Advertisement

ಪಡುಪಣಂಬೂರು ಗ್ರಾಮ ಸಭೆ

11:46 AM Jan 19, 2018 | |

ಪಡುಪಣಂಬೂರು: ಪಡುಪಣಂಬೂರು ಪಂ.ನ ಬೆಳ್ಳಾಯರು ಕೆರೆಕಾಡು ರಸ್ತೆ ಹಾಗೂ ಜಳಕದ ಕೆರೆಯ ಕಾಮಗಾರಿ ನಿಂತಿದ್ದು, ಇದರ ಹಿನ್ನಡೆಯಲ್ಲಿ ರಾಜಕೀಯವಾದ ಪರ ವಿರೋಧದ ನಡುವೆ ಗ್ರಾಮದ ಅಭಿವೃದ್ಧಿಗೆ ತೊಡಕಾಗಿದೆ. ಪಂಚಾಯತ್‌ ಪ್ರತಿನಿಧಿಗಳ ಸಹಿತ ಸ್ಥಳೀಯ ರಾಜಕೀಯ ನಾಯಕರ ಹಸ್ತಕ್ಷೇಪ ಸರಿಯಲ್ಲ ಎಂದು ಗ್ರಾಮಸ್ಥರು ಗ್ರಾಮಸಭೆಯಲ್ಲಿ ಆಕ್ಷೇಪ ವ್ಯಕ್ತಪಡಿಸಿ, ನಿಂತ ಕಾಮಗಾರಿಯು ಕೂಡಲೆ ಪ್ರಾರಂಭಗೊಳ್ಳಬೇಕು ಎಂದು ಆಗ್ರಹಿಸಿದ ಘಟನೆ ಪಡುಪಣಂಬೂರು ಗ್ರಾಮಸಭೆಯಲ್ಲಿ ನಡೆಯಿತು.

Advertisement

ಬೆಳ್ಳಾಯರು ಕೆರೆಕಾಡಿನ ಸರಕಾರಿ ಶಾಲೆಯಲ್ಲಿ ನಡೆದ ಪಡುಪಣಂಬೂರು ಗ್ರಾಮ ಪಂಚಾಯತ್‌ನ ಎರಡನೇ ಅವಧಿಯ ಅಧ್ಯಕ್ಷ ಮೋಹನ್‌ದಾಸ್‌ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಮಾಧವ ಶೆಟ್ಟಿಗಾರ್‌ ಪ್ರಶ್ನಿಸಿ, ರಸ್ತೆ ಮತ್ತು ಕೆರೆ ಯಾಕಾಗಿ ಅರ್ಧದಲ್ಲಿಯೇ ನಿಂತಿದೆ. ಯೋಜನೆ ಸೂಕ್ತವಾಗಿಲ್ಲದೇ ಇದ್ದಲ್ಲಿ ಆರಂಭಿಸಿದ್ದಾದರೂ ಏಕೆ? ಗ್ರಾಮ ಪಂಚಾಯತ್‌ಗೂ ಮಾಹಿತಿ ಇಲ್ಲದಿದ್ದರೆ ಇದರಲ್ಲಿ ನಡೆದಿರುವುದು ಕೇವಲ ರಾಜಕೀಯ ಮಾತ್ರವೇ ಎಂದರು.

ಆರೋಪ-ಪ್ರತ್ಯಾರೋಪ
ಪಂ.ಅಧ್ಯಕ್ಷರು ಪ್ರಶ್ನೆಗೆ ಪ್ರತಿಕ್ರಿಯಿಸಿ, ಕೆರೆಯ ರಸ್ತೆಗೆ 85 ಲಕ್ಷ ರೂ. ವೆಚ್ಚದಲ್ಲಿ ಕಾಂಕ್ರೀಟ್‌ ಹಾಗೂ 2 ಕೋಟಿ ರೂ. ವೆಚ್ಚದಲ್ಲಿ ಕೆರೆಯನ್ನು ಮೂಡಾದ ಮೂಲಕ ದುರಸ್ತಿಯ ಬಗ್ಗೆ ಪಂಚಾಯತ್‌ಗೆ ಯಾವುದೇ ರೀತಿಯಲ್ಲಿ ಅಧಿಕೃತ ಮಾಹಿತಿ ಇಲ್ಲ. ಸಂಬಂಧಿಸಿದ ಇಂಜಿನಿಯರ್‌ರಲ್ಲಿ ದೂರವಾಣಿಯಲ್ಲಿ ವಿಚಾರಿಸಿದಾಗ ರಸ್ತೆಯ ಯೋಜನಾ ವರದಿ ಸಿದ್ಧತೆಯಲ್ಲಿದೆ. ಕೆರೆಯ ಅಭಿವೃದ್ಧಿಯ ಯೋಜನಾ ವರದಿಯು ಬೆಂಗಳೂರಿಗೆ ಮಂಜೂರಾತಿಗಾಗಿ ಕಳುಹಿಸಲಾಗಿದೆ ಎಂದು ಉತ್ತರ ಸಿಕ್ಕಿದೆ ಎಂದರು.

ಈ ವಿಷಯಕ್ಕೆ ಮಧ್ಯೆ ಪ್ರವೇಶಿದ ಸದಸ್ಯ ಉಮೇಶ್‌ ಪೂಜಾರಿ, ಪ್ರಸ್ತುತ ಕಾಮಗಾರಿಗೆ ಅಧ್ಯಕ್ಷರು ತಡೆ ನೀಡಿದ್ದಾರೆ ಎಂದು ಆರೋಪಿಸಿದರು. ಇದಕ್ಕೆ ಧ್ವನಿಗೂಡಿಸಿದ ಸವಿತಾ ಶರತ್‌, ಅಧ್ಯಕ್ಷರೊಂದಿಗೆ ಉಪಾಧ್ಯಕ್ಷರು ಹಾಗೂ ಸದಸ್ಯರು ಸಹ ಕಾಮಗಾರಿಗೆ ತಡೆ ನೀಡಿದ್ದಾರೆ ಎಂದರು. ಈ ವಿಷಯವು ಸಭೆಯಲ್ಲಿ ಪರ-ವಿರೋಧವಾಗಿ ಭಾರೀ ಚರ್ಚೆನಡೆಯಿತು. ಎರಡು ರಾಜಕೀಯ ಪಕ್ಷದ ಪ್ರಮುಖರು ಶಿಲಾನ್ಯಾಸ, ಉದ್ಘಾಟನ ಕಾರ್ಯಕ್ರಮಕ್ಕೆ ತಮ್ಮನ್ನು ಆಹ್ವಾನಿಸುವುದಿಲ್ಲ ಎಂದು ಪರಸ್ಪರ ಆರೋಪ ಪ್ರತ್ಯಾರೋಪ ಮಾಡಿಕೊಂಡರು. ಕೊನೆಗೆ ಅಧ್ಯಕ್ಷರು, ಉಪಾಧ್ಯಕ್ಷರು, ಸ್ಥಳೀಯ ಸದಸ್ಯರು ಸ್ಪಷ್ಟನೆ ನೀಡಿ ಅಭಿವೃದ್ಧಿಯಲ್ಲಿ ರಾಜಕೀಯ ಇಲ್ಲ. ಯಾವುದೇ ರೀತಿಯಲ್ಲೂ ಕಾಮಗಾರಿಗೆ ತಡೆ ನೀಡಿಲ್ಲ ಎಂದು ಚರ್ಚೆಗೆ ತೆರೆ ಎಳೆದರು.

ಕುಡಿಯುವ ನೀರು ಕಲುಷಿತ
ಕೆರೆಕಾಡಿನ ಹೌಸಿಂಗ್‌ ಬೋರ್ಡ್‌ ಕಾಲನಿ ಬಳಿ ಕುಡಿಯುವ ನೀರು ಕಲುಷಿತಗೊಂಡಿದೆ. ಕನಿಷ್ಠ ವಾರಕ್ಕೆ ಎರಡು ಬಾರಿಯಾದರೂ ಬೇರೆ ಕಡೆಗಳಿಂದ ಶುದ್ಧ ನೀರು ಸರಬರಾಜು ಮಾಡಿ. ಮಕ್ಕಳು ನೀರು ಕುಡಿಯಲು ಹೆದರುತ್ತಿದ್ದಾರೆ. ಮನೆ ಪದಾರ್ಥ ಮಾಡಲು ಸಹ ಆಗುತ್ತಿಲ್ಲ. ಎಂದು ಗ್ರಾಮಸ್ಥೆ ಗೀತಾ ದೂರಿಕೊಂಡರು. ಅಧ್ಯಕ್ಷರ ಸಹಿತ ಸದಸ್ಯರು, ನೀರಿನ ಸಮಿತಿಯವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುವ ಭರವಸೆ ನೀಡಿದರು.

Advertisement

ಸಮಸ್ಯೆ ಪರಿಹಾರಕ್ಕೆ ಆಗ್ರಹ
ಕದಿಕೆ, ಸಸಿಹಿತ್ಲು ನದಿಯ ಬಳಿ ರಕ್ಷಣಾ ಗೋಡೆ, ಮಲೇರಿಯಾ ನಿಯಂತ್ರಿಸಲು ಫಾಗಿಂಗ್‌, ಹಾವು-ನಾಯಿ ಕಡಿತಕ್ಕೆ ಚುಚ್ಚುಮದ್ದು, ಮೆಸ್ಕಾಂ ಸಿಬಂದಿಗಳಿಂದ ತೊಂದರೆ, ರಸ್ತೆ ಬದಿಯ ಮರ ಕಡಿದು ರಸ್ತೆಯಲ್ಲಿಯೇ ಎಸೆದು ಹೋಗುತ್ತಾರೆ. ಮಾತೃಪೂರ್ಣ ಯೋಜನೆಯಲ್ಲಿ ಬದಲಾವಣೆ ಮಾಡಿ, ಹಸು ಕದ್ದು ಸಾಗಿಸಿದರೂ ವಿಮೆ ಪರಿಹಾರ ಸಿಗಲಿ, ಮೂಡಾದ ರಸ್ತೆ ನಿರ್ಮಾಣಕ್ಕೆ ಆಕ್ಷೇಪ, ಭೀಮಕೆರೆ ಅಭಿವೃದ್ಧಿ, ಹಳೇ ವಿದ್ಯುತ್‌ ವಯರ್‌ಗಳನ್ನು ಬದಲಾಯಿಸಿರಿ, ತಾಂತ್ರಿಕ ಮಂಜೂರಾತಿ ಸಿಕ್ಕಲ್ಲಿ ಕೆಲಸ ಪ್ರಾರಂಭಿಸುವ ಸೂಚನೆ, ಹಕ್ಕು ಪತ್ರದ ಫಲಾನುಭವಿಗಳಿಗೆ ಸರಕಾರದಿಂದ ಹಣ ಮಂಜೂರಾಗಲಿ ಮುಂತಾದ ಆಗ್ರಹಗಳು ಸಭೆಯಲ್ಲಿ ಕೇಳಿ ಬಂತು.

ಗ್ರಾಮಸ್ಥರಾದ ಮಾಧವ ಶೆಟ್ಟಿಗಾರ್‌, ರಾಜೇಶ್‌ ಕುಮಾರ್‌, ಲಕ್ಷ್ಮಣ್‌ ಪೂಜಾರಿ, ಧರ್ಮಾನಂದ ಶೆಟ್ಟಿಗಾರ್‌, ಹರೀಶ್‌ ಶೆಟ್ಟಿ, ಸವಿತಾ ಶರತ್‌, ವಾಹಿದ್‌ ತೋಕೂರು, ಗೀತಾ, ಸುಂದರ ಸಾಲ್ಯಾನ್‌, ಖಾದರ್‌ ಕದಿಕೆ, ಲತಾ ಕಲ್ಲಾಪು ಮತ್ತಿತರರು ಚರ್ಚೆಯಲ್ಲಿ ಪಾಲ್ಗೊಂಡರು.

ತಾ.ಪಂ. ಸದಸ್ಯ ದಿವಾಕರ ಕರ್ಕೇರ, ಪಂ.ಉಪಾಧ್ಯಕ್ಷೆ ಸುರೇಖಾ ಕರುಣಾಕರ್‌, ಸದಸ್ಯರಾದ ವಿನೋದ್‌ ಸಾಲ್ಯಾನ್‌ ಬೆಳ್ಳಾಯರು, ಕುಸುಮಾ, ಲೀಲಾ ಬಂಜನ್‌, ಪುಷ್ಪಾವತಿ, ದಿನೇಶ್‌ ಕುಲಾಲ್‌, ಸಂತೋಷ್‌ ಕುಮಾರ್‌, ಹೇಮಂತ್‌ ಅಮೀನ್‌, ಮಂಜುಳಾ, ವನಜಾ, ಸಂಪಾವತಿ, ಉಮೇಶ್‌ ಪೂಜಾರಿ, ಪುಷ್ಪಾ, ಮೆಸ್ಕಾಂ ಇಲಾಖೆಯ ಕೌಶಿಕ್‌, ದಾಮೋದರ್‌, ಕಂದಾಯ ಇಲಾಖೆಯ ಮೋಹನ್‌ ಟಿ.ಆರ್‌., ಪಶು ಸಂಗೋಪನ ಇಲಾಖೆಯ ಪ್ರಭಾಕರ ಶೆಟ್ಟಿ, ಕೃಷಿ ಇಲಾಖೆಯ ವೈ. ಎಸ್‌. ನಿಂಗಣ್ಣಗೌಡರ್‌, ಇಂಜಿನಿಯರ್‌ ಪ್ರಶಾಂತ್‌ ಆಳ್ವಾ, ಅಂಗನವಾಡಿ ಮೇಲ್ವಿಚಾರಕರಾದ ಅಶ್ವಿ‌ನಿ ಎಂ.ಕೆ., ನಾಗರತ್ನ, ಆರೋಗ್ಯ ಕೇಂದ್ರದ ಡಾ| ಮಾದವ ಪೈ, ಸುಜಾತಾ, ವಾರಿಜಾ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು. ಪಂಚಾಯತ್‌ ಅಭಿವೃದ್ಧಿ ಅಧಿಕಾರಿ ಅರುಣ್‌ ಪ್ರದೀಪ್‌ ಡಿ’ಸೋಜಾ ಸ್ವಾಗತಿಸಿದರು. ಕಾರ್ಯದರ್ಶಿ ಲೋಕನಾಥ ಭಂಡಾರಿ ವರದಿ ಮಂಡಿಸಿ, ವಂದಿಸಿದರು. ಲೆಕ್ಕಾಧಿಕಾರಿ ಶರ್ಮಿಳಾ ಹಿಮಕರ್‌ ಕದಿಕೆ ಲೆಕ್ಕಪತ್ರ ಮಂಡಿಸಿದರು.

ಕಳಪೆ ಕಾಮಗಾರಿಗೆ ವಿರೋಧ 
ನಮ್ಮ ಪಂಚಾಯತ್‌ನ ಎಲ್ಲಾ ಸದಸ್ಯರು ಯಾವುದೇ ಅಭಿವೃದ್ಧಿ ಕಾಮಗಾರಿಗೆ ವಿರೋಧ ವ್ಯಕ್ತಪಡಿಸುವುದಿಲ್ಲ, ಕಳಪೆ ಕಾಮಗಾರಿಯಾದರೆ ವಿರೋ ಧಿಸುತ್ತೇವೆ. ಗ್ರಾಮ ಪಂಚಾಯತ್‌ ಮಟ್ಟದಲ್ಲಿ ನಡೆಯುವ ಕಾಮಗಾರಿಯ ಬಗ್ಗೆ ಕನಿಷ್ಠ ಮಾಹಿತಿ ನೀಡಿದರೆ ಅನುಕೂಲವಾಗುತ್ತದೆ. ಕಾಮಗಾರಿ ನಡೆದ ಅನಂತರ ಅಧ್ಯಕ್ಷರ ಪತ್ರವನ್ನು ಪಡೆಯಲು ಮಾತ್ರ ಸೀಮಿತರಾಗಿರುವುದು ಸರಿಯಲ್ಲ. ಗ್ರಾಮಸ್ಥರ ಪ್ರಶ್ನೆಗೆ ಪಂಚಾಯತ್‌ ಉತ್ತರಿಸಬೇಕಾಗುತ್ತದೆ. ಸಮಸ್ಯೆಗೆ ಸ್ಪಂದಿಸಲು ಎಲ್ಲರ ಸಹಕಾರ ಅಗತ್ಯ. ರಾಜ್ಯ ಮಟ್ಟದಲ್ಲಿ ಗಾಂಧಿ ಗ್ರಾಮ ಪ್ರಶಸ್ತಿ ಪಡೆಯಲು ಗ್ರಾಮಸ್ಥರ ನೆರವನ್ನು ಮರೆಯುವುದಿಲ್ಲ. ಸ್ವಚ್ಛತೆಗೆ ವಿಶೇಷ ಆದ್ಯತೆ ಕೊಡಿ.
– ಮೋಹನ್‌ದಾಸ್‌, ಅಧ್ಯಕ್ಷರು, ಪಡುಪಣಂಬೂರು ಗ್ರಾ.ಪಂ

Advertisement

Udayavani is now on Telegram. Click here to join our channel and stay updated with the latest news.

Next