Advertisement

ಪಜಿರಡ್ಕ ಸಂಗಮ ಕ್ಷೇತ್ರ: ಯಥೇತ್ಛ ನೀರು

09:06 PM Jun 10, 2019 | mahesh |

ಬೆಳ್ತಂಗಡಿ: ನದಿ, ಬಾವಿಗಳು ಬತ್ತಿಹೋಗಿ ನಾಡೆಲ್ಲ ಬರದಿಂದ ತತ್ತರಿಸಿದ್ದರೂ ಸಂಗಮ ಕ್ಷೇತ್ರವೆಂದೇ ಹೆಸರಾದ ಕನ್ಯಾಡಿ ಸಮೀಪದ ಪಜಿರಡ್ಕ ಶ್ರೀ ಸದಾಶಿವ ದೇವಸ್ಥಾನ ಮುಂಭಾಗ ಹೊಳೆ ತುಂಬಾ ನೀರು ಯಥೇತ್ಛವಾಗಿ ಹರಿಯುತ್ತಿದೆ.

Advertisement

ಕಲ್ಮಂಜ ಗ್ರಾಮದ ಸುತ್ತಮುತ್ತ 10 ಗ್ರಾಮಗಳಿಗೆ ಒಳಪಟ್ಟ 800 ವರ್ಷ ಇತಿಹಾಸವಿರುವ ಮಾಗಣೆ ದೇವಸ್ಥಾನ ವಾಗಿರುವ ಪಜಿರಡ್ಕ ಕ್ಷೇತ್ರದ ಮುಂಭಾಗ ಮೃತ್ಯುಂಜಯ ಹಾಗೂ ನೇತ್ರಾವತಿ ನದಿಗಳೆರಡು ಸಂಗಮವಾಗುತ್ತವೆ. ಈ ಬಾರಿಯ ಅಂತರ್ಜಲ ಮಟ್ಟ ಕುಸಿತ ಕಂಡಿರುವ ಮಧ್ಯೆಯೂ ನದಿಯಲ್ಲಿ 10 ಅಡಿಗೂ ಹೆಚ್ಚು ನೀರು ನಿಂತಿದೆ.

ಪ್ರಾಕೃತಿಕ ಡ್ಯಾಂ
ದೇವಸ್ಥಾನ ಬಲಭಾಗದಲ್ಲಿ ನೂರು ಮೀಟರ್‌ ಕೆಳಗೆ ಕಲ್ಲಗಂಡಿ ಎಂಬ ಪ್ರದೇಶವಿದೆ. ಇಲ್ಲಿ ನದಿಗೆ ಅಡ್ಡಲಾಗಿ ಪ್ರಕೃತಿದತ್ತವಾಗಿ ಕಲ್ಲುಗಳಿಂದಲೇ ಡ್ಯಾಂ ರೂಪದಲ್ಲಿ ನಿರ್ಮಾಣ ಗೊಂಡಿದೆ. ಇದು ವರ್ಷಪೂರ್ತಿ ನೀರು ಹಿಡಿದಿಟ್ಟುಕೊಳ್ಳು ತ್ತಿರುವುದು ಇಲ್ಲಿನ ವಿಶೇಷ. ಈ ಬಾರಿ ಧರ್ಮಸ್ಥಳ ಸಮೀಪ ನೇತ್ರಾವತಿ ನದಿಗೆ ನಿರ್ಮಿಸಿರುವ ಅಣೆಕಟ್ಟಿನಲ್ಲೂ ನೀರಿನ ಪ್ರಮಾಣ ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಸ್ವಲ್ಪ ಇಳಿಮುಖವಾಗಿತ್ತು. ಇಲ್ಲಿಂದ ಪಜಿರಡ್ಕ ದೇವಸ್ಥಾನಕ್ಕೆ ಕೆಲವೇ ಅಂತರವಿದೆ. ಮುಂದಿನ ದಿನಗಳಲ್ಲಿ ಪಜಿರಡ್ಕದಲ್ಲಿ ಡ್ಯಾಂ ನಿರ್ಮಾಣ ಗೊಂಡರೆ ಸುತ್ತಮುತ್ತ ಹತ್ತಾರು ಹಳ್ಳಿ ಗಳಿಗೆ ವರ್ಷಪೂರ್ತಿ ನೀರಿನಾಶ್ರಯ ದೊರೆಯಲಿದೆ.

ದೇವಸ್ಥಾನಕ್ಕೆ ರಸ್ತೆ ಸಮಸ್ಯೆ
ದೇವಸ್ಥಾನಕ್ಕೆ ತೆರಳುವ ಮಣ್ಣಿನ ರಸ್ತೆ ಮಳೆಗಾಲದಲ್ಲಿ ಕೆಸರುಮಯ. ದೇವರಗುಡ್ಡೆ ಆತ್ಮಾನಂದ ಸರಸ್ವತಿ ವಿದ್ಯಾಲಯದಿಂದ ದೇವಸ್ಥಾನ ವರೆಗಿನ ರಸ್ತೆ ಡಾಮರು ಕಾಣದೆ ಹಲವು ಕಾಲವಾಗಿದೆ. 10 ಮಾಗಣೆಗೊಳಪಟ್ಟ ದೇಗುಲಕ್ಕೆ ಸೂಕ್ತ ರಸ್ತೆ ನಿರ್ಮಿಸುವ ಬಗೆಗೆ ಸಂಬಂಧಪಟ್ಟವರು ಗಮನ ಹರಿಸದಿರುವುದು ವಿಪರ್ಯಾಸ.

ಕಳೆದ ಬಾರಿ ಸಿಇಒ ಭೇಟಿ
ಈ ಬಾರಿ ನೇತ್ರಾವತಿ ನದಿ ನೀರು ಬತ್ತಿಹೋಗಿರುವ ಹಿನ್ನೆಲೆ ನೇತ್ರಾವತಿ ನದಿಗೆ 2 ಕಡೆ ಸುಮಾರು 7 ಕೋ. ರೂ. ವೆಚ್ಚದಲ್ಲಿ ಕಿಂಡಿ ಅಣೆಕಟ್ಟು ನಿರ್ಮಿಸಲು ಸರಕಾರ ಶೀಘ್ರ ಅನುಮೋದನೆ ನೀಡಿತ್ತು. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್‌ ಸಮ್ಮುಖದಲ್ಲಿ ಜಿಲ್ಲಾಧಿಕಾರಿ ಶಶಿಕಾಂತ್‌ ಸೆಂಥಿಲ್‌, ಜಿ.ಪಂ. ಸಿ.ಇ.ಒ. ಸಹಿತ ಅಧಿಕಾರಿಗಳ ವಿಶೇಷ ಸಭೆ ಕರೆದು ಪರಿಶೀಲನೆಗೆ ಆದೇಶ ನೀಡಲಾಗಿತ್ತು. ಅದರಂತೆ ಇತ್ತೀಚೆಗೆ ಧರ್ಮಸ್ಥಳದಲ್ಲಿ ನೀರಿನ ಸಮಸ್ಯೆ ಏರ್ಪಟ್ಟ ಬೆನ್ನಿಗೇ ಜಿ.ಪಂ. ಸಿಇಒ ಡಾ| ಸೆಲ್ವಮಣಿ ಮತ್ತು ಸಣ್ಣ ನೀರಾವರಿ ಇಲಾಖೆ ಮೂಲಕ ಅಧಿಕಾರಿಗಳ ತಂಡ ಸ್ಥಳ ಪರಿಶೀಲನೆ ನಡೆಸಿದೆ. ವಾರದೊಳಗೆ ಪ್ರಾಜೆಕ್ಟ್ ರಿಪೋರ್ಟ್‌ ಸಿದ್ಧವಾಗುವ ಸಾಧ್ಯತೆಯೂ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

 ದೇವರ ಕೃಪೆ
ಸಂಗಮ ಕ್ಷೇತ್ರವೆಂದೇ ಪ್ರಸಿದ್ಧವಾಗಿರುವ ಪಜಿರಡ್ಕದಲ್ಲಿ ವರ್ಷಪೂರ್ತಿ ನೀರಿನ ಸೆಲೆಯಿದೆ. ಶಿಶಿಲ, ಕರಂಬಾರು ಹೊರತುಪಡಿಸಿ ತಾಲೂಕಿನ ಪಜಿರಡ್ಕ ಕ್ಷೇತ್ರದಲ್ಲಿ ಪೆರುವೊಲು ಜಾತಿಯ ದೇವರ ಮೀನು ಕಾಣಬಹುದು. ದೇವರ ಕೃಪೆಯಿಂದಲೇ ನೀರು ಯಥೇತ್ಛವಾಗಿದೆ.
-ತುಕಾರಾಮ ಸಾಲ್ಯಾನ್‌, ಪಜಿರಡ್ಕ ದೇವಸ್ಥಾನ ವ್ಯವಸ್ಥಾಪನ ಸಮಿತಿ

ಚೈತ್ರೇಶ್ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next