ಹೊಸದಿಲ್ಲಿ: ರಾಷ್ಟ್ರ ರಾಜಧಾನಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ದೀಪಾವಳಿ ವೇಳೆ ಪಟಾಕಿ ಸಿಡಿಸುವುಕ್ಕೆ ನಿಷೇಧ ಹೇರಿರುವುದಕ್ಕೆ ಕೋಮು ಬಣ್ಣ ನೀಡಿರುವುದು ತೀವ್ರ ನೋವು ಮತ್ತು ದುಃಖ ತಂದಿದೆ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಖೇದ ವ್ಯಕ್ತಪಡಿಸಿದೆ.
‘ಪಟಾಕಿ ನಿಷೇಧದ ಕುರಿತಾಗಿನ ತೀರ್ಪನ್ನು ಯಾರೂ ಕೋಮು ದೃಷ್ಟಿಯಿಂದ ನೋಡಬೇಡಿ, ಧಾರ್ಮಿಕ ವಿಚಾರಗಳನ್ನು ಮುಂದಿಟ್ಟು ಟೀಕೆ ಮಾಡಬೇಡಿ’ ಎಂದು ಕೋರ್ಟ್ ಹೇಳಿದೆ.
ರಾಷ್ಟ್ರ ರಾಜಧಾನಿಯಲ್ಲಿ ಪಟಾಕಿ ಮಾರಾಟ ಮಾಡದಂತೆ ಪೊಲೀಸರು ನಿಗಾ ವಹಿಸಬೇಕು ಎಂದು ಇದೇ ವೇಳೆ ಕೋರ್ಟ್ ಸೂಚನೆ ನೀಡಿದೆ.
ನವೆಂಬರ್ 1 ರ ವರೆಗೆ ಪಟಾಕಿಗಳನ್ನು ಮಾರಾಟಮಾಡುವಂತಿಲ್ಲ ಎಂದು ನಿಷೇಧ ಹೇರಿ ಕೋರ್ಟ್ ತೀರ್ಪು ನೀಡಿತ್ತು. ಗುರುವಾರ ವ್ಯಾಪಾರಿಗಳು ಪಟಾಕಿ ನಿಷೇಧವನ್ನು ತೆರವುಗೊಳಿಸಬೇಕೆಂದು ಕೋರಿ ಅರ್ಜಿ ಸಲ್ಲಿಸಿದ್ದರು.
ಕೋರ್ಟ್ ಪಟಾಕಿ ಮಾರಟಕ್ಕಾಗಿ ಪೊಲೀಸರಿಂದ ಮಡೆದಿರುವ ಅನುಮತಿಗಳನ್ನು ತಕ್ಷಣವೇ ರದ್ದು ಮಾಡಬೇಕು ಎಂದು ಸೆಪ್ಟೆಂಬರ್ 12 ರಂದು ತೀರ್ಪು ನೀಡಿತ್ತು.
2005 ರಲ್ಲೇ ಸುಪ್ರೀಂ ಕೋರ್ಟ್ ದೆಹಲಿಯಲ್ಲಿ ಭಾರಿ ಸದ್ದಿನ ಪಟಾಕಿಗಳನ್ನು ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ಗಂಟೆಯ ವರೆಗೆ ಸಿಡಿಸಲು ನಿಷೇಧ ಹೇರಿತ್ತು.