Advertisement

ಪೈಲ್ವಾನರ ಭಾರೀ ಕಾದಾಟ

04:57 PM Oct 26, 2018 | |

ಚನ್ನಮ್ಮನ ಕಿತ್ತೂರು: ತೊಡೆ ತಟ್ಟಿ ಇಡೀ ಮೈದಾನವನ್ನೇ ಝಲ್‌ ಎನ್ನಿಸಿದ ಜಗಜಟ್ಟಿಗಳು, ಮೈಯೆಲ್ಲ ಮಣ್ಣಾಗಿಸಿಕೊಂಡು ಗೆಲ್ಲುವ ಗುರಿ ಇಟ್ಟುಕೊಂಡು ಬಂದ ಪೈಲ್ವಾನರು, ಮಣ್ಣಲ್ಲಿ ಬಿದ್ದು ಕೆಂಪಾಗಿ ನೆರೆದವರನ್ನು ಫುಲ್‌ ಖುಷ್‌ ಮಾಡಿದ ಆಟಗಾರರು, ಕುಸ್ತಿಯಲ್ಲಿ ಚಿತ್‌ ಬೀಳಿಸಿದವರ ಪರ ಕೇಕೆ ಹಾಕಿದ ಜನಸ್ತೋಮ. ಗತವೈಭವ ಸಾರುವ ಕಿತ್ತೂರು ಉತ್ಸವ ಕೇವಲ ಮನರಂಜನೆ- ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸೀಮಿತವಾಗಿರದೇ ಕ್ರೀಡಾ ಪ್ರದರ್ಶನಕ್ಕೂ ಸಾಕ್ಷಿಯಾಯಿತು.

Advertisement

ಮಣ್ಣು ಮುಕ್ಕಿಸಿದ ಜಟ್ಟಿಗಳು: ವಿವಿಧ ಡಾವ್‌ಗಳ ಮೂಲಕ ಎದುರಾಳಿಯನ್ನು ಮಣ್ಣು ಮುಕ್ಕಿಸಿದ ಪ್ರತಿಸ್ಪರ್ಧಿಯ ಆಟ ಪ್ರೇಕ್ಷಕರನ್ನು ಖುಷಿ ಪಡಿಸಿತು. ಕಿತ್ತೂರು ಸಾಮ್ರಾಜ್ಯ ಕಟ್ಟಲು ಶ್ರಮಿಸಿದ ಶೂರ ಸೈನಿಕರಂತೆ ಕಿತ್ತೂರಿನ ವೈಭವ ಹಾಗೂ ಇತಿಹಾಸ ನೆನಪಿಸಲು ಪ್ರತಿ ವರ್ಷ ನಡೆಯುವ ಉತ್ಸವದಲ್ಲಿ ಜಗಜಟ್ಟಿಗಳ ಕಾದಾಟ ಮೈನವಿರೇಳಿಸುತ್ತದೆ. ಅದರಂತೆ ಭಾರೀ ಸದ್ದು ಮಾಡುವ ಪೈಲ್ವಾನರ ಕುಸ್ತಿ ಆಟ ನೋಡಿ ಪ್ರೇಕ್ಷಕರು ಫುಲ್‌ ಖುಷ್‌ ಆಗಿದ್ದಂತೂ ಅಲ್ಲಗಳೆಯಲು ಸಾಧ್ಯವಿಲ್ಲ.

ಕಿಕ್ಕಿರಿದು ತುಂಬಿದ್ದ ಜನಸ್ತೋಮದ ಮಧ್ಯೆ ಜಗಜಟ್ಟಿಗಳ ಕಾದಾಟದಲ್ಲಿ ಕರ್ನಾಟಕ, ಮಹಾರಾಷ್ಟ್ರ, ಚಂಡಿಗಢ, ಹರಿಯಾಣಾ, ಪಂಜಾಬ ಸೇರಿದಂತೆ ವಿವಿಧ ರಾಜ್ಯಗಳ ಪೈಲ್ವಾನರು ಭಾಗವಹಿಸಿದ್ದರು. ರಾಷ್ಟ್ರ ಮಟ್ಟದ ಮೂವರು ಸೇರಿದಂತೆ ಒಟ್ಟು 36ಕ್ಕೂ ಹೆಚ್ಚು ಪೈಲ್ವಾನರು, ನಾಲ್ವರು ರಾಷ್ಟ್ರ ಮಟ್ಟದ ಮಹಿಳಾ ಕುಸ್ತಿ ಪಟುಗಳು ಸೇರಿದಂತೆ ಅನೇಕ ಜಗಜಟ್ಟಿಗಳು ಭಾಗವಹಿಸಿದ್ದರು. ಮಧ್ಯಾಹ್ನದಿಂದಲೇ ಆರಂಭವಾದ ಕುಸ್ತಿ ಪಂದ್ಯಾವಳಿಯಲ್ಲಿ ಸಾವಿರಾರು ಜನ ನೆರೆದಿದ್ದರು. ವಿವಿಧ ತೂಕದ ಪೈಲ್ವಾನರು ಇದ್ದರು. ಕರ್ನಾಟಕ ಕೇಸರಿ, ಕಂಠೀರವ ಪ್ರಶಸ್ತಿ ವಿಜೇತರು, ದಸರಾ ಕೇಸರಿ ಸೇರಿದಂತೆ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳು ಸ್ಪರ್ಧಿಸಿದ್ದರು.

ಮಹಾರಾಷ್ಟ್ರದ ಕುರಂದವಾಡದ ರಾಜು ಅವಳಿ ತಂಡ ತರಿಸಲಾಗಿದ್ದ ಕಹಳೆ, ಹಲಗೆ, ತಬಲಾ ವಾದ್ಯಮೇಳಗಳು ಗಮನಸೆಳೆದವು. ಪುರುಷ ಮತ್ತು ಮಹಿಳಾ ವಿಭಾಗದ ಕುಸ್ತಿಗಳನ್ನು ಕಿತ್ತೂರು ಶಾಸಕ ಮಹಾಂತೇಶ ದೊಡಗೌಡರ ಆಂಜನೇಯ ದೇವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಉದ್ಘಾಟಿಸಿದರು. ಜಿಲ್ಲಾಧಿಕಾರಿ ಡಾ. ಎಸ್‌.ಬಿ. ಬೊಮ್ಮನಹಳ್ಳಿ, ಜಿಪಂ ಸಿಇಒ ರಾಮಚಂದ್ರನ್‌ ಆರ್‌., ಎಸಿ ಶಿವಾನಂದ ಭಜಂತ್ರಿ, ತಹಶೀಲ್ದಾರ ಕೆ. ಸಿದ್ಧರಾಮೇಶ್ವರ, ಬಸವರಾಜ ಪರವಣ್ಣವರ ಇತರರು ಇದ್ದರು.

ಗೆಲುವಿಗೆ ವೇದಿಕೆಯಾದ ಕಿತ್ತೂರು
 74 ಕೆಜಿ ತೂಕ ವಿಭಾಗದಲ್ಲಿ ಬೆಳಗಾವಿಯ ದರ್ಗಾ ತಾಲೀಮು ಪೈಲ್ವಾನ ಕಿರಣ ಅಷ್ಟಗಿ ಮಹಾರಾಷ್ಟ್ರದ ಇಚಲರಂಜಿಯ ಪೈಲ್ವಾನ ಪ್ರತಾಪನನ್ನು ಸೋಲಿಸುವ ಮೂಲಕ ಗೆಲುವಿನ ನಗೆ ಬೀರಿದರು. ಈ ಹಿಂದೆ ಅನೇಕ ಸಲ ಪ್ರತಾಪನನ್ನು ಸೋಲಿಸಬೇಕೆಂಬ ಛಲವನ್ನು ಪೈಲ್ವಾನ ಕಿರಣ ಕಿತ್ತೂರಿನಲ್ಲಿ ಗೀಸಾಡಾವ್‌ ಮೂಲಕ ಈಡೇರಿಸಿಕೊಂಡರು. ಈ ಇಬ್ಬರೂ ಪೈಲ್ವಾನರು ಅನೇಕ ಸಲ ಅಖಾಡಕ್ಕಿಳಿದಿದ್ದರೂ ಪ್ರತಾಪನನ್ನು ಸೋಲಿಸಲು ಆಗಿರಲಿಲ್ಲ. ಕಿತ್ತೂರು ಉತ್ಸವ ಕಿರಣನ ಗೆಲುವಿಗೆ ವೇದಿಕೆಯಾಗಿ ಪರಿಣಮಿಸಿತು.

Advertisement

ಭಾರೀ ಫೇಮಸ್‌ ಚಂಬಾ ಮುತ್ನಾಳ
ಕಿತ್ತೂರು ಸಾಮ್ರಾಜ್ಯದಲ್ಲಿ ದೇಸಾಯರ ಕಾಲದಿಂದಲೂ ಕುಸ್ತಿ ಸೇರಿದಂತೆ ಅನೇಕ ದೇಸಿ ಹಾಗೂ ಸಾಹಸ ಪ್ರದರ್ಶನಗಳಿಗೆ ಪ್ರಸಿದ್ಧವಾಗಿದೆ. ಈ ಭಾಗದಲ್ಲಿ ಕಿತ್ತೂರು ಪಕ್ಕದ ಮಲ್ಲಾಪುರದ ಬಸಪ್ಪ ಚೌವ್ಹಾಣ ಹಾಗೂ ಮುತ್ನಾಳದ ಚಂಬಣ್ಣ ಹುಬ್ಬಳ್ಳಿ ಎಂಬ ರಾಷ್ಟ್ರ ಮಟ್ಟದ ಪೈಲವಾನರು ಇಲ್ಲಿ ಭಾಗವಹಿಸುತ್ತಿದ್ದರು. ಇವರ ಕುಸ್ತಿಗಳನ್ನು ನೋಡುವುದೇ ಸೊಗಸು. ಕೇವಲ 2-3 ನಿಮಿಷಗಳಲ್ಲಿ ಕುಸ್ತಿ ಆಟ ಮುಗಿಸಿಗೆದ್ದು ಬೀಗುತ್ತಿದ್ದರು. ಚಂಬಾ ಮುತ್ನಾಳ ಸುತ್ತಲಿನ ಭಾಗದಲ್ಲಿ ಭಾರೀ ಫೇಮಸ್‌. ಇಲ್ಲಿ ಪ್ರತಿ ವರ್ಷವೂ ಕುಸ್ತಿ ಪಂದ್ಯಾವಳಿಗೆ ಕಿತ್ತೂರು ಹೆಸರುವಾಸಿಯಾಗಿದೆ. ಆ ಪರಂಪರೆ ಇಂದಿಗೂ ಮುಂದುವರಿದುಕೊಂಡು ಬಂದಿದೆ. ಗ್ರಾಮೀಣ ಸೊಗಡು ಕಣ್ಮರೆಯಾಗುತ್ತಿರುವ ಇಂಥ ದಿನಗಳಲ್ಲಿ ಇಂದಿಗೂ ನಡೆದುಕೊಂಡು ಬಂದಿದೆ.

ನಂಬರ್‌ ಒನ್‌ ಕುಸ್ತಿ ಸಮಬಲದಲ್ಲಿ ಅಂತ್ಯ
ಚನ್ನಮ್ಮನ ಕಿತ್ತೂರು: ನಂಬರ್‌ ಒನ್‌ ಕುಸ್ತಿ ಅರ್ಧ ಗಂಟೆಗೂ ಹೆಚ್ಚು ಕಾಲ ನಡೆಯುವ ಮೂಲಕ ಸಮಬಲವಾಗಿದ್ದು, ಪ್ರೇಕ್ಷಕರಲ್ಲಿ ನಿರಾಸೆ ಮೂಡಿಸಿತು. ವಿರಾಟ ಭಾರತ ಕೇಸರಿ ಮಂಜಿತ್‌ ಸಿಂಗ್‌ ಖತ್ರಿ ಹಾಗೂ ಪಂಜಾಬ ಕೇಸರಿ ಕೌಲಜಿತ್‌ ಸಿಂಗ್‌ ನಡುವೆ ಸಮಬಲವಾಯಿತು. 2ನೇ ಸ್ಥಾನದ ಕಾಳಗದಲ್ಲಿ ದಾವಣಗೆರೆಯ ಕರ್ನಾಟಕ ಕೇಸರಿ ಕಾರ್ತಿಕ ಕಾಟೆ ಅವರು ಚಂಡಿಗಢನ ರಾಷ್ಟ್ರೀಯ ಪದಕ ವಿಜೇತ ಪ್ರವೀಣ ಡಾಗರ ಅವರನ್ನು ಸೋಲಿಸಿದರು. ಕೊಲ್ಲಾಪುರದ ಶ್ರೀಮಂತ ಭೋಸಲೆಯನ್ನು ಚಿಮ್ಮಡದ ಬಸಪ್ಪಾ ಮಮದಾಪುರ ಸೋಲಿಸಿದರು. ಇಚಲಕರಂಜಿಯ ಅಭಿಜಿತ್‌ ಕನೇರಿ ವಿರುದ್ಧ ಕೋಹಳ್ಳಿಯ ಸಂಗಮೇಶ ಬಿರಾದಾರ, ದುಮ್ಮವಾಡದ ನಗಪ್ರಸಾದ ಉಡಚಮ್ಮನ್ನವರ ವಿರುದ್ಧ ಕಂಕಣವಾಡಿಯ ಶಿವಯ್ನಾ ಪೂಜೇರಿ, ಕೊಲ್ಲಾಪುರದ ಅಮುಲ ನರಳೆ ವಿರುದ್ಧ ಇಂಗಳಗಿಯ ಅಪ್ಪಾಸಾಬ ಮುಲ್ತಾನಿ ಗೆದ್ದರು. ಗಡಹಿಂಗ್ಲಜನ ಅನಂತ ಪಾಟೀಲ, ಕೊಲ್ಲಾಪುರದ ಅವಿನಾಶ ಜಾಧವ ಮಧ್ಯೆ ಸಮಬಲಗೊಂಡಿತು. ಮಹಿಳಾ ವಿಭಾಗದ ಕುಸ್ತಿಗಳಲ್ಲಿ ಸಾತಾರದ ರಾಷ್ಟ್ರೀಯ ಕುಸ್ತಿ ಪಟು ವರ್ಷಾ ಪುಜಾರಿ ವಿರುದ್ಧ ಅಂತಾರಾಷ್ಟ್ರೀಯ ಕುಸ್ತಿ ಪಟು ಐಶ್ವರ್ಯ ಚಾಪಗಾಂವ ಗೆದ್ದರು. ಸಾತಾರಾದ ಪೂನಮ್‌ ವಿರುದ್ಧ ಲೀನಾ ಹಳಿಯಾಳ ವಿಜಯಗಳಿಸಿದರು. ಹಳಿಯಾಳದ ರೋಹಿಣಿ ಪಾಗೋಜಿ ವಿರುದ್ಧ ಗದುಗಿನ ಪ್ರೇಮಾ ಹುಚ್ಚಣ್ಣವರ ಜಯ ಸಾಧಿಸಿದರು. ಶಾಹೀದಾ ಬಳಗಾರ ಮಧ್ಯೆ ಲಕ್ಷ್ಮೀ ಕಕ್ಕೇರಿ, ಅಂಕಿತಾ ಜುಂಜವಾಡಕರ ಮಧ್ಯೆ ನಿಖಿತಾ ಡೇಪಿ ನಡುವಿನ ಸೆಣಸಾಟ ಸಮಬಲಗೊಂಡವು.

ಭೈರೋಬಾ ಕಾಂಬಳೆ 

Advertisement

Udayavani is now on Telegram. Click here to join our channel and stay updated with the latest news.

Next