Advertisement

ಕರಾವಳಿ ಕೈತಪ್ಪುವ ಆತಂಕ ಸದ್ಯ ದೂರ: ಸಂತ್ರಸ್ತರು, ಭೂಮಾಲಕರ ಸಭೆಯಲ್ಲಿ ನಿರ್ಧಾರ

02:47 AM Jun 11, 2022 | Team Udayavani |

ಕಾಪು: ಪಾದೂರು ಕಚ್ಚಾತೈಲ ಸಂಗ್ರಹ ಘಟಕ (ಐಎಸ್‌ಪಿಆರ್‌ಎಲ್‌)ದ ಎರಡನೇ ಹಂತದ ವಿಸ್ತರಣೆಗಾಗಿ ಸ್ವಾಧೀನ ಪಡಿಸಿಕೊಳ್ಳಲಾಗುವ ಜಮೀನಿಗೆ ಹೆಚ್ಚಿನ ದರ ನಿಗದಿಪಡಿಸಲು ಶಾಸಕರು ಮತ್ತು ಸಂಸದರ ಸಲಹೆಯಂತೆ ಜಿಲ್ಲಾಧಿಕಾರಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿದೆ.

Advertisement

ಹೀಗಾಗಿ ಈ ಮಹತ್ವದ ಯೋಜನೆ ರಾಜ್ಯ ಕರಾವಳಿಯ ಕೈತಪ್ಪುವ ಆತಂಕ ಸದ್ಯ ದೂರವಾಗಿದೆ. ಪಾದೂರು ತೈಲ ಸಂಸ್ಕರಣ ಘಟಕವು ರಾಷ್ಟ್ರ ಮಟ್ಟದಲ್ಲಿ ಮಹತ್ವದ್ದು ಎಂಬ ಕಾರಣದಿಂದ ಪ್ರಥಮ ಹಂತದ ಭೂಸ್ವಾಧೀನ ಸಂದರ್ಭ ಸ್ಥಳೀಯರು ಶರತ್ತುಗಳಿಲ್ಲದೆ ಭೂಮಿ ಒದಗಿಸಿ ದ್ದರು. ಬಳಿಕ ಘಟಕವನ್ನು ವಿಸ್ತರಿಸಲು ನಿರ್ಧರಿಸಿ, ಅದಕ್ಕಾಗಿ ಸುತ್ತಮುತ್ತಲಿನ ಪಾದೂರು ಮತ್ತು ಕಳತ್ತೂರು ಗ್ರಾಮಗಳ ಜಾಗ ವನ್ನು ಗುರುತಿಸಲಾಗಿತ್ತು. ಎರಡನೇ ಹಂತದ ವಿಸ್ತರಣೆಗೆ 210 ಎಕ್ರೆ ಭೂ ಸ್ವಾಧೀನ ಆಗಬೇಕಿತ್ತು.

ಈ ಭೂಮಿಗೆ ಕನಿಷ್ಠ ದರವನ್ನು ನಿಗದಿಪಡಿಸಲಾಗಿದ್ದು, ಭೂಮಾಲಕರು ಆಕ್ಷೇಪ ವ್ಯಕ್ತಪಡಿಸಿದ್ದರು. ನ್ಯಾಯಯುತ ಗರಿಷ್ಠ ಮೌಲ್ಯವನ್ನು ನಿಗದಿಪಡಿಸುವಂತೆ ಕಳತ್ತೂರು ಜನಜಾಗೃತಿ ಸಮಿತಿ, ಜನಹಿತ ಸಮಿತಿಯ ನೇತೃತ್ವದಲ್ಲಿ ಭೂ ಮಾಲಕರು ಮತ್ತು ಸ್ಥಳೀಯರು ಮಜೂರು ಗ್ರಾ.ಪಂ. ಮತ್ತು ಜನಪ್ರತಿನಿಧಿಗಳ ಸಹಿತ ಕಾಪು ಶಾಸಕ ಲಾಲಾಜಿ ಆರ್‌. ಮೆಂಡನ್‌, ಸಂಸದೆ ಶೋಭಾ ಕರಂದ್ಲಾಜೆ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದರು.

ಅಧಿಕ ಮೌಲ್ಯವನ್ನು ನಿಗದಿಪಡಿಸುವಂತೆ ಶಾಸಕ ಲಾಲಾಜಿ ಮೆಂಡನ್‌ ಜಿಲ್ಲಾಧಿಕಾರಿ ಮತ್ತು ಸರಕಾರವನ್ನು ಒತ್ತಾಯಿಸಿದ್ದರು. ಜಿಲ್ಲಾಡಳಿತದ ಜತೆಗೆ ಹಲವು ಸುತ್ತಿನ ಮಾತುಕತೆ ನಡೆಸಿದ್ದ ಶಾಸಕರು, ಭೂ ಮಾಲಕರು ಮತ್ತು ಸ್ಥಳೀಯರ ಸಭೆ ಕರೆದು ಭೂಮಿ ಕಳೆದುಕೊಳ್ಳುವವರಿಗೆ ನ್ಯಾಯಯುತವಾದ ಉತ್ತಮ ಭೂಮೌಲ್ಯ ನಿಗದಿಪಡಿಸುವಂತೆ ಜಿಲ್ಲಾಧಿಕಾರಿಯವರನ್ನು ಒತ್ತಾಯಿಸಿದ್ದರು.

ಈಗ ಹೆಚ್ಚಿನ ದರ ನಿಗದಿ ಪಡಿಸಿರುವುದರಿಂದ ಯೋಜನೆಗಾಗಿ ಜಮೀನು ಕಳೆದುಕೊಳ್ಳುವವರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.

Advertisement

ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಪಾದೂರು ಜನಹಿತ ಸಮಿತಿಯ ಅಧ್ಯಕ್ಷ ಸುರೇಂದ್ರ ಕುಮಾರ್‌ ಜೈನ್‌, ಮಾಜಿ ಜಿ.ಪಂ. ಸದಸ್ಯೆ ಶಿಲ್ಪಾ ಜಿ. ಸುವರ್ಣ, ಮಾಜಿ ತಾ.ಪಂ. ಅಧ್ಯಕ್ಷೆ ಶಶಿಪ್ರಭಾ ಶೆಟ್ಟಿ, ಮಜೂರು ಗ್ರಾ.ಪಂ. ಅಧ್ಯಕ್ಷೆ ಶರ್ಮಿಳಾ ಆಚಾರ್ಯ, ಉಪಾಧ್ಯಕ್ಷ ಮಧುಸೂದನ್‌ ಸಾಲ್ಯಾನ್‌, ಪ್ರಮುಖರಾದ ಪ್ರಸಾದ್‌ ವಳದೂರು, ಸಂದೀಪ್‌ ರಾವ್‌, ಅರುಣ್‌ ಶೆಟ್ಟಿ, ಅನಸೂಯಾ, ಮರ್ವಿನ್‌ ಕೋರ್ಡ, ಜನಹಿತ ಸಮಿತಿ, ಜನ ಜಾಗೃತಿ ಸಮಿತಿಯ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

ಉತ್ತಮ ಭೂಮೌಲ್ಯ ನಿಗದಿ ಪಡಿಸುವಲ್ಲಿ ಸಹಕರಿಸಿದವರಿಗೆ ಶಾಸಕ ಲಾಲಾಜಿ ಮೆಂಡನ್‌ ಅವರು ಕೃತಜ್ಞತೆ ಸಲ್ಲಿಸಿದರಲ್ಲದೇ ಯೋಜನೆಯ ವಿಸ್ತರಣೆಗೆ ಸಹಕರಿಸುವಂತೆ ಮನವಿ ಮಾಡಿದ್ದಾರೆ.

ಸಭೆಯ ನಿರ್ಧಾರಗಳು
ಜಿಲ್ಲಾಧಿಕಾರಿ ಕೂರ್ಮಾ ರಾವ್‌, ಅಪರ ಜಿಲ್ಲಾಧಿಕಾರಿ ವೀಣಾ, ಪ್ರಭಾರ ತಹಶೀಲ್ದಾರ್‌ ಪ್ರದೀಪ್‌ ಕುರುಡೇಕರ್‌ ನೇತೃತ್ವದಲ್ಲಿ ಭೂ ಸಂತ್ರಸ್ತರೊಂದಿಗೆ ನಡೆಸಿದ ಸಭೆಯಲ್ಲಿ ಭೂಮಿ ಕಳೆದುಕೊಳ್ಳುವವರಿಗೆ ಗರಿಷ್ಠ ಭೂ ಮೌಲ್ಯ ನೀಡಿಕೆ, ಮನೆ ಕಳೆದುಕೊಳ್ಳುವವರಿಗೆ ಪಿಡಬ್ಲ್ಯುಡಿ ಮೂಲಕ ಸರ್ವೇ ನಡೆಸಿ ಮೌಲ್ಯ ನಿಗದಿ ಮತ್ತು ಹೆಚ್ಚುವರಿ ಧನಸಹಾಯ ಹಾಗೂ ನಿರ್ವಸಿತರಿಗೆ ಸೂಕ್ತ ವಸತಿ ವ್ಯವಸ್ಥೆ ಕಲ್ಪಿಸಲು ನಿರ್ಧರಿಸಲಾಗಿದೆ ಎಂದು ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next