Advertisement

ಗ್ರಾಮದಲ್ಲಿ ಸುತ್ತಾಡಿದ ಪಂಚಾಯತ್‌ರಾಜ್‌ ಇಲಾಖೆಯ ಸಿಎಸ್‌;ಮಾತುಕತೆ

10:27 AM Mar 22, 2023 | Team Udayavani |

ಹಳೆಯಂಗಡಿ: ರಾಜ್ಯ- ರಾಷ್ಟ್ರದ ಗಮನ ಸೆಳೆದಿರುವ ಪಡುಪಣಂಬೂರು ಗ್ರಾ.ಪಂ. ನಿಜಕ್ಕೂ ಮಾದರಿಯಾಗಿದೆ. ಇದರ ಕಾರ್ಯ ವೈಖರಿಯನ್ನು ಇತರ ಪಂಚಾ ಯತ್‌ಗಳು ಅನುಸರಿಸಿದಲ್ಲಿ ಸರಕಾರದ ಯೋಜನೆಗಳು, ಪ್ರಗತಿ ಪರ ಚಿಂತನೆಗಳು ಉತ್ತಮವಾಗಿ ಜಾರಿಗೊಂಡು ದೇಶ ಉತ್ತಮ ಅಭಿವೃದ್ಧಿ ಕಾಣಲು ಸಾಧ್ಯವಿದೆ. ಗ್ರಾಮಸ್ಥರ ಸ್ಪಂದನೆಯನ್ನು ಅಭಿವೃದ್ಧಿಗೆ ವೇದಿಕೆ ಮಾಡಿಕೊಂಡಿರುವುದೇ ಇಲ್ಲಿನ ವೈಶಿಷ್ಟ್ಯ ಎಂದು ಗಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆಯ ರಾಜ್ಯ ಮುಖ್ಯ ಕಾರ್ಯದರ್ಶಿ (ಸಿಎಸ್‌-ಚೀಫ್ ಸೆಕ್ರೆಟರಿ) ಉಮಾ ಮಹಾದೇವನ್‌ ಹೇಳಿದರು.

Advertisement

ಪಡುಪಣಂಬೂರು ಗ್ರಾ.ಪಂ.ಗೆ ಇತರ ಉನ್ನತ ಅಧಿ ಕಾರಿಗಳೊಂದಿಗೆ  ದಿಢೀರ್‌ ಭೇಟಿ ನೀಡಿ ಗ್ರಾ.ಪಂ.ನೆಲ್ಲೆಡೆ ವೀಕ್ಷಣೆ ನಡೆಸಿ ಅವರು ಮಾತನಾಡಿದರು. ದ.ಕ. ಜಿ.ಪಂ. ಸಿಇಒ ಡಾ| ಕುಮಾರ್‌, ಪಡುಪಣಂಬೂರು ಗ್ರಾ.ಪಂ ಅಧ್ಯಕ್ಷೆ ಮಂಜುಳಾ, ಪಿಡಿಒ ರಮೇಶ್‌ ನಾಯ್ಕ ಗ್ರಾ.ಪಂ.ನ ಸಾಧನೆ, ಯೋಜನೆಗಳ ಅನುಷ್ಠಾನ, ಅವುಗಳ ನಿರ್ವಹಣೆಯ ಬಗ್ಗೆ ವಿವರಿಸಿದರು.

ಉಮಾ ಮಹಾದೇವನ್‌ ಇದೇ ಸಂದರ್ಭದಲ್ಲಿ ಬೆಂಗಳೂರಿನ ಕಚೇರಿಯೊಂದಿಗೆ ಗೂಗಲ್‌ ಮೀಟ್‌ ಸಭೆ ನಡೆಸುವ ಮೂಲಕ ಗ್ರಾ.ಪಂ.ನಲ್ಲಿ ತಂತ್ರಜ್ಞಾನ ಬಳಕೆಯ ಬಗ್ಗೆ ಪರಿಶೀಲನೆ ನಡೆಸಿದರು. ಮಂಗಳೂರು ತಾಲೂಕು ಮುಖ್ಯ ಕಾ.ನಿ. ಅಧಿಕಾರಿ ಲೋಕೇಶ್‌, ಮೂಲ್ಕಿ ತಾಲೂಕು ಮುಖ್ಯ ಕಾ.ನಿ. ಅಧಿಕಾರಿ ದಯಾವತಿ, ಪಡುಪಣಂಬೂರು ಗ್ರಾ.ಪಂ. ಸದಸ್ಯರಾದ ಶ್ವೇತಾ ಯಾನೆ ಪುಷ್ಪಾ, ಪವಿತ್ರಾ, ಜಿ.ಪಂ.ಅಧಿ ಕಾರಿಗಳು, ತಾ.ಪಂ. ಹಾಗೂ ಪಡುಪಣಂಬೂರು ಗ್ರಾ.ಪಂ. ಸಿಬಂದಿ ಉಪಸ್ಥಿತರಿದ್ದರು.

ಮೆಚ್ಚುಗೆ
ಉಮಾ ಮಹಾದೇವನ್‌ ಅವರು ಮಂಗಳವಾರ ಮಂಗಳೂರು ತಾಲೂಕಿನ ಕಂದಾವರ ಮತ್ತು ಮೂಲ್ಕಿ ತಾಲೂಕಿನ ಪಡುಪಣಂಬೂರು, ಕೆಮ್ರಾಲ್‌ ಹಾಗೂ ಪೆರ್ಮುದೆ ಗ್ರಾ.ಪಂ., ಡಿಜಿಟಲ್‌ ಲೈಬ್ರೆರಿ, ಪುಸ್ತಕ ಗೂಡುಗಳಿಗೆ ಭೇಟಿ ನೀಡಿ ಮೆಚ್ಚುಗೆ ವ್ಯಕ್ತ ಪಡಿಸಿದರು. ಅನಂತರ ಕಂದಾವರ ಗ್ರಾಮ ಪಂಚಾಯತಿ ಸಂಜೀವಿನಿ ಘಟಕದ ಆಹಾರ ತಯಾರಿಕೆ ಭೇಟಿ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದರು.

ಕೆಮ್ರಾಲ್‌ ಸ್ವತ್ಛ ಸಂಕೀರ್ಣವನ್ನು ಪರಿಶೀಲಿಸಿದ ಅವರು, ಮಹಿಳಾ ಚಾಲಕರು, ಸ್ವತ್ಛತಾ ಸಿಬಂದಿಯೊಂದಿಗೆ ಚರ್ಚಿಸಿದರು. ಮಹಿಳೆಯರು
ಉದ್ಯೋಗದಲ್ಲಿ ತೊಡಗಿಕೊಂಡಿರುವ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು. ಜಿ.ಪಂ. ಸಿಇಒ ಡಾ| ಕುಮಾರ್‌ ಹಾಗೂ ಇತರ ಅಧಿಕಾರಿಗಳು ಈ
ಸಂದರ್ಭದಲ್ಲಿದ್ದರು.

Advertisement

ಗ್ರಾಮದೆಲ್ಲೆಡೆ ಸುತ್ತಾಡಿದರು
ಉಮಾ ಮಹಾದೇವನ್‌ ಪಡುಪಣಂಬೂರು ಗ್ರಾ.ಪಂ. ಕಚೇರಿಯನ್ನು ವೀಕ್ಷಿಸಿ ಮೆಚ್ಚುಗೆ ಸೂಚಿಸಿದರು. ಬಳಿಕ ಡಿಜಿಟಲ್‌ ಗ್ರಂಥಾಲಯದಲ್ಲಿ ಮಕ್ಕಳೊಂದಿಗೆ ಹರಟಿದರು, ಚೆಸ್‌ ಆಡಿಸಿದರು. ಘನತ್ಯಾಜ್ಯ ಘಟಕದ ನಿರ್ವಹಣೆ, ಬಸ್‌ ನಿಲ್ದಾಣಗಳಲ್ಲಿ ತೆರೆಯಲಾಗಿರುವ ಪುಸ್ತಕ ಗೂಡು ವೀಕ್ಷಿಸಿದರು. ಅಂಗನವಾಡಿ ಮಕ್ಕಳೊಂದಿಗೆ ಮಾತುಕತೆ ನಡೆಸಿದರು.

ಅನುಷ್ಠಾನಗೊಂಡಿರುವ ಯೋಜನೆಗಳ ಬಗ್ಗೆ ಪರಿಶೀಲಿಸಿ, ಪ್ರಶ್ನಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಗ್ರಾ.ಪಂ. ಸಿಬಂದಿ ಹಾಗೂ ಸದಸ್ಯರ ನಡುವಿನ ಬಾಂಧವ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿ, ಇನ್ನಷ್ಟು ಉತ್ತಮ ವಿನೂತನ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಮೂಲಕ ಸುಸ್ಥಿರ ಅಭಿವೃದ್ಧಿಯನ್ನು ಕಾಪಾಡಿಕೊಳ್ಳುವ ಬಗ್ಗೆ ಸಲಹೆ ಸೂಚನೆಗಳನ್ನು ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next