Advertisement

ನಾಡಿನ ವಿವಿಧೆಡೆ ಪೇಜಾವರಶ್ರೀ ಸಂಸ್ಮರಣೆ, ಆರಾಧನೆ

10:18 AM Jan 11, 2020 | mahesh |

ಉಡುಪಿ/ಬೆಂಗಳೂರು: ಬೆಂಗಳೂರು, ಉಡುಪಿ, ಮುಂಬಯಿ, ದಿಲ್ಲಿ, ಚೆನ್ನೈ, ಹುಬ್ಬಳ್ಳಿ-ಧಾರವಾಡ ಸಹಿತ ನಾಡಿನ 30ಕ್ಕೂ ಹೆಚ್ಚು ಕಡೆಗಳಲ್ಲಿ ಗುರುವಾರ ಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಶ್ರೀಪಾದರ ಆರಾಧನೋತ್ಸವ ನಿಮಿತ್ತ ಅವರ ಸಂಸ್ಮರಣೆ, ಅನ್ನಸಂತರ್ಪಣೆ ನಡೆಯಿತು.

Advertisement

ವಿದ್ಯಾಪೀಠದಲ್ಲಿ ಯತಿಗಳ ಸಮಾವೇಶ
ಸ್ವಾಮೀಜಿಯವರನ್ನು ವೃಂದಾವನ ಮಾಡಿದ ಸ್ಥಳ ಬೆಂಗಳೂರು ಪೂರ್ಣ ಪ್ರಜ್ಞ ವಿದ್ಯಾಪೀಠದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಜರಗಿದವು. ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರ ನೇತೃತ್ವದಲ್ಲಿ ಯತಿಗಳ ಸಮಾವೇಶ ನಡೆಯಿತು. ಕಾಣಿಯೂರು ಮಠದ ಶ್ರೀವಿದ್ಯಾವಲ್ಲಭ ತೀರ್ಥರು, ಸೋದೆ ವಾದಿರಾಜ ಮಠದ ಶ್ರೀ ವಿಶ್ವವಲ್ಲಭ ತೀರ್ಥರು, ಭಂಡಾರಕೇರಿ ಮಠದ ಶ್ರೀ ವಿದ್ಯೆಶತೀರ್ಥರು, ಕುಕ್ಕೆ ಶ್ರೀ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನತೀರ್ಥರು, ಸೋಸಲೆ ಮಠದ ಶ್ರೀ ವಿದ್ಯಾಶ್ರೀಶತೀರ್ಥರು ಹಾಗೂ ಭೀಮನಕಟ್ಟೆ ಮಠದ ಶ್ರೀ ರಘುವರೇಂದ್ರ ಶ್ರೀಪಾದರು ಸೇರಿದಂತೆ ಹಲವು ಯತಿಗಳ ಪಾಲ್ಗೊಂಡಿದ್ದರು.

ಗುರುಗಳ ಆಶಯದಂತೆ ಪ್ರಯತ್ನ ಅಗತ್ಯ
ಕೃಷ್ಣನ ಉಪದೇಶದ ಮೂಲಕ ಭಕ್ತ ಸಮೂಹಕ್ಕೆ ಮಾರ್ಗದರ್ಶನ ನೀಡಿದರು. ಜ್ಯೋತಿ ಬತ್ತಿ ಹೋಗುವ ಮುನ್ನ ಹತ್ತಾರು ದೀಪಗಳಿಗೆ ಬೆಳಗುವ ಶಕ್ತಿ ನೀಡಿ ಹೋಗುತ್ತದೆೆ. ಅದೇ ರೀತಿಯಲ್ಲೇ ನಾವು ನಮ್ಮ ಶ್ರೀಗಳನ್ನು ಕಾಣೋಣ. ಕೃಷ್ಣ ಹೇಳಿದಂತೆ ನಿಷ್ಕಾಮ ಮನಸ್ಸಿನಿಂದ ಕೆಲಸ ಮಾಡಬೇಕು. ಆಗ ಜೀವನದಲ್ಲಿ ಸದ್ಗತಿ ಕಾಣಲು ಸಾಧ್ಯವಾಗುತ್ತದೆ. ಆ ನಿಟ್ಟಿನಲ್ಲಿ ನಮ್ಮ ಪ್ರಯತ್ನಗಳು ಇರಬೇಕು ಎಂದು ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಗಳು ಹೇಳಿದರು.

ಉಡುಪಿಯಲ್ಲಿ ನುಡಿನಮನ
ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಪರ್ಯಾಯ ಶ್ರೀ ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು ಪೇಜಾವರ ಶ್ರೀಗಳ ಭಾವಚಿತ್ರದ ಎದುರು ದೀಪ ಬೆಳಗಿಸಿ ನುಡಿನಮನ ಸಲ್ಲಿಸಿದರು.
ಶ್ರೀ ವಿದ್ಯಾರಾಜೇಶ್ವರತೀರ್ಥ ಶ್ರೀಪಾದರು ಉಪಸ್ಥಿತರಿದ್ದರು. ಪೇಜಾವರ ಮಠ, ತಲಪಾಡಿಯ ಕಣ್ವತೀರ್ಥ ಮಠ, ಪೇಜಾವರ ಮೂಲಮಠ, ಪೆರ್ಣಂಕಿಲ ದೇವಸ್ಥಾನ, ಮುಚ್ಚಲ ಕೋಡು ದೇವಸ್ಥಾನ, ವಿದ್ಯೋದಯ ಸಮೂಹ ಸಂಸ್ಥೆ, ಪಾಜಕದ ಆನಂದ ತೀರ್ಥ ವಿದ್ಯಾಲಯ, ರಾಮಕುಂಜದ ವಿದ್ಯಾಸಂಸ್ಥೆಗಳಲ್ಲಿ ಶ್ರೀಗಳ ಸ್ಮರಣೆ, ಅನ್ನಸಂತರ್ಪಣೆ ನಡೆಯಿತು. ವಿವಿಧ ಸಂಘ ಸಂಸ್ಥೆಗಳಲ್ಲಿ ಭಜನೆಗಳ ಮೂಲಕ ಗೌರವಾರ್ಪಣೆ ಸಲ್ಲಿಸಲಾಯಿತು.

ಬೆಂಗಳೂರಿನಲ್ಲಿ ಪೀಣ್ಯ, ಕನಕಪುರ, ನಾಗರಬಾವಿ, ಸಂಜಯನಗರ, ಗಿರಿನಗರ, ಕೋಣನಕುಂಟೆ
ಮೊದಲಾ ದೆಡೆ, ಬಳ್ಳಾರಿ, ಮೈಸೂರು, ಬೆಳಗಾವಿ, ಹುಬ್ಬಳ್ಳಿ ಧಾರವಾಡ ಮೊದಲಾದೆಡೆ ಅನ್ನಸಂತರ್ಪಣೆ, ಸಂಸ್ಮರಣೆ ಜರಗಿತು.

Advertisement

ಜ. 11ರ ಸಂಜೆ ಬೆಂಗಳೂರಿನ ನ್ಯಾಶನಲ್‌ ಕಾಲೇಜು ಮೈದಾನದಲ್ಲಿ ಸಾರ್ವಜನಿಕರ ನುಡಿನಮನ, ಶ್ರದ್ಧಾಂಜಲಿ ಸಭೆ ಏರ್ಪಡಿಸಲಾಗಿದೆ. ಅದೇ ದಿನ ತುಮಕೂರು ಮೊದಲಾದೆಡೆ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ.

ವಿದ್ಯಾಪೀಠಕ್ಕೆ ಖರ್ಗೆ ಭೇಟಿ
ಕಾಂಗ್ರೆಸ್‌ನ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅವರು ಗುರುವಾರ ಬೆಂಗಳೂರಿನ ಪೂರ್ಣಪ್ರಜ್ಞ ವಿದ್ಯಾಪೀಠಕ್ಕೆ ಭೇಟಿ ನೀಡಿ ಶ್ರೀಗಳ ವೃಂದಾವನದ ದರ್ಶನ ಪಡೆದರು. ನಮ್ಮಲ್ಲಿ ವೈಚಾರಿಕ ಭಿನ್ನಾಭಿಪ್ರಾಯಗಳು ಇದ್ದರೂ ಅವರು ಉದಾರ ಮನಸ್ಸಿನಿಂದ ನಮ್ಮನ್ನು ಕಾಣುತ್ತಿದ್ದರು ಎಂದರು. ಉಡುಪಿ ಮಠಕ್ಕೆ ನಾನು ಅನೇಕ ಬಾರಿ ಭೇಟಿ ನೀಡಿದ್ದೇನೆ. ಅವರು ನಮ್ಮ ಅಭಿಪ್ರಾಯಗಳಿಗೂ ಮನ್ನಣೆ ನೀಡುತ್ತಿದ್ದರು. ಧಾರ್ಮಿಕ ಚಿಂತನೆ ಅಷ್ಟೇ ಅಲ್ಲ, ದೇಶದ ಬಗ್ಗೆ ಹಲವು ಸಲಹೆಗಳನ್ನು ನೀಡುತ್ತಿದ್ದರು ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next