Advertisement

ಪಾಕ್‌- ಆಸೀಸ್‌ ಮೊದಲ ಟೆಸ್ಟ್‌ ಸಮರ

01:12 AM Nov 21, 2019 | Team Udayavani |

ಬ್ರಿಸ್ಬೇನ್‌: ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಪಂದ್ಯಾವಳಿಗೆ ಪಾದಾರ್ಪಣೆ ಮಾಡಲು ಪಾಕಿಸ್ಥಾನ ಸಜ್ಜಾಗಿ ನಿಂತಿದೆ. ಗುರುವಾರ ಬಲಿಷ್ಠ ಆಸ್ಟ್ರೇಲಿಯ ವಿರುದ್ಧ ಬ್ರಿಸ್ಬೇನ್‌ ಅಂಗಳದಲ್ಲಿ ನಡೆಯುವ ಮೊದಲ ಟೆಸ್ಟ್‌ನಲ್ಲಿ ಪಾಕಿಸ್ಥಾನ ಮುಖಾಮುಖೀಯಾಗಲಿದೆ. ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ನಲ್ಲಿ ಈಗಾಗಲೇ 5 ಪಂದ್ಯಗಳನ್ನಾಡಿರುವ ಆಸ್ಟ್ರೇಲಿಯ 56 ಅಂಕ ಗಳಿಸಿ ನಾಲ್ಕನೇ ಸ್ಥಾನದಲ್ಲಿದ್ದರೆ ಪಾಕಿಸ್ಥಾನ ಇನ್ನಷ್ಟೇ ಆಡಬೇಕಾಗಿದೆ.

Advertisement

ಪಾಕ್‌ಗೆ ಹಲವು ಸವಾಲು
ಪಾಕಿಸ್ಥಾನ ತಂಡಕ್ಕೆ ಈ ಸರಣಿ ಹಲವು ಸವಾಲುಗಳಿಂದ ಕೂಡಿದೆ. ಆಸ್ಟ್ರೇಲಿಯದಲ್ಲಿ ಇದುವರೆಗೆ ಆಡಿದ ಟೆಸ್ಟ್‌ ಸರಣಿಯಲ್ಲಿ ಪಾಕಿಸ್ಥಾನ ತಂಡ ಒಮ್ಮೆಯೂ ಸರಣಿ ಗೆದ್ದಿಲ್ಲ. 1995ರಲ್ಲಿ ಸಿಡ್ನಿಯಲ್ಲಿ ನಡೆದ ಟೆಸ್ಟ್‌ ಪಂದ್ಯವನ್ನು ಗೆದ್ದಿರುವುದು ಪಾಕ್‌ನ ಇಷ್ಟರವರೆಗಿನ ಉತ್ತಮ ಸಾಧನೆಯಾಗಿದೆ. ಇತ್ತೀಚೆಗೆ ನಡೆದ ಟಿ20 ಸರಣಿಯಲ್ಲಿಯೂ ಪಾಕ್‌ 2-0 ವೈಟ್‌ವಾಷ್‌ ಸೋಲಿನ ಅಘಾತ ಅನುಭವಿಸಿತ್ತು.

ಟೆಸ್ಟ್‌ ತಂಡಕ್ಕೆ ಹೊಸದಾಗಿ ಆಯ್ಕೆಯಾದ ನಾಯಕ ಅಜರ್‌ ಅಲಿ ತಂಡವನ್ನು ಹೇಗೆ ಮುನ್ನಡೆಸಲಿದ್ದಾರೆ ಎಂಬುದು ಕೂಡ ಈ ಸರಣಿ ನಿರ್ಧರಿಸಲಿದೆ. ಇನ್ನೊಂದೆಡೆ ನೂತನ ಕೋಚ್‌ ಮಿಸ್ಬಾ ಉಲ್‌-ಹಕ್‌ ಅವರಿಗೂ ಈ ಸರಣಿ ಅತ್ಯಮೂಲ್ಯವಾಗಿದೆ. ಕೋಚ್‌ ಆದ ಬಳಿಕ ಮಿಸ್ಬಾ ಅವರು ವಿದೇಶಿ ನೆಲದಲ್ಲಿ ಮೊದಲ ಸರಣಿ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ಈ ಸರಣಿಗಾಗಿ ಪಾಕಿಸ್ಥಾನ ತಂಡದಲ್ಲಿ ಹಲವಾರು ಬದಲಾವಣೆ ಮಾಡಿದ್ದು ಹೊಸ ಆಟಗಾರರಿಗೆ ಅವಕಾಶ ಕಲ್ಪಿಸಿದೆ. ಒಟ್ಟಾರೆಯಾಗಿ ಈ ಎಲ್ಲ ಸವಾಲುಗಳನ್ನು ಎದುರಿಸಿ ಆಸ್ಟ್ರೇಲಿಯ ನೆಲದಲ್ಲಿ ಚೊಚ್ಚಲ ಟೆಸ್ಟ್‌ ಸರಣಿ ಗೆದ್ದು ಇತಿಹಾಸ ನಿರ್ಮಿಸಲು ಪಾಕ್‌ ಸಿದ್ಧವಾಗಿ ನಿಂತಿದೆ.

ಆಸೀಸ್‌ ಬಲಿಷ್ಠ
ಟೆಸ್ಟ್‌ನಲ್ಲಿ ಅಮೋಘ ನಿರ್ವಹಣೆ ನೀಡುತ್ತಿರುವ ಸ್ಟೀವನ್‌ ಸ್ಮಿತ್‌ ಈ ಸರಣಿ ಯಲ್ಲೂ ಭರ್ಜರಿ ಬ್ಯಾಟಿಂಗ್‌ ನಡೆಸಲು ಮುಂದಾಗಿದ್ದಾರೆ. ಆ್ಯಶಸ್‌ ಟೆಸ್ಟ್‌ ಸರಣಿಯಲ್ಲಿ ಕಳಪೆ ಫಾರ್ಮ್ನಿಂದ ಬಳಲಿದ ಆರಂಭಕಾರ ಡೇವಿಡ್‌ ವಾರ್ನರ್‌ ಈ ಪಂದ್ಯದ ಮೂಲಕ ಮತ್ತೂಮ್ಮೆ ಬ್ಯಾಟಿಂಗ್‌ ಫಾರ್ಮ್ ಗೆ ಮರಳುವ ವಿಶ್ವಾಸದಲ್ಲಿದ್ದಾರೆ. ನಾಯಕ ಟೀಮ್‌ ಪೇನ್‌ ಕೂಡ ಉತ್ತಮ ಫಾರ್ಮ್ನಲ್ಲಿರುವುದು ಆಸೀಸ್‌ಗೆ ಹೆಚ್ಚು ಬಲ ತುಂಬಿದಂತಾಗಿದೆ. ಬೌಲಿಂಗ್‌ ವಿಭಾಗ ಘಾತಕ ಎನ್ನಲಡ್ಡಿಯಿಲ್ಲ. ನಥನ್‌ ಲಿಯೋನ್‌ ಸ್ಪಿನ್‌ ದಾಳಿಯ ಮುಂದೆ ಪಾಕ್‌ ಬ್ಯಾಟ್ಸ್‌ಮನ್‌ಗಳು ಪರದಾಡುವುದು ಖಚಿತ. ವೇಗಿಗಳಾದ ಸ್ಟಾರ್ಕ್‌, ಕಮಿನ್ಸ್‌ ಎದು ರಾಳಿಗಳನ್ನು ಕಟ್ಟಿಹಾಕುವಲ್ಲಿ ಸಮರ್ಥರಿದ್ದಾರೆ.

ಟೆಸ್ಟ್‌ ಆಡಲಿರುವ 16ರ ಹರೆಯದ ನಸೀಮ್‌ ಶಾ
ಹದಿಹರೆ ಯದ ಬೌಲರ್‌ ನಸೀಮ್‌ ಶಾ ಅವರು ಆಸ್ಟ್ರೇಲಿಯ ವಿರುದ್ಧ ಗುರು ವಾರದಿಂದ ಆರಂಭವಾಗುವ ಟೆಸ್ಟ್‌ನಲ್ಲಿ ಆಡುವುದನ್ನು ಪಾಕಿಸ್ಥಾನ ನಾಯಕ ಅಜರ್‌ ಅಲಿ ದೃಢಪಡಿಸಿದ್ದಾರೆ. ಈ ಮೂಲಕ ಶಾ ಟೆಸ್ಟ್‌ ಆಡಲಿರುವ ಅತೀ ಕಿರಿಯ ಆಟಗಾರರಲ್ಲಿ ಒಬ್ಬರಾಗಿ ಕಾಣಿಸಿಕೊಳ್ಳಲಿದ್ದಾರೆ. ಪರ್ತ್‌ನಲ್ಲಿ ನಡೆದ ಆಸ್ಟ್ರೇಲಿಯ “ಎ’ ತಂಡದೆದುರಿನ ಪಂದ್ಯದಲ್ಲಿ ಅವರು ಎಂಟು ಓವರ್‌ ಎಸೆದು ಮಿಂಚಿದ್ದರು.

Advertisement

ಸಂಭಾವ್ಯ ತಂಡಗಳು
ಆಸ್ಟೇಲಿಯ: ಟೀಮ್‌ ಪೇನ್‌ (ನಾಯಕ), ಕ್ಯಾಮರಾನ್‌ ಬೆನ್‌ಕ್ರಾಫ್ಟ್, ಜೋ ಬರ್ನ್, ಪ್ಯಾಟ್‌ ಕಮಿನ್ಸ್‌, ಜೋಸ್‌ ಹ್ಯಾಝಲ್‌ವುಡ್‌, ಟ್ರ್ಯಾವಿಸ್‌ ಹೆಡ್‌, ಮಾರ್ನಸ್‌ ಲಬುಸ್‌ಚೇನ್‌, ನಥನ್‌ ಲಿಯೋನ್‌, ಮಿಚೆಲ್‌ ನಾಸಿರ್‌, ಜೇಮ್ಸ್‌ ಪಾಟಿನ್ಸನ್‌, ಸ್ಟೀವನ್‌ ಸ್ಮಿತ್‌, ವಾರ್ನರ್‌, ಮಿಚೆಲ್‌ ಸ್ಟಾರ್ಕ್‌, ಮ್ಯಾಥ್ಯೂ ವೇಡ್‌.

ಪಾಕಿಸ್ಥಾನ: ಅಜರ್‌ ಅಲಿ (ನಾಯಕ), ಅಬಿದ್‌ ಅಲಿ, ಅಸದ್‌ ಶಫಿಕ್‌, ಬಾಬರ್‌ ಅಜಂ, ಹ್ಯಾರಿಸ್‌ ಸೋಹೈಲ್‌, ಇಮಾಮ್‌ ಉಲ್‌-ಹಕ್‌, ಇಮ್ರಾನ್‌ ಖಾನ್‌ ಸೀನಿಯರ್‌, ಇಫ್ತಿಕರ್‌ ಅಹ್ಮದ್‌, ಖಾಸಿದ್‌ ಭಾಟಿ, ಮೊಹಮ್ಮದ್‌ ಅಬ್ಟಾಸ್‌, ಮೊಹಮ್ಮದ್‌ ರಿಜ್ವಾನ್‌, ನುಸ ಖಾನ್‌, ನಸೀಮ್‌ ಶಾ, ಶಹೀನ್‌ ಶಾ ಅಫ್ರಿದಿ, ಶಾನ್‌ ಮಸೂದ್‌, ಯಾಶಿರ್‌ ಶಾ.

Advertisement

Udayavani is now on Telegram. Click here to join our channel and stay updated with the latest news.

Next