Advertisement

“ಪೇಜಾವರ ಶ್ರೀಗಳ ನಡೆ ಸಾಮರಸ್ಯ ಸಮಾಜಕ್ಕೆ ಪೂರಕ’

03:45 AM Jul 02, 2017 | Team Udayavani |

ನಗರ : ಚುನಾವಣಾ ರಾಜಕೀಯ ವ್ಯವಸ್ಥೆಯಲ್ಲಿ ಕೋಮುಭಾವನೆ ಕೆರಳಿಸಿ, ಅದರ ಲಾಭ ಪಡೆಯುವ ಮನಃಸ್ಥಿತಿ ಬದಲಾಗಬೇಕು. ಜಾತಿ, ಮತ, ಧರ್ಮದ ಮಧ್ಯೆ ವಿರಸ ಮೂಡಿಸುವುದು ಸರಿಯಲ್ಲ . ಆ ನಿಟ್ಟಿನಲ್ಲಿ ಪೇಜಾವರ ಶ್ರೀಗಳು ಇಫ್ತಾರ್‌ ಕೂಟದ ಮೂಲಕ ಅಲ್ಪಸಂಖ್ಯಾಕರು- ಬಹುಸಂಖ್ಯಾಕರು ಬೇರೆಯಲ್ಲ ಎಂಬ ಸಂದೇಶ ರವಾನಿಸಿದ್ದು, ಇದು ಉತ್ತಮ ಸಂದೇಶ ಎಂದು ಶಾಸಕಿ ಶಕುಂತಳಾ ಟಿ. ಶೆಟ್ಟಿ ಹೇಳಿದರು.

Advertisement

ಪುತ್ತೂರು ಕಾಂಗ್ರೆಸ್‌ ಕಚೇರಿಯಲ್ಲಿ ಶುಕ್ರವಾರ ಸಂಜೆ ನಡೆದ ಅಲ್ಪಸಂಖ್ಯಾಕ ಘಟಕ ಪದಾಧಿಕಾರಿಗಳ ಚಿಂತನ- ಮಂಥನ ಸಭೆಯಲ್ಲಿ ಅವರು ಮಾತನಾಡಿದರು.

ಪಶುಭಾಗ್ಯ ನೀಡಿದವರು ಪಶುವನ್ನು ಹತ್ಯೆ ಮಾಡಿ ಎಂದು ಎಲ್ಲೂ ಹೇಳಿಲ್ಲ. ಹೇಳುವುದೂ ಇಲ್ಲ. ಇಂತಹ ಗೊಂದಲಗಳಿಗೆ ಅವಕಾಶವೇ ಬೇಡ. ಆಗ ಕೋಮುವಾದ ಬಿತ್ತಲು ಅವಕಾಶ ಇರುವುದಿಲ್ಲ. ಪ್ರತಿ ಬಾರಿ ಚುನಾವಣೆ ಬಂದಾಗಲೂ ಇಂತಹ ವಿಚಾರ ಇಟ್ಟುಕೊಂಡು ಕೋಮುವಾದ ಬಿತ್ತಲಾಗುತ್ತದೆ. ಇದರ ಮೂಲ ಉದ್ದೇಶ ಚುನಾವಣೆ ಎನ್ನುವುದನ್ನು ಅರಿತುಕೊಳ್ಳಿ. ಮಠ, ಮಂದಿರ, ಮಸೀದಿಯಲ್ಲಿ ಪರಿವ ರ್ತನೆ ಆಗಬೇಕು. ಆಗ ಎಲ್ಲ  ಸಮುದಾ ಯವೂ ಒಂದಾಗಲು ಸಾಧ್ಯ ಎಂದರು.

ನಾನು ಒಂದು ಇಫ್ತಾರ್‌ ಕೂಟ ಏರ್ಪ ಡಿಸಿದ್ದಕ್ಕೆ ಏನೇನೋ ಸಂದೇಶ ನೀಡಲು ಆರಂಭಿಸಿದರು. ಅದೇ ಕಾರ್ಯವನ್ನು ಪೇಜಾವರ ಶ್ರೀಗಳು ಮಾಡಿದಾಗ ಸಮರ್ಥಿ ಸುವವರಿದ್ದಾರೆ. ವಿಹಿಂಪದ ರಾಷ್ಟ್ರೀಯ ಉಪಾಧ್ಯಕ್ಷರಾಗಿದ್ದ ಪೇಜಾವರ ಶ್ರೀಗಳು ಮಾಡಿದ ಈ ಕಾರ್ಯ ಶ್ಲಾಘನೀಯ ಎಂದು ಅವರು ಹೇಳಿದರು.

ಪೊಲೀಸರಿಗೆ ಶ್ಲಾಘನೆ
ಜಿಲ್ಲೆಯಲ್ಲಿ ಕೋಮುವಾದ ನಿಯಂತ್ರ ಣಕ್ಕೆ ಪೊಲೀಸರು ಸಮರ್ಥರಾಗಿದ್ದಾರೆ. ಈ ಕಾರ್ಯಕ್ಕೆ ಅವರನ್ನು ಶ್ಲಾಘಿಸಬೇಕು. ಕಾಂಗ್ರೆಸ್‌ ಸರಕಾರದ ಆಡಳಿತದಲ್ಲಿ ಕೋಮುವಾದಕ್ಕೆ ಅವಕಾಶವಿಲ್ಲ ಎಂದ ಅವರು ಕೋಮು ಗಲಭೆಗೆ ಪ್ರಯತ್ನಿಸಿ ದವರನ್ನು ಮಟ್ಟ ಹಾಕಿ, ಜಿಲ್ಲೆಯ ಸಾಮರಸ್ಯ ಉಳಿಸಲು ಸರಕಾರ ಆದ್ಯತೆ ನೀಡಿದೆ. ಇದಕ್ಕೆ ಅವಿರತವಾಗಿ ಶ್ರಮಿಸುತ್ತಿರುವ ಪೊಲೀಸರನ್ನು ಅವರು ಪ್ರಶಂಸಿಸಿದರು.

Advertisement

ಅಭಿವೃದ್ಧಿ ಕಾರ್ಯದ ಕಾರಣಕ್ಕೆ ಕಾಂಗ್ರೆಸ್‌ ನನ್ನನ್ನು ಕರೆಯಿತು. ಗೆಲ್ಲಲು ರಾಜಕೀಯ ಮಾಡಿದ್ದು ನಿಜ. ಆದರೆ ಬಳಿಕ ಅಭಿವೃದ್ಧಿ ಕಾರ್ಯದೆಡೆಗೆ ಗಮನ ನೀಡಬೇಕು. ಆ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿದ್ದೇನೆ. ಇದರಿಂದ ಪಕ್ಷ ಹಾಗೂ ವ್ಯಕ್ತಿಗತವಾಗಿ ಬೆಳೆಯಲು ಸಾಧ್ಯ ಎಂದರು.

ಕಾರ್ಯಕರ್ತರು ಜಾಗೃತರಾಗಿ
ಆರ್‌ಎಸ್‌ಎಸ್‌ಗೆ ನಾಗ್ಪುರ ಇದ್ದ ಹಾಗೇ, ರಾಜಕೀಯಕ್ಕೆ ಪುತ್ತೂರು. ಯಾವ ಹೊತ್ತಿನಲ್ಲಿ ಅಂಡರ್‌ಪಾಸ್‌ ಕರೆಂಟ್‌ ಬರುತ್ತದೋ ತಿಳಿಯದು. ಕಾಂಗ್ರೆಸ್‌ ಕಾರ್ಯಕರ್ತರು ಜಾಗೃತರಾಗಿದ್ದಾಗ ಮಾತ್ರ ಇಲ್ಲಿ ಗೆಲುವು ಪಡೆಯಲು ಸಾಧ್ಯ. ಮುಂದೆ ಅಲ್ಪಸಂಖ್ಯಾಕ ಸಮಾವೇಶ ಮಾಡಬೇಕೆಂಬ ಉದ್ದೇಶವೂ ಇದೆ. ಈ ನಿಟ್ಟಿನಲ್ಲಿ ಎಲ್ಲರೂ ಒಗ್ಗೂಡಬೇಕು. ನ್ಯಾಶನಲ್‌ ಹೆರಾಲ್ಡ್‌ ಪತ್ರಿಕೆಗೆ ಪ್ರತಿ ಬ್ಲಾಕ್‌ನಿಂದ ಕನಿಷ್ಠ 50 ಜನರಾದರೂ ಚೆಕ್‌ ನೀಡಬೇಕು. ಚೆಕ್‌ ಕನಿಷ್ಠ 1 ಸಾವಿರ ರೂ.ನಿಂದ ಪ್ರಾರಂಭವಾಗಬೇಕು ಎಂದು ಸಿದ್ದರಾಮಯ್ಯ ಹಾಗೂ ರಾಹುಲ್‌ ಗಾಂಧಿ ತಿಳಿಸಿದ್ದಾರೆ ಎಂದರು.
ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಫಝಲ್‌ ರಹೀಂ ಅಧ್ಯಕ್ಷತೆ ವಹಿಸಿದ್ದರು. ವಿಟ್ಲ- ಉಪ್ಪಿನಂಗಡಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಪ್ರವೀಣ್‌ಚಂದ್ರ ಆಳ್ವ, ಪುರಸಭೆ ಮಾಜಿ ಅಧ್ಯಕ್ಷ ಸೂತ್ರಬೆಟ್ಟು ಜಗನ್ನಾಥ ಶೆಟ್ಟಿ, ಕೆಪಿಸಿಸಿ ಅಲ್ಪಸಂಖ್ಯಾಕ ಘಟಕದ ರಾಜ್ಯ ಸಂಯೋಜಕ ನೂರುದ್ದೀನ್‌, ಸೇವಾದಳ ಅಧ್ಯಕ್ಷ ಜೋಕಿಂ ಡಿ’ಸೋಜಾ, ಬ್ಲಾಕ್‌ ಕಾಂಗ್ರೆಸ್‌ ಕಾರ್ಯದರ್ಶಿ ಕೃಷ್ಣಪ್ರಸಾದ್‌ ಆಳ್ವ, ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ವಿಶಾಲಾಕ್ಷಿ, ತಾ.ಪಂ. ಸದಸ್ಯೆ ಫೌಝಿಯಾ ಇಬ್ರಾಹಿಂ, ಜಿಲ್ಲಾ ಕಾಂಗ್ರೆಸ್‌ ಸದಸ್ಯೆ ಸಾಯಿರಾ ಜುಬೈರಾ, ನ್ಯಾಯವಾದಿ ಎಂ.ಪಿ. ಅಬೂಬಕ್ಕರ್‌ ಉಪಸ್ಥಿತರಿದ್ದರು.

ಅಲ್ಪಸಂಖ್ಯಾಕ ಘಟಕದ ಅಧ್ಯಕ್ಷ ನಿರ್ಮಲ್‌ ಕುಮಾರ್‌ ಜೈನ್‌ ಪ್ರಸ್ತಾವನೆ ಗೈದರು. ಇಸಾಕ್‌ ಸಾಲ್ಮರ ನಿರೂಪಿಸಿದರು.

ಜನರಿಗೆ ಮಾಹಿತಿ ನೀಡಿ
ಅಭಿವೃದ್ಧಿ ಕಾರ್ಯಗಳನ್ನು ಜನರ ಮುಂದಿಡಬೇಕಾದುದು ನಮ್ಮ ಕರ್ತವ್ಯ. ಪ್ರತಿ ವಾರ್ಡ್‌ನಿಂದ ಒಬ್ಬೊಬ್ಬರ ಹೆಸರು ನೀಡಬೇಕು. ಅಲ್ಲಿನ ಮಾಹಿತಿ ನೀಡುವುದು ಹಾಗೂ ಕೆಲಸ ಕಾರ್ಯಗಳ ಬಗ್ಗೆ ಜನರಿಗೆ ಮಾಹಿತಿ ನೀಡುವುದು ಅವರ ಕೆಲಸ. ಮಾಡಿದ ಕೆಲಸದ ಬಗ್ಗೆ ಕಾಂಗ್ರೆಸ್‌ ಪ್ರಚಾರ ಪಡೆದುಕೊಳ್ಳುತ್ತಿಲ್ಲ. ಇದರ ಲಾಭವನ್ನು ಬಿಜೆಪಿಗರು ಪಡೆದುಕೊಳ್ಳುತ್ತಿದ್ದಾರೆ ಎಂದು ಶಾಸಕಿ ಶಕುಂತಳಾ ಟಿ. ಶೆಟ್ಟಿ  ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next