Advertisement

ಹದಗೆಟ್ಟ ಕುಕ್ಕುಜಡ್ಕ-ಪೈಲಾರು ರಸ್ತೆ: ಸಂಚಾರ ದುಸ್ತರ 

02:49 PM Dec 14, 2018 | |

ಸುಳ್ಯ : ಕುಕ್ಕುಜಡ್ಕ-ಪೈಲಾರು ನಡುವಿನ 3 ಕಿ.ಮೀ. ದೂರ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ವಾಹನ ಸಂಚಾರ ದುಸ್ತರವೆನಿಸಿದೆ. ಸಮಸ್ಯೆಯ ಬಗ್ಗೆ ಸ್ಥಳೀಯರು ಎಲ್ಲ ಸ್ತರದ ಜನಪ್ರತಿನಿಧಿಗಳಿಗೆ ಹಲವು ಬಾರಿ ಮನವಿ ಮಾಡಿದ್ದರೂ, ಸ್ಪಂದನೆ ಸಿಕ್ಕಿಲ್ಲ.

Advertisement

ಇಲ್ಲಿ 200ಕ್ಕೂ ಅಧಿಕ ಮನೆಗಳಿವೆ. ಕುಕ್ಕುಜಡ್ಕ, ಪೈಲಾರಿನಲ್ಲಿ ಶಾಲೆಗಳಿವೆ. ಇವೆಲ್ಲದಕ್ಕೆ ಸಂಪರ್ಕಕ್ಕೆ ಇರುವ ಪ್ರಮುಖ ರಸ್ತೆ ಇದಾಗಿದೆ. ರಸ್ತೆ ಡಾಮರು ಎದ್ದು ಹೋಗಿದ್ದು, ಹತ್ತು ವರ್ಷದಿಂದ ದುರಸ್ತಿ ಕಂಡಿಲ್ಲ. ಶಾಸಕ ಅಂಗಾರ, ಸ್ಥಳೀಯ ಜನಪ್ರತಿನಿಧಿಗಳಿಗೆ ಮನವಿ ಮಾಡಲಾಗಿದೆ. ಸುಮಾರು 1.80 ಕೋ.ರೂ. ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಆಗುತ್ತದೆ ಎನ್ನುವ ಭರವಸೆ ಸಿಕ್ಕಿದ್ದರೂ, ಅದು ಈ ತನಕ ಈಡೇರಿಲ್ಲ.

ಐದು ಬಸ್‌ ಓಡಾಟ
ಪುತ್ತೂರು ಮತ್ತು ಸುಳ್ಯ ಡಿಪೋದಿಂದ ಕುಕ್ಕುಜಡ್ಕ ಮಾರ್ಗದಲ್ಲಿ ಪೈಲಾರಿಗೆ ದಿನಂಪ್ರತಿ ಐದು ಬಸ್‌ ಓಡಾಟ ನಡೆಸುತ್ತಿವೆ. ಅದರಲ್ಲಿ ಮೂರು ಬಸ್‌ಗಳು ರಾತ್ರಿ ವೇಳೆ ಪೈಲಾರಿನಲ್ಲಿ ತಂಗಿ ಬೆಳಗ್ಗೆ ಸಂಚಾರ ಆರಂಭಿಸುತ್ತದೆ. ದಿನಂಪ್ರತಿ ನೂರಾರು ವಿದ್ಯಾರ್ಥಿಗಳು, ಸಾರ್ವಜನಿಕರು ಪೈಲಾರು ಭಾಗದಿಂದ ಸುಳ್ಯ ಪುತ್ತೂರಿಗೆ ತೆರಳಲು ಈ ಬಸ್‌ ಅನ್ನು ಬಳಸುತ್ತಾರೆ. ರಸ್ತೆ ಸ್ಥಿತಿ ದಿನೇ ದಿನೇ ಹದಗೆಡುತ್ತಿರುವುದರಿಂದ ಬಸ್‌ ಓಡಾಟ ಕೂಡ ಸ್ಥಗಿತಗೊಳ್ಳುವ ಭೀತಿ ಇದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ. ಹೆಚ್ಚಾಗಿ ಕೃಷಿ ಕುಟುಂಬಗಳು ಇಲ್ಲಿದ್ದು, ಕೃಷಿ ಉತ್ಪನ್ನಗಳ ಸಾಗಾಟ ಹಾಗೂ ಸಂಚಾರಕ್ಕಾಗಿ ಹಲವು ಖಾಸಗಿ ವಾಹನಗಳು ಈ ಪರಿಸರದಲ್ಲಿವೆ. ಆ ವಾಹನಗಳ ಗುಣಮಟ್ಟದ ಮೇಲೂ ಈ ರಸ್ತೆ ಅವ್ಯವಸ್ಥೆ ಪರಿಣಾಮ ಬೀರಿದೆ. ಜಲ್ಲಿ ರಾಶಿ ಚದುರಿದಂತಿರುವ ರಸ್ತೆಯಲ್ಲಿ ವಾಹನ ಚಲಾಯಿಸುವ ಪರಿಣಾಮ ವಾಹನದ ಬಿಡಿ  ಭಾಗಗಳಿಗೆ ಹಾನಿ ಉಂಟಾಗುತ್ತಿದೆ ಎಂದು ಚಾಲಕರು ಹೇಳುತ್ತಾರೆ.

ಮುಂದಿನ ಮತದಾನ ಬಹಿಷ್ಕಾರ ಈ ರಸ್ತೆಯಲ್ಲಿ ವಾಹನ ಓಡಾಟ ಬಿಡಿ, ನಡೆದಾಡುವುದೇ ಕಷ್ಟ. ಹಲವು ಬಾರಿ ರಸ್ತೆ ದುರಸ್ತಿಗೆ ಮನವಿ ಮಾಡಿದ್ದೇವೆ. ಆದರೆ ನಮ್ಮ ಬೇಡಿಕೆಗೆ ಸ್ಪಂದನೆ ಸಿಕ್ಕಿಲ್ಲ. ಹೀಗಾಗಿ ಈ ಬಾರಿಯ ಲೋಕಸಭೆ ಚುನಾವಣೆ ಸಂದರ್ಭ ಮತದಾನ ಬಹಿಷ್ಕರಿಸಿ ಪ್ರತಿಭಟಿಸುವುದೊಂದೇ ಉಳಿದಿರುವ ದಾರಿಯಾಗಿದೆ.
– ಎಂ.ಟಿ. ಶಾಂತಿಮೂಲೆ,
ಸ್ಥಳೀಯ ನಿವಾಸಿ

Advertisement

Udayavani is now on Telegram. Click here to join our channel and stay updated with the latest news.

Next