Advertisement

‘ಗ್ರಾಮ ಮಟ್ಟದಲ್ಲೇ ಆರೋಗ್ಯ ಸುರಕ್ಷೆಗೆ ಅವಕಾಶ ನೀಡಿ’

11:15 AM Jul 05, 2018 | |

ಮೂಡಬಿದಿರೆ : ಗ್ರಾಮೀಣ ಭಾಗದವರು ಆರೋಗ್ಯ ಸುರಕ್ಷಾ ಕಾರ್ಡ್‌ ಮಾಡಿಸಿಕೊಳ್ಳಲು ಜಿಲ್ಲಾ ಸರಕಾರಿ ಆಸ್ಪತ್ರೆಗೆ ಹೋಗಬೇಕಾಗಿದೆ. ಇದು ಜನರನ್ನು ಸಂಕಷ್ಟಕ್ಕೀಡು ಮಾಡಿದೆ. ಈ ನೋಂದಣಿಯನ್ನು ಗ್ರಾಮಮಟ್ಟದಲ್ಲಿಯೇ ಮಾಡುವಂತಾಗಬೇಕು ಎಂದು ಪಡುಮಾರ್ನಾಡು ಗ್ರಾ.ಪಂ. ಸಭೆಯಲ್ಲಿ ಗ್ರಾಮಸ್ಥೆ ಅಚ್ಚರಕಟ್ಟ ಕಲೆºಟ್ಟು ಮೀನಾಕ್ಷಿ ವಿನಂತಿಸಿದರು. ಬುಧವಾರ ಪಡುಮಾರ್ನಾಡು ಗ್ರಾ.ಪಂ. ಅಧ್ಯಕ್ಷ ಶ್ರೀನಾಥ್‌ ಸುವರ್ಣ ಅವರ ಅಧ್ಯಕ್ಷತೆಯಲ್ಲಿ ನಡೆದ ಗ್ರಾಮಸಭೆಯಲ್ಲಿ ಮಾತನಾಡಿದ ಅವರು ಪಂಚಾಯತ್‌ ಕಟ್ಟಡದಲ್ಲೇ ನಿರ್ವಹಿಸಲಾಗುತ್ತಿದ್ದ ಪಡಿತರ ವಿತರಣೆಯನ್ನು ದೂರದ ಅಲಂಗಾರ್‌ನಲ್ಲಿ ವ್ಯವಸ್ಥೆಗೊಳಿಸಿರುವುದು ಗ್ರಾಮಸ್ಥರಿಗೆಲ್ಲ ತೊಡಕಾಗಿದೆ. ಇಲ್ಲೇ ಪಡಿತರ ನೀಡಿ ಎಂದು ಒತ್ತಾಯಿಸಿದರು.

Advertisement

ರಾಜೀನಾಮೆಗೆ ಒತ್ತಾಯ
ತಂಡ್ರಕೆರೆ-ಹೊಪಾಲಬೆಟ್ಟು ರಸ್ತೆ ತೀರಾ ನಾದುರಸ್ತಿಯಾಗಿದ್ದು, ಮೋರಿ ರಚನೆಗೆ ಪೈಪ್‌ ತಂದು ಹಾಕಿ 2 ವರ್ಷಗಳೇ ಕಳೆದಿವೆ. ಕೆಲಸ ಇನ್ನೂ ಆಗಿಲ್ಲ, ಮಳೆ ನೀರು ರಸ್ತೆಯಲ್ಲೇ ಹರಿಯುವಂತಾಗಿದೆ ಎಂದು ರಾಮ್‌ಕುಮಾರ್‌ ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷ ಶ್ರೀನಾಥ್‌ ಸುವರ್ಣ ಈ ವಾರ್ಡ್‌ನ ಸದಸ್ಯ ವಾಸುದೇವ ಭಟ್ಟರು ವಾರ್ಡ್‌ ಸಭೆಗಳಿಗೂ ಬರುತ್ತಿಲ್ಲ, ಎರಡೂ ಸಾಮಾನ್ಯ ಸಭೆಗೆ ಗೈರುಹಾಜರಾಗಿ ಸದಸ್ಯತನ ಕಳಕೊಳ್ಳದಂತೆ ಮೂರನೇ ಸಭೆಗೆ ಬರುತ್ತಾರೆ. ಕ್ರಿಯಾಯೋಜನೆ ತಯಾರಿಸಲು ಅವರೇ ಬರುತ್ತಿಲ್ಲವಾದರೆ ಏನು ಮಾಡೋಣ ಎಂದು ಪ್ರಶ್ನಿಸಿದರು. ಕ್ರಿಯಾಯೋಜನೆ ತಯಾರಿಗೆ ತಯಾರಿಲ್ಲದವರು ರಾಜೀನಾಮೆ ನೀಡಲಿ ಎಂದು ರಾಮ್‌ಕುಮಾರ್‌ ಆಗ್ರಹಿಸಿದರು.

ಪಡುಮಾರ್ನಾಡು ಇನ್ನೂ ಪೋಡಿ ಮುಕ್ತ ಆಗಿಲ್ಲ
ಪಡುಮಾರ್ನಾಡು ಗ್ರಾಮ ಪೋಡಿ ಮುಕ್ತ ಆಗಿದೆ ಎಂದು ಪ್ರಕಟಿಸಲಾಗಿರುವುದರಲ್ಲಿ ಅರ್ಥ ಇಲ್ಲ. ಇನ್ನೂ ಪೋಡಿ ಮುಕ್ತ ಆಗಿಲ್ಲ. ಪಾಡ್ಯಾರಬೆಟ್ಟು, ಬರ್ಕೆ, ಅಂಗಡಿಮನೆ, ವಾರ್ಡ್‌ 1 ಇಲ್ಲೆಲ್ಲ ಪೋಡಿ ಮಾಡಿಲ್ಲ. ಸರ್ವೆಯವರಿಗೆ ರೂ. 2,000ದಂತೆ ಕೊಟ್ಟಿದ್ದೇವೆ. ಏಕೆ ಇನ್ನೂ ಕೆಲಸ ಆಗಿಲ್ಲ? ಎಂದು ಪಂಚಾಯತ್‌ಮಾಜಿ ಅಧ್ಯಕ್ಷೆ ಕಲ್ಯಾಣಿ ಪ್ರಶ್ನಿಸಿದರು. ಈ ಬಗ್ಗೆ ದಯಾನಂದ ಹೆಗ್ಡೆ ಮೊದಲಾದರು ದನಿಗೂಡಿಸಿದಾಗ, ಗ್ರಾಮಕರಣಿಕ ಶ್ರೀನಿವಾಸ್‌ ಅವರು ತಾಂತ್ರಿಕ ತೊಂದರೆಯಿಂದ ಹೀಗಾಗಿದೆ ಎಂದು ಸ್ಪಷ್ಟನೆ ನೀಡಿದರು.

ಸಾರ್ವಜನಿಕ ರಸ್ತೆ ಕಬಳಿಕೆ
ಬಸವನಕಜೆಯಲ್ಲಿ ಸಾರ್ವಜನಿಕ ರಸ್ತೆ ಕಬಳಿಕೆ ಆಗುತ್ತಿರುವ ಬಗ್ಗೆ ಪಂಚಾಯತ್‌ನ ಗಮನಸೆಳೆದು ವರ್ಷವೇ ಕಳೆದಿದ್ದರೂ ಏನೂ ಆಗಿಲ್ಲ. ಪೊಲೀಸರು ಈ ಸಿವಿಲ್‌ ಪ್ರಕರಣ ಕ್ರಿಮಿನಲ್‌ ಆಗುವವರೆಗೆ ಕಾಯುತ್ತಿದ್ದಾರೆಯೇ ಎಂದು ನವೀನ್‌ ಬಸವನಕಜೆ ಕೇಳಿದರು.

ನೀರಿನ ಘಟಕ ಅರ್ಧದಲ್ಲೇ ಬಾಕಿ
ಶುದ್ಧ ಕುಡಿಯುವ ನೀರಿನ ಘಟಕದ ಕೆಲಸ ಅರ್ಧದಲ್ಲೇ ನಿಂತಿದೆ ಎಂದು ಗ್ರಾಮಸ್ಥರು ಸಭೆಯ ಗಮನಕ್ಕೆ ತಂದಾಗ ಜಿ.ಪಂ. ಸದಸ್ಯೆ ಸುಜಾತಾ ಕೆ.ಪಿ. ಅವರು ಈ ಬಗ್ಗೆ ಪರಿಶೀಲನೆಗೆ ಜಿ.ಪಂ. ಸದನಸಮಿತಿ ಬರಲಿದೆ ಎಂದರು.

Advertisement

ಕರೆಂಟು ನೀಡಿಲ್ಲ
ಅಂಗನವಾಡಿ ಬಳಿ ತನ್ನ ಮಗಳಾದ ಬೇಬಿ ಅವರ ಮನೆಯ ಗೋಡೆಗೆ ತೂತು ಮಾಡಿ ಒಂದು ಬಲ್ಬ್ ಸಿಕ್ಕಿಸಿ, ಮೀಟರ್‌ ಹಾಕಿ ಹೋಗಿದ್ದಾರೆ, ಕರೆಂಟು ಇನ್ನೂ ಕೊಟ್ಟಿಲ್ಲ ಎಂದು ತಾಯಿ ಗುಲಾಬಿ ಸಮಸ್ಯೆ ಮಂಡಿಸಿದರು.

ಬಾಲ್ಯವಿವಾಹ ವಿರುದ್ಧ ಪ್ರತಿಜ್ಞಾ ವಿಧಿ ಸ್ವೀಕಾರ
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ ಶುಭಾ ಅವರು ಬಾಲ್ಯವಿವಾಹದ ಕುರಿತಾದ ಕಾಯಿದೆಯ ಬಗ್ಗೆ ಮಾಹಿತಿ ನೀಡಿ, 18 ವರ್ಷದೊಳಗಿನ ಹುಡುಗಿ, 21ವರ್ಷದೊಳಗಿನ ಹುಡುಗ ಇವರ ಮದುವೆ ಬಾಲ್ಯವಿವಾಹ ಎಂದು ಪರಿಗಣಿಸಲ್ಪಡುತ್ತದೆ. ಇಂಥ ಪ್ರಕರಣಗಳಲ್ಲಿ ಪಾಲ್ಗೊಂಡವರಿಗೆ 1ರಿಂದ 2 ವರ್ಷ ಜೈಲು ವಾಸ, 1 ಲಕ್ಷ ರೂ. ದಂಡ ವಿಧಿಸಲಾಗುವುದು ಎಂದರು. ಬಾಲ್ಯವಿವಾಹ ಕುರಿತಾದ ವಿರೋಧ ಸಂಕಲ್ಪವಿಧಿಯನ್ನು ಗ್ರಾಮಸ್ಥರು ಹಾಗೂ ಗ್ರಾ.ಪಂ. ಸದಸ್ಯರಿಗೆ ಬೋಧಿಸಿದರು. ವಿವಿಧ ಇಲಾಖೆಗಳ ಅಧಿಕಾರಿಗಳು ಮಾಹಿತಿ ನೀಡಿದರು. ನೋಡಲ್‌ ಅಧಿಕಾರಿಯಾಗಿ ತಾ.ಪಂ. ವಿಸ್ತರಣಾಧಿಕಾರಿ ದಯಾನಂದ ಶೆಟ್ಟಿ ಕಾರ್ಯನಿರ್ವಹಿಸಿದರು. ಉಪಾಧ್ಯಕ್ಷ ಅರುಣಾ ಹೆಗ್ಡೆ, ಸದಸ್ಯರು, ಪಿಡಿಒ ರವಿ ಉಪಸ್ಥಿತರಿದ್ದರು.

ಔಷಧ ಕೊರತೆ 
ಮೂಡಬಿದಿರೆ ಸ. ಆರೋಗ್ಯ ಕೇಂದ್ರದಲ್ಲಿ ಔಷಧ ಕೊರತೆ ಇರುವ ಬಗ್ಗೆ ಶಾಸಕರು ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಜಿಲ್ಲಾ ಆರೋಗ್ಯಾಧಿಕಾರಿಯವರ ಗಮನಕ್ಕೆ ತರುತ್ತೇನೆ ಎಂದು ದಯಾನಂದ ಹೆಗ್ಡೆ ಅವರ ಪ್ರಶ್ನೆಯೊಂದಕ್ಕೆ ಜಿ.ಪಂ. ಸದಸ್ಯೆ ಸುಜಾತಾ ಸಮಜಾಯಿಷಿ ನೀಡಿದರು.

ಅಪಾಯಕಾರಿ ಮರ 
ಬನ್ನಡ್ಕದ ಸುಂದರಿ ಮಾತನಾಡಿ ತಮ್ಮ ಮನೆಯ ಪಕ್ಕದ ರಸ್ತೆಯ ಬದಿಯಲ್ಲಿ ದೊಡ್ಡ ಗುಗ್ಗಳದ ಮರ ಬೆಳೆದುನಿಂತಿದ್ದು ಅಪಾಯಕಾರಿ ಸ್ಥಿತಿಯಲ್ಲಿದೆ; ಅದರ ಕೊಂಬೆಗಳನ್ನು ತೆಗೆಸಿಕೊಡಿ ಎಂದು ವಿನಂತಿಸಿದಾಗ, ಅಷ್ಟು ದೊಡ್ಡ ಮರವನ್ನು ಹತ್ತುವವರ್ಯಾರೂ ಇಲ್ಲ. ಜನ ಮಾಡಿಕೊಡಿ, ಖರ್ಚು ಕೊಡುತ್ತೇವೆ ಎಂದು ಶ್ರೀನಾಥ್‌ ಸುವರ್ಣ ಉತ್ತರಿಸಿದರು. ಅರಣ್ಯ ಇಲಾಖೆಯವರಾದರೂ ಇದೊಂದು ತುರ್ತು ಎಂದು ಈ ಮರವನ್ನು ತೆರವು ಮಾಡಬಾರದೇ ಎಂದು ಗ್ರಾಮಸ್ಥರು ಸೂಚಿಸಿದರು. ಅರಣ್ಯ ಇಲಾಖೆಯವರು ಮರ ಕಡಿಯುವ ಕ್ರಮ ಇಲ್ಲ. ಗೆಲ್ಲುಗಳನ್ನಷ್ಟೇ ತೆಗೆಯಬಹುದು ಎಂದು ಅಧ್ಯಕ್ಷರು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next