ಜಮ್ಮು: ಭಾರತ ಮತ್ತು ಪಾಕಿಸ್ಥಾನದ ಅಂತಾರಾಷ್ಟ್ರೀಯ ಗಡಿ ಪ್ರದೇಶದಲ್ಲಿ ನಾಲ್ವರು ಶಸ್ತ್ರಧಾರಿ ಭಯೋತ್ಪಾದಕರ ನುಸುಳುವಿಕೆ ಯತ್ನವನ್ನು ಭಾರತೀಯ ಸೇನೆ ವಿಫಲಗೊಳಿಸಿದೆ. ಅಲ್ಲದೇ ನಾಲ್ವರ ಪೈಕಿ ಇಬ್ಬರು ಉಗ್ರರನ್ನು ಸೇನೆ ಹೊಡೆದುರುಳಿಸಿದ್ದು, ಮತ್ತಿಬ್ಬರು ಪರಾರಿಯಾಗಿದ್ದಾರೆ.
ಜಮ್ಮು – ಕಾಶ್ಮೀರದ ಅಖೂ°ರ್‌ನ ಖೂರ್ ಸೆಕ್ಟರ್‌ನಲ್ಲಿ ಶನಿವಾರ ಬೆಳಗಿನ ಜಾವ ಈ ಘಟನೆ ನಡೆದಿದೆ. ಅಲ್ಲದೆ ಉಗ್ರರ ನುಸುಳುವಿಕೆ ಯತ್ನದ ವೇಳೆ ಪಾಕ್ ಸೇನೆಯು ನುಸುಳುಕೋರರಿಗೆ ಬೆಂಗಾವಲಾಗಿ ನಿಂತಿತ್ತು ಎಂಬ ಅಂಶವೂ ಬಯಲಾಗಿದೆ ಎಂದು ಸೇನೆಯ ವೈಟ್ ನೈಟ್ ಕಾಪ್ಸ್‌ನ ಅಧಿಕಾರಿಗಳು ಟ್ವೀಟ್ ಮಾಡಿದ್ದಾರೆ.
ಕುತೂಹಲಕಾರಿ ಅಂಶವೆಂದರೆ, ಖೂರ್ ಸೆಕ್ಟರ್‌ನಲ್ಲಿ ನುಸುಳುಕೋರರು ಮತ್ತು ಸೇನೆಯ ನಡುವೆ ಗುಂಡಿನ ಕಾಳಗ ಮತ್ತು ಉಗ್ರರಿಗಾಗಿ ಶೋಧ ಕಾರ್ಯಾಚರಣೆ ನಡೆಯುತ್ತಿದ್ದಂತೆಯೇ ಭೂಸೇನೆಯ ಅಧಿಕಾರಿಗಳು ಮತ್ತು ಯೋಧರ ಗಮನ ಬೇರೆಡೆಗೆ ಸೆಳೆಯುವ ಪ್ರಯತ್ನವಾಗಿ ಪಾಕ್ ಸೇನೆಯು ಗಡಿಯಾಚೆಗಿನ ಅರಣ್ಯ ಪ್ರದೇಶದಲ್ಲಿರುವ ತನ್ನದೇ ಸೇನಾಶಿಬಿರಕ್ಕೆ ಬೆಂಕಿ ಹಚ್ಚಿದೆ. ಭಾರತದ ಕಡೆಯಿರುವ ಕಣ್ಗಾವಲು ಸಾಧನಗಳ ದಿಕ್ಕು ತಪ್ಪಿಸುವ ಉದ್ದೇಶದಿಂದಲೇ ಪಾಕ್ ಈ “ಬೆಂಕಿಯ ನಾಟಕ”ವಾಡಿದೆ.
ಖಚಿತ ಸುಳಿವು: ಪೂಂಛ್‌ನಲ್ಲಿ ಗುರುವಾರ ಐವರು ಯೋಧರು ಹುತಾತ್ಮರಾದ ಬಳಿಕ ರಜೌರಿ ಮತ್ತು ಪೂಂಛ್‌ನಲ್ಲಿ ಉಗ್ರರಿಗಾಗಿ ಶೋಧ ಕಾರ್ಯಾಚರಣೆ ಬಿರುಸಿನಿಂದ ನಡೆಯುತ್ತಿತ್ತು. ಅದಕ್ಕೆ ಪೂರಕವಾಗಿ ಖೂರ್ ಸೆಕ್ಟರ್‌ನಲ್ಲಿ ನಾಲ್ವರು ಭಯೋತ್ಪಾದಕರು ಶಸ್ತ್ರಸಜ್ಜಿತರಾಗಿ ಅಂತಾರಾಷ್ಟ್ರೀಯ ಗಡಿ ಮೂಲಕ ಒಳನುಸುಳಲು ಪ್ರಯತ್ನಿಸುತ್ತಿದ್ದಾರೆ ಎಂಬ ವಿಚಾರ ತಿಳಿಯುತ್ತಿದ್ದಂತೆಯೇ ಭೂಸೇನೆಯ ವೈಟ್ ನೈಟ್ ಕಾರ್ಪ್ಸ್‌ನ ಅಧಿಕಾರಿಗಳು ಮತ್ತು ಸಿಬಂದಿ ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ.
ಈ ಪ್ರದೇಶದಲ್ಲಿ ಅಳವಡಿಸಲಾಗಿರುವ ರಹಸ್ಯ ಕೆಮರಾಗಳಿಂದ ನಾಲ್ವರು ಭಯೋತ್ಪಾದಕರು ಇದ್ದದ್ದು ದೃಢಪಟ್ಟಿದೆ. ಗುಂಡಿನ ಚಕಮಕಿಯಲ್ಲಿ ಇಬ್ಬರು ಉಗ್ರರನ್ನು ಹತ್ಯೆಗೈಯ್ಯಲಾಗಿದ್ದು, ಉಳಿದ ಇಬ್ಬರು ತಮ್ಮವರ ಶವಗಳನ್ನು ಎಳೆದುಕೊಂಡು ಹೋಗಿದ್ದಾರೆ ಎಂದೂ ಸೇನೆ ತಿಳಿಸಿದೆ. ಪ್ರತೀ ಬಾರಿ ಗಡಿ ನಿಯಂತ್ರಣ ರೇಖೆಯ ಕಡೆಯಿಂದ ಉಗ್ರರು ಒಳನುಸುಳುವ ಯತ್ನ ನಡೆಸುತ್ತಾರೆ. ಆದರೆ ಈ ಬಾರಿ ಅಂತಾರಾಷ್ಟ್ರೀಯ ಗಡಿಯಿಂದಲೂ ಉಗ್ರರನ್ನು ಭಾರತದೊಳಕ್ಕೆ ಕಳುಹಿಸುವ ಪ್ರಯತ್ನವನ್ನು ಪಾಕ್ ಸೇನೆ ನಡೆಸಿದೆ.
ರಾಜಕೀಯ ಪಕ್ಷಗಳ ಪ್ರತಿಭಟನೆ
ಜಮ್ಮು – ಕಾಶ್ಮೀರದ ವಿವಿಧ ರಾಜಕೀಯ ಪಕ್ಷಗಳು ಶನಿವಾರ ತೀವ್ರ ಪ್ರತಿಭಟನೆ ನಡೆಸಿದ್ದು, ಮೂವರು ನಾಗರಿಕರ ಸಾವಿನ ಬಗ್ಗೆ ನಿಷ್ಪಕ್ಷ ತನಿಖೆಯಾಗಬೇಕು ಎಂದು ಆಗ್ರಹಿಸಿವೆ. ಸೇನೆಯು ವಿಚಾರಣೆಗೆಂದು 15 ಮಂದಿಯನ್ನು ವಶಕ್ಕೆ ಪಡೆದಿತ್ತು. ಅದರಲ್ಲಿ ಮೂವರು ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಉಳಿದವರೆಲ್ಲರೂ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಆರೋಪಿಸಿದ್ದಾರೆ.
ಮೂವರು ನಾಗರಿಕರ ನಿಗೂಢ ಸಾವು; ಪರಿಹಾರ ಘೋಷಣೆ
ಪೂಂಛ್‌ನಲ್ಲಿ ಗುರುವಾರ ಸೇನಾ ವಾಹನಗಳ ಮೇಲೆ ಉಗ್ರರು ನಡೆಸಿದ ದಾಳಿಯಲ್ಲಿ ಐವರು ಯೋಧರು ಹುತಾತ್ಮರಾದ ಪ್ರಕರಣದ ಬೆನ್ನಲ್ಲೇ, ಅದೇ ಸ್ಥಳದಲ್ಲಿ ಶನಿವಾರ ಮೂವರು ನಾಗರಿಕರ ಮೃತದೇಹ ಪತ್ತೆಯಾಗಿದೆ. ಅಚ್ಚರಿಯೆಂದರೆ, ಗುರುವಾರದ ಪ್ರಕರಣ ಸಂಬಂಧ ಸೇನೆಯು ವಶಕ್ಕೆ ಪಡೆದಿದ್ದ ನಾಗರಿಕರೇ ಈಗ ಶವವಾಗಿ ಪತ್ತೆಯಾಗಿದ್ದಾರೆ ಎಂದು ಮೃತರ ಕುಟುಂಬ ಸದಸ್ಯರು ಆರೋಪಿಸಿದ್ದಾರೆ. ಇದು ಈಗ ಭಾರೀ ವಿವಾದಕ್ಕೆ ಕಾರಣವಾಗಿದೆ. ಇದರ ಬೆನ್ನಲ್ಲೇ, ಜಮ್ಮು- ಕಾಶ್ಮೀರ ಆಡಳಿತವು, ಮೃತ ನಾಗರಿಕರ ಕುಟುಂಬಗಳಿಗೆ ತಲಾ 10 ಲಕ್ಷ ರೂ. ಪರಿಹಾರ ಮತ್ತು ಕುಟುಂಬದ ತಲಾ ಒಬ್ಬ ಸದಸ್ಯನಿಗೆ ಉದ್ಯೋಗ ನೀಡುವ ಭರವಸೆ ನೀಡಿದ್ದಾರೆ. ಇನ್ನೊಂದೆಡೆ ನಾಗರಿಕರ ಸಾವಿಗೆ ಸಂಬಂಧಿಸಿದ ತನಿಖೆಯಲ್ಲಿ ಸಂಪೂರ್ಣ ಸಹಕಾರ ನೀಡುವುದಾಗಿ ಸೇನೆ ತಿಳಿಸಿದೆ.