ಹೊಸದಿಲ್ಲಿ: ರಾಷ್ಟ್ರ ರಾಜಧಾನಿ ಮತ್ತು ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ದೀಪಾವಳಿ ಸಂದರ್ಭ ಪಟಾಕಿ ನಿಷೇಧಿಸಿ ಹೊರಡಿಸಿದ್ದ ತೀರ್ಪಿನ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾದ ಪ್ರತಿಕ್ರಿಯೆಗಳಿಗೆ ಸುಪ್ರೀಂಕೋರ್ಟ್ ತೀವ್ರ ಖೇದ ವ್ಯಕ್ತಪಡಿಸಿದೆ. ನಿಷೇಧ ತೀರ್ಪಿಗೆ ಕೋಮು ಬಣ್ಣ ಹಚ್ಚಲಾಗಿದೆ. ತೀರ್ಪು ಹಿಂದೂ ವಿರೋಧಿ ಎಂದು ಬಿಂಬಿಸಲಾಗಿದ್ದನ್ನೂ ಅದು ಆಕ್ಷೇಪಿಸಿದೆ. ಇಂಥ ಪ್ರತಿಕ್ರಿಯೆ ತೀವ್ರ ನೋವು ಮತ್ತು ದುಃಖ ತಂದಿದೆ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಹೇಳಿದೆ.
‘ಪಟಾಕಿ ನಿಷೇಧದ ಕುರಿತಾಗಿನ ತೀರ್ಪನ್ನು ಯಾರೂ ಕೋಮು ದೃಷ್ಟಿ ಯಿಂದ ನೋಡಬೇಡಿ, ಧಾರ್ಮಿಕ ವಿಚಾರಗಳನ್ನು ಮುಂದಿಟ್ಟು ಟೀಕೆ ಮಾಡಬೇಡಿ’ ಎಂದು ಕೋರ್ಟ್ ಹೇಳಿದೆ. ಇದರೊಂದಿಗೆ ಸಂಪೂರ್ಣ ನಿಷೇಧ ಹೇರುವುದು ಬಿಟ್ಟು ಅಲ್ಪ ಪ್ರಮಾಣದಲ್ಲಿ ಪಟಾಕಿ ಮಾರಾಟಕ್ಕೆ ಅವಕಾಶ ನೀಡಬೇಕು ಎಂದು ಸಲ್ಲಿಸ ಲಾಗಿದ್ದ ಅರ್ಜಿಯನ್ನೂ ಅದು ತಿರಸ್ಕರಿಸಿದೆ. ಪಟಾಕಿ ಮಾರಾಟ ಮಾಡದಂತೆ ಪೊಲೀಸರು ನಿಗಾ ವಹಿಸಬೇಕು ಎಂದು ಇದೇ ವೇಳೆ ಕೋರ್ಟ್ ಸೂಚನೆ ನೀಡಿದೆ.
ಇದರೊಂದಿಗೆ ನಿಷೇಧ ತೀರ್ಪಿನ ಬಗ್ಗೆ ಅದು ಸ್ಪಷ್ಟಪಡಿಸಿದ್ದು, ಈ ನಿಷೇಧ ಈ ವರ್ಷದ ದೀಪಾವಳಿಗೆ ಮಾತ್ರ ಸೀಮಿತವಾಗಿದೆ. ಪಟಾಕಿಗಳಿಲ್ಲದೆ ದೀಪಾವಳಿಯಂದು ರಾಜಧಾನಿಯ ಪರಿಸರ ಹೇಗಿರುತ್ತದೆ ಎಂಬುದನ್ನು ಗಮನಿಸುವ ಉದ್ದೇಶದಿಂದ ಈ ಪ್ರಯೋಗ ಮಾಡಲಾಗುತ್ತಿದೆ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ. ಅಲ್ಲದೆ ನಿಷೇಧ ವಿರುದ್ಧ ರಾಜಕೀಯ ನೇತಾರರು, ಗಣ್ಯರ ಪ್ರತಿಕ್ರಿಯೆ ಬಗ್ಗೆ ಅದು ಪ್ರತಿಕ್ರಿಯಿಸಿದ್ದು, ನಿಷೇಧ ತೀರ್ಪನ್ನು ರಾಜಕೀಯಗೊಳಿಸುವುದು ಅಥವಾ ಕೋಮು ಬಣ್ಣ ಹಚ್ಚುವುದು ಬೇಡ ಎಂದು ಕಿವಿಮಾತು ಹೇಳಿದೆ.
ನವೆಂಬರ್ 1ರ ವರೆಗೆ ಪಟಾಕಿಗಳನ್ನು ಮಾರಾಟ ಮಾಡುವಂತಿಲ್ಲ ಎಂದು ನಿಷೇಧ ಹೇರಿತ್ತು. ಜತೆಗೆ ಪಟಾಕಿ ಮಾರಾಟಕ್ಕಾಗಿ ಪೊಲೀಸರಿಂದ ಪಡೆದಿರುವ ಅನುಮತಿಗಳನ್ನು ತತ್‌ಕ್ಷಣವೇ ರದ್ದು ಮಾಡಬೇಕು ಎಂದು ಸೆಪ್ಟೆಂಬರ್ 12ರಂದು ತೀರ್ಪು ನೀಡಿತ್ತು. 2005ರಲ್ಲೇ ಸುಪ್ರೀಂಕೋರ್ಟ್ ದಿಲ್ಲಿಯಲ್ಲಿ ಭಾರೀ ಸದ್ದಿನ ಪಟಾಕಿಗಳನ್ನು ರಾತ್ರಿ10 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೆ ಸಿಡಿಸಲು ನಿಷೇಧ ಹೇರಿತ್ತು.