Advertisement
ಇ-ಹರಾಜಿನಿಂದ ಬಂದ ಎಲ್ಲ ಹಣವನ್ನೂ ನಮಾಮಿ ಗಂಗೆ ಯೋಜನೆಗೆ ದೇಣಿಗೆಯಾಗಿ ನೀಡಲಾಗುತ್ತದೆ ಎಂದೂ ಸರಕಾರ ಹೇಳಿದೆ. ಮೋದಿಯವರಿಗೆ ಉಡುಗೊರೆಯಾಗಿ ಬಂದ ಒಟ್ಟು 2,772 ಸ್ಮರಣಿಕೆಗಳನ್ನು ಹರಾಜು ಹಾಕುವ ಪ್ರಕ್ರಿಯೆ ಸೆ.14ರಿಂದ ಆರಂಭವಾಗಿತ್ತು. ದೆಹಲಿಯ ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್‌ನಲ್ಲಿ ಈ ವಸ್ತುಗಳನ್ನು ಪ್ರದರ್ಶನಕ್ಕಿಡಲಾಗಿತ್ತು. ಕಲಾಕೃತಿಗಳು, ವಾಸ್ತುಶಿಲ್ಪಗಳು, ಶಾಲುಗಳು, ಜಾಕೆಟ್‌ಗಳು, ಸಾಂಪ್ರದಾಯಿಕ ಸಂಗೀತ ಉಪಕರಣಗಳು ಸೇರಿದಂತೆ ಹಲವು ಉಡು ಗೊರೆಗಳು ಇದರಲ್ಲಿದ್ದವು. ಆರಂಭದಲ್ಲಿ, ಅಕ್ಟೋಬರ್ 3ರವರೆಗೆ ಮಾತ್ರ ಇ-ಹರಾಜು ನಡೆಸಲು ಉದ್ದೇಶಿಸಲಾಗಿತ್ತು. ಅನಂತರ ಅದನ್ನು 3 ವಾರಗಳ ಕಾಲ ವಿಸ್ತರಿಸಲಾಗಿತ್ತು. ಈಗ ಎಲ್ಲ ವಸ್ತುಗಳೂ ಮಾರಾಟವಾಗಿವೆ ಎಂದು ಸರಕಾರ ಹೇಳಿದೆ.
ತಾಯಿ ಹೀರಾಬೆನ್ ಅವರು ಪ್ರಧಾನಿ ಮೋದಿಯವರನ್ನು ಆಶೀರ್ವದಿಸುತ್ತಿರುವ ಫೋಟೋವೊಂದಕ್ಕೆ ಒಂದು ಸಾವಿರ ರೂ. ಮೂಲ ದರ ವಿಧಿಸಲಾಗಿತ್ತು. ಅದು 20 ಲಕ್ಷ ರೂ.ಗಳಿಗೆ ಬಿಡ್ ಆಗಿದೆ. ಮಣಿಪುರಿ ಜನಪದ ಕಲೆ (ಮೂಲ ದರ 50,000) 10 ಲಕ್ಷ ರೂ.ಗೆ, ಕರುವಿಗೆ ಹಾಲು ಕೊಡುತ್ತಿರುವ ಹಸುವಿನ ಲೋಹದ ಶಿಲ್ಪ(ಮೂಲ ದರ 4,000 ರೂ.) 10 ಲಕ್ಷ ರೂ.ಗೆ, ಸ್ವಾಮಿ ವಿವೇಕಾನಂದರ 14 ಸೆ.ಮೀ.ನ ಲೋಹದ ಪ್ರತಿಮೆ(ಮೂಲ ದರ 4,000 ರೂ.) 6 ಲಕ್ಷ ರೂ.ಗಳಿಗೆ ಮಾರಾಟವಾಗಿದೆ ಎಂದೂ ಸರಕಾರದ ಪ್ರಕಟನೆ ತಿಳಿಸಿದೆ. ಹರಾಜಿನಿಂದ ಒಟ್ಟಾರೆ ಎಷ್ಟು ಮೊತ್ತ ಸಂಗ್ರಹವಾಗಿದೆ ಎಂಬ ಮಾಹಿತಿ ಸಿಕ್ಕಿಲ್ಲ.