಿಕರನ್ನು ಗುರಿಯಾಗಿಸಿ ದಾಳಿ ನಡೆಸಲು ಸಂಚು ರೂಪಿಸುತ್ತಿದ್ದಾರೆ ಎಂದು ಗುಪ್ತಚರ ವರದಿಗಳು ಬಂದಿದ್ದವು. ಹೀಗಾಗಿ, ಕಳೆದ 3-4 ದಿನಗಳಿಂದಲೂ ಭದ್ರತಾ ಪಡೆ ಕಾರ್ಯಾಚರಣೆಗಿಳಿದಿತ್ತು. ಅಮರನಾಥ ಯಾತ್ರೆಯ ಬಲ್ತಾಲ್ ಹಾಗೂ ಪಹಲ್ಗಾಮ್‌ ಹಾದಿಯಲ್ಲಿ ತೀವ್ರ ಶೋಧ ಕಾರ್ಯ ನಡೆಸಲಾಗಿತ್ತು. ಈ ವೇಳೆ, ಕೆಲವು ಸುಧಾರಿತ ಸ್ಫೋಟಕಗಳು ದೊರೆತಿದ್ದು ಅವುಗಳನ್ನು ನಿಷ್ಕ್ರಿಯ ಗೊಳಿಸಲಾಗಿದೆ. ಇದಲ್ಲದೆ, ಅಮೆರಿಕ ನಿರ್ಮಿತ ಎಂ-24 ಸ್ನೈಪರ್‌ ರೈಫ‌ಲ್, ಪಾಕಿಸ್ತಾನದ ಶಸ್ತ್ರಾಸ್ತ್ರ ತಯಾರಿಕಾ ಫ್ಯಾಕ್ಟರಿಯ ಮುದ್ರೆಯಿರುವಂಥ ನೆಲಬಾಂಬ್‌ಗಳು ಸೇರಿದಂತೆ ಹಲವು ಶಸ್ತ್ರಾಸ್ತ್ರಗಳು ಪತ್ತೆಯಾಗಿವೆ’ ಎಂದಿದ್ದಾರೆ.

ಪಾಕಿಸ್ತಾನ ಕೈವಾಡ ಸ್ಪಷ್ಟ
ಸಿಕ್ಕಿರುವ ಶಸ್ತ್ರಾಸ್ತ್ರಗಳಿಂದಲೇ ಕಾಶ್ಮೀರದ ಭಯೋತ್ಪಾ ದನೆಯಲ್ಲಿ ಪಾಕಿಸ್ತಾನದ ಕೈವಾಡವಿರುವುದು ಸ್ಪಷ್ಟ ವಾಗಿದೆ ಎಂದು ಲೆ.ಜ. ಧಿಲ್ಲಾನ್‌ ಹೇಳಿದ್ದಾರೆ. ಪಾಕ್‌ ಸೇನೆ ಕಾಶ್ಮೀರ ಕಣಿವೆಯಲ್ಲಿ ಶಾಂತಿಗೆ ಧಕ್ಕೆ ತರಲು ಉತ್ಸುಕ ವಾಗಿದೆ ಎಂದಿದ್ದಾರೆ. ಆದರೆ ಪಾಕಿಸ್ತಾನದ ಕುತಂತ್ರಗಳು ಸಫ‌ಲವಾಗಲು ನಾವು ಯಾವ ಕಾರಣಕ್ಕೂ ಬಿಡುವುದಿಲ್ಲ ಎಂದಿದ್ದಾರೆ.

ನುಸುಳಿದ ಐವರು ಜೈಶ್‌ ಉಗ್ರರು: ಹೈಅಲರ್ಟ್‌

ಪಾಕಿಸ್ತಾನ ಮೂಲದ ಉಗ್ರ ಸಂಘಟನೆಯಾದ ಜೈಶ್‌-ಎ-ಮೊಹಮ್ಮದ್‌ಗೆ ಸೇರಿರುವ ಐವರು ಉಗ್ರರು ಪಿಒಕೆ ಮೂಲಕ ಕಾಶ್ಮೀರದೊಳಕ್ಕೆ ನುಸುಳಿದ್ದು, ಭದ್ರತಾ ಪಡೆಗಳ ಮೇಲೆ ದಾಳಿ ನಡೆಸಲು ಸಂಚು ರೂಪಿಸಿದ್ದಾರೆ ಎಂದು ಗುಪ್ತಚರ ಮೂಲಗಳು ತಿಳಿಸಿವೆ. ಈ ಹಿನ್ನೆಲೆಯಲ್ಲಿ ಕಣಿವೆ ರಾಜ್ಯದಾದ್ಯಂತ ಹೈಅಲರ್ಟ್‌ ಘೋಷಿಸಲಾಗಿದೆ. ಒಳನುಸುಳಿರುವ ಎಲ್ಲ ಐವರು ಕೂಡ ಉನ್ನತ ಮಟ್ಟದ ತರಬೇತಿ ಪಡೆದಿದ್ದು, ಭಾರೀ ಸಾವು-ನೋವು ಉಂಟು ಮಾಡುವ ಉದ್ದೇಶ ಹೊಂದಿದ್ದಾರೆ ಎಂದೂ ಹೇಳಲಾಗಿದೆ. ಹೀಗಾಗಿ, ಕೇಂದ್ರ ಸರ್ಕಾರವು ಭೂಸೇನೆ ಮತ್ತು ವಾಯುಪಡೆಗೆ ಅಲರ್ಟ್‌ ಘೋಷಿಸಿದ್ದು, ಕಾಶ್ಮೀರಕ್ಕೆ ಹೆಚ್ಚುವರಿ ಸೇನೆಯನ್ನೂ ನಿಯೋಜಿಸಿದೆ. ಗುರುವಾರ ಸಾಯಂಕಾಲದಿಂದೀಚೆಗೆ ವಾಯುಪಡೆಯ ಸಮರವಿಮಾನವು ರಾಜ್ಯದಲ್ಲಿ ಗಸ್ತು ತಿರುಗುತ್ತಿದೆ. ಕಾಶ್ಮೀರದ ಎಲ್ಲ ಪ್ರಮುಖ ಪ್ರವೇಶ ಮತ್ತು ನಿರ್ಗಮನ ದ್ವಾರದ ಭದ್ರತೆಯನ್ನು ಸಿಆರ್‌ಪಿಎಫ್ ವಹಿಸಿಕೊಂಡಿದೆ.

ಹೆಚ್ಚುವರಿ ಸೇನೆ ನಿಯೋಜನೆ: ಡಿಜಿಪಿ ಸ್ಪಷ್ಟನೆ

ಕಣಿವೆ ರಾಜ್ಯದಲ್ಲಿ ಭಾರೀ ಸಂಖ್ಯೆಯಲ್ಲಿ ಅರೆಸೇನಾ ಪಡೆಗಳ ನಿಯೋಜನೆ ಆಗುತ್ತಿದೆ ಎಂಬ ಸುದ್ದಿ ಕುರಿತು ಪ್ರತಿಕ್ರಿಯಿಸಿರುವ ರಾಜ್ಯ ಡಿಜಿಪಿ ದಿಲ್ಬಾಘ್ ಸಿಂಗ್‌, ‘ಕಳೆದ 9 ತಿಂಗಳಲ್ಲಿ ಪಂಚಾಯತ್‌ ಚುನಾವಣೆಯಿಂದ ಹಿಡಿದು, ನಗರ ಸ್ಥಳೀಯ ಸಂಸ್ಥೆ ಚುನಾವಣೆ, ಲೋಕಸಭೆ ಚುನಾವಣೆವರೆಗೆ ಒಂದಿಲ್ಲೊಂದು ಕರ್ತವ್ಯಗಳು ಇದ್ದವು. ಅದರ ಜೊತೆಗೆ ಅಮರನಾಥ ಯಾತ್ರೆಯೂ ಆರಂಭವಾಗಿದೆ. ಈ ಅವಧಿಯಲ್ಲಿ ಭದ್ರತಾ ಪಡೆಗಳಿಗೆ ವಿರಾಮವೇ ಇರುವುದಿಲ್ಲ. ಹೀಗಾಗಿ, ಕೆಲವು ಪಡೆಗಳನ್ನು ವಾಪಸ್‌ ಕಳುಹಿಸಿ, ಮತ್ತೆ ಕೆಲವನ್ನು ನಿಯೋಜಿಸುತ್ತಿದ್ದೇವೆ. ಮಾಧ್ಯಮಗಳಲ್ಲಿ ತೋರಿಸುತ್ತಿರುವ ಸಂಖ್ಯೆಗಳೆಲ್ಲ ವೈಭವೀಕರಿಸಿದಂಥವು’ ಎಂದು ಹೇಳಿದ್ದಾರೆ. ಇನ್ನೊಂದೆಡೆ, ಭದ್ರತಾ ಪರಿಸ್ಥಿತಿ ಆಧರಿಸಿ ಅಲ್ಲಿ ಹೆಚ್ಚುವರಿ ಅರೆಸೇನಾ ಪಡೆಯನ್ನು ನಿಯೋಜಿಸಲಾಗಿದೆ. ಇಂತಹ ವಿಚಾರಗಳನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಕೇಂದ್ರ ಗೃಹ ಇಲಾಖೆ ಶುಕ್ರವಾರ ಹೇಳಿದೆ.
Advertisement
Advertisement

Udayavani is now on Telegram. Click here to join our channel and stay updated with the latest news.

Next