ಸುಳ್ಯಪದವು : ತುಳುನಾಡಿನ ಮಣ್ಣಿನಲ್ಲಿ ಧಾರ್ಮಿಕ ಕೇಂದ್ರಗಳ ಸಂಖ್ಯೆ ವೃದ್ಧಿಯಾಗುತ್ತಿದೆ. ಪಡುಮಲೆ ಕ್ಷೇತ್ರ ಅಭಿವೃದ್ಧಿ ಹೊಂದುತ್ತಿದ್ದು, ಪ್ರವಾಸಿ, ಧಾರ್ಮಿಕ ಶಕ್ತಿ ಕೇಂದ್ರವಾಗಿ ಬೆಳೆಯುತ್ತಿದೆ ಪಡುಮಲೆ ಕ್ಷೇತ್ರದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಕೆ.ಪಿ. ಸಂಜೀವ ರೈ ಹೇಳಿದರು.
ಸುಳ್ಯಪದವು ಶ್ರೀ ಬ್ರಹ್ಮಬೈದರ್ಕಳ ಗರಡಿಯ ಕಲಶಾಭಿಷೇಕದ ಧಾರ್ಮಿಕ ಸಭೆಯನ್ನು ಉದ್ಘಾಟಿಸಿದ ಅವರು, ಕಳೆದ ಸರಕಾರ ಕ್ಷೇತ್ರದ ಅಭಿವೃದ್ಧಿಗೆ 5 ಕೋಟಿ ರೂ. ಮೀಸಲಿರಿಸಿತ್ತು. ಅದರ ಪ್ರಯೋಜನ ಪಡೆಯಲು ಸಾಧ್ಯವಾಗದೇ ಇರುವುದು ಬೇಸರ ತಂದಿದೆ. ಪಡುಮಲೆ ಪ್ರದೇಶದಲ್ಲಿ ನಿರಂತರವಾಗಿ ಧಾರ್ಮಿಕ ಕಾರ್ಯಗಳು ನಡೆಯುತ್ತಿವೆ ಎಂದು ಹೇಳಿದರು.
ಮಂಗಳೂರು ಸಂತ ಅಲೋಶಿಯಸ್ ಕಾಲೇಜಿನ ಉಪನ್ಯಾಸಕ ಡಾ| ಗಣೇಶ್ ಅಮೀನ್ ಕುಮಾರ್ ಧಾರ್ಮಿಕ ಉಪನ್ಯಾಸ ನೀಡಿ, ಗರಡಿಗಳು ಧಾರ್ಮಿಕ ಕೇಂದ್ರಗಳಾಗಿವೆ. ಇಷ್ಟು ಸಂಖ್ಯೆಯಲ್ಲಿ ಭಕ್ತರು ಸೇರಿದಾಗ ನಾವು ಗರಡಿಯಲ್ಲಿ ಕೋಟಿ ಚೆನ್ನಯರನ್ನು ಕಾಣಬಹುದಾಗಿದೆ. ತುಳುನಾಡಿನ ಸಂಸ್ಕೃತಿ ವಿಶೇಷವಾಗಿದೆ. ಅದನ್ನು ಉಳಿಸಿ ಬೆಳೆಸಬೇಕು ಎಂದರು.
ಸುಳ್ಯಪದವು ಗರಡಿ ಮುಖ್ಯಸ್ಥ ದಾಮೋದರ ಮಣಿಯಾಣಿ ಮಾತನಾಡಿ, ಕೇವಲ 8 ತಿಂಗಳಲ್ಲಿ ಪುನಃಪ್ರತಿಷ್ಠಾ ಕಲಶಾಭಿಷೇಕ ಯಶಸ್ವಿಯಾಗಲು ಊರ ಮತ್ತು ಪರವೂರ ಭಕ್ತರು ಕಾರಣರಾಗಿದ್ದಾರೆ. ಧಾರ್ಮಿಕ ರಂಗದಲ್ಲಿ ಶಾಂತಿ, ನೆಮ್ಮದಿ ಸಿಗುತ್ತದೆ ಎಂದು ಹೇಳಿದರು. ಅವರನ್ನು ಜೀರ್ಣೋದ್ಧಾರ ಮತ್ತು ಕಲಶಾಭಿಷೇಕ ಸಮಿತಿಯಿಂದ ಗೌರವಿಸಲಾಯಿತು.
ಪುತ್ತೂರು ಶ್ರೀ ರಾಮಕೃಷ್ಣ ಪ್ರೌಢ ಶಾಲೆಯ ಸಂಚಾಲಕ ಕಾವು ಹೇಮನಾಥ ಶೆಟ್ಟಿ, ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ಮಹಮ್ಮದ್ ಬಡಗನ್ನೂರು, ಬೆಳ್ಳೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಲತಾ ಯುವರಾಜ್, ಬೆಳ್ಳಾರೆ ಅರಣ್ಯಾಧಿಕಾರಿ ಸಂತೋಷ್ ಕುಮಾರ್ ರೈ ಸಬ್ರುಕಜೆ, ನಿಡ್ಪಳ್ಳಿ ಕರ್ನಪ್ಪಾಡಿ ಶ್ರೀ ಬ್ರಹ್ಮಬೈದರ್ಕಳ ಗರಡಿಯ ಅಧ್ಯಕ್ಷ ಶಿವಪ್ಪ ಪೂಜಾರಿ ನುಳಿಯಾಲು, ಪರ್ಪುಂಜ ಶ್ರೀ ಬ್ರಹ್ಮಬೈದರ್ಕಳ ಗರಡಿಯ ಸಂಜೀವ ಪೂಜಾರಿ ಕೂರೇಲು, ಶ್ರೀ ಕ್ಷೇತ್ರ ಗೆಜ್ಜೆಗಿರಿ ನಂದನಬಿತ್ತಲು ಯಜಮಾನ ಶ್ರೀಧರ ಪೂಜಾರಿ, ಉಡುಪಿ ಪಾಂಗಾಳಗುಡ್ಡೆ ಶ್ರೀ ಬ್ರಹ್ಮಬೈದರ್ಕಳ ಗರಡಿ ಅಧ್ಯಕ್ಷ ಸುಧಾಕರ್ ಡಿ. ಅಮೀನ್, ನೆಟ್ಟಣಿಗೆ ಕುಳದಮನೆಯ ದಾಮೋದರ ಎನ್. ಎ. ಉಪಸ್ಥಿತರಿದ್ದರು. ಜೀರ್ಣೋದ್ಧಾರಕ್ಕೆ ಕೊಡುಗೆ ನೀಡಿದ ಸಂಘ ಸಂಸ್ಥೆಗಳಿಗೆ ಸ್ಮರಣಿಕೆ ನೀಡಲಾಯಿತು.
ಸಂಗೀತ ಶಿಕ್ಷಕ ದಾಮೋದರ ಮರದಮೂಲೆ ಪ್ರಾರ್ಥಿಸಿದರು. ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ರಘುನಾಥ ರೈ ನುಳಿಯಾಲು ಪ್ರಸ್ತಾವನೆಗೈದರು. ಅತಿಥಿಗಳನ್ನು ಅಣ್ಣು ಮೂಲ್ಯ ಸುಳ್ಯಪದವು, ಬಾಲಕೃಷ್ಣ ಪೂಜಾರಿ, ಸತೀಶ್ ಬಟ್ಟಂಗಳ, ಕರುಣಾಕರ, ಸವಿತಾ, ಸುಂದರ್ ಕನ್ನಡ್ಕ, ಗೋಪಾಲಕೃಷ್ಣ, ಸದಾನಂದ ರೈ, ವಿಟ್ಠಲ ಸುವರ್ಣ, ಜಾನಕಿ, ಆನಂದ ಪೂಜಾರಿ, ಪ್ರಕಾಶ್ ಮರದಮೂಲೆ ಗೌರವಿಸಿದರು. ಕಲಶಾಭಿಷೇಕ ಸಮಿತಿಯ ಪ್ರಧಾನ ಕಾರ್ಯದರ್ಶಿ ಗಿರೀಶ್ ಕುಮಾರ್ ಕನ್ನಡ್ಕ ಸ್ವಾಗತಿಸಿದರು. ಶಿಕ್ಷಕಿ ನಮಿತ ವಂದಿಸಿದರು. ಶಿಕ್ಷಕ ಚಂದ್ರಶೇಖರ್ ಸುಳ್ಯಪದವು ನಿರೂಪಿಸಿದರು.
ಹೊಸ ಅನುಭವ
ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷ ಜಯಂತ ನಡುಬೈಲು ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಬೇರೆ ಬೇರೆ ಕಡೆ ಬ್ರಹ್ಮಕಲಶದ ಕಾರ್ಯದ ನೇತೃತ್ವದ ವಹಿಸಿ ಯಶಸ್ವಿಯಾಗಿದ್ದೇನೆ. ಇಲ್ಲಿನ ಕಲಶಾಭಿಷೇಕ ಹೊಸ ಅನುಭವ ನೀಡಿದೆ. ಒಗ್ಗಟ್ಟಿನ ಫಲ ಇದು ಎಂದು ಹೇಳಿದರು.