Advertisement

ಪಡುಬಿದ್ರಿ: ಹೃದಯಭಾಗದಲ್ಲೇ ತ್ಯಾಜ್ಯ ಘಟಕ, ಪ್ಲಾಸ್ಟಿಕ್‌ ಮಯ ಪರಿಸರ

11:33 PM May 19, 2019 | Sriram |

ಪಡುಬಿದ್ರಿ: ಜಿಲ್ಲೆಯ ದೊಡ್ಡ ಪಂಚಾಯತ್‌ ಎನಿಸಿರುವ ಪಡುಬಿದ್ರಿಯ ಹೃದಯಭಾಗದಲ್ಲೇ ಎಸ್‌ಎಲ್‌ಆರ್‌ಎಂ ಘಟಕವೊಂದನ್ನು ಬೇರೆಡೆ ಎಲ್ಲೂ ಜಾಗ ಸಿಗದ ಕಾರಣ ಆರಂಭಿಸಲಾಗಿದ್ದು ಪ್ಲಾಸ್ಟಿಕ್‌ ಮಯ ವಾತಾವರಣವು ಇದೀಗ ಸರ್ವೆ ಸಾಮಾನ್ಯವಾಗಿ ಪರಿಣಮಿಸಿದೆ.

Advertisement

ಘನ, ದ್ರವ ತ್ಯಾಜ್ಯ ವಿಲೇವಾರಿ ಘಟಕ ಪ್ರತೀ ಗ್ರಾ.ಪಂ.ಗೆ ಅಗತ್ಯವಾಗಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತದ ಒತ್ತಡವು ಮೇಲಿಂದ ಮೇಲೆ ಬಂದಾಗ ಸುಮಾರು 6 ತಿಂಗಳ ಹಿಂದೆಯಷ್ಟೇ ಇದನ್ನು ನಿರ್ಮಿಸಲಾಗಿದೆ.

ಪಟ್ಟಾ ಜಾಗದ ಎದುರೇ ನಿರ್ಮಾಣ
ಜಿಲ್ಲೆಯ ಅತಿ ದೊಡ್ಡ ಗ್ರಾ. ಪಂ. ಆಗಿರುವ ಪಡುಬಿದ್ರಿ ಗ್ರಾ.ಪಂ. ತನ್ನ ನೂತನ ಕಟ್ಟಡ ನಿರ್ಮಾಣವಾಗುತ್ತಿರುವ ಪಟ್ಟಾ ಜಾಗದ ಎದುರೇ ಇದನ್ನು ನಿರ್ಮಿಸಲಾಗಿದೆ. ಹಾಗಾಗಿ ಕೇವಲ ಕೆಲವೇ ಕೆಲವು ವಾರ್ಡ್‌ಗಳ ಘನ ಹಸಿ ಮತ್ತು ಒಣ ತ್ಯಾಜ್ಯಗಳನ್ನು ಇದೀಗ ವಿಂಗಡಿಸುತ್ತಿರುವ ಈ ಘಟಕಕ್ಕೆ ಬಹಳಷ್ಟು ತ್ಯಾಜ್ಯ ಒದಗಣೆಯಾಗುತ್ತಿದೆ.

ವಿಂಗಡಿಸಿದ ತ್ಯಾಜ್ಯದ ರಾಶಿಯನ್ನು ಪೇರಿಸಿಡಲು ಸೂಕ್ತ ಕಟ್ಟಡಗಳಿಲ್ಲದೆ ಘಟಕದ ಹೊರಭಾಗದಲ್ಲೇ ಮಾರಾಟಕ್ಕೆ ಅಣಿಯಾಗಿಟ್ಟಿದ್ದಾರೆ.

ಇಲ್ಲಿನ ಪ್ಲಾಸ್ಟಿಕ್‌ ತ್ಯಾಜ್ಯಗಳು ಗಾಳಿಗೆ ಹೆದ್ದಾರಿಯತ್ತಲೂ ಹಾರಿ ಬರುತ್ತಿದ್ದು ಗ್ರಾಮ ಪಂಚಾಯತ್‌ ನೂತನ ಕಟ್ಟಡ ತೆರೆದುಕೊಂಡು ಜನಸಾಮಾನ್ಯರು ಪಂಚಾಯತ್‌ಗೆ ಬರುವಾಗ ತ್ಯಾಜ್ಯ ದರ್ಶನ ಸರ್ವೇ ಸಾಮಾನ್ಯವೆನಿಸಲಿದೆ. ಆದರೆ ಘಟಕದ ಉಸ್ತುವಾರಿ ನೋಡಿ ಕೊಳ್ಳುತ್ತಿರುವ ರಮೀಜ್‌ ಹುಸೈನ್‌ ಸಾರ್ವಜನಿಕರೇ ಈಗಲೂ ಇಲ್ಲಿಗೆ ಬೆಳ್ಳಂಬೆಳಗ್ಗೆ ಕಸದ ರಾಶಿಯನ್ನು ಕಟ್ಟುಗಳಲ್ಲಿ ತಂದು ಹಾಕಿ ಹೋಗುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

Advertisement

ದುರ್ಗಂಧಮಯ ವಾತಾವರಣ
ಸಾಮಾನ್ಯವಾಗಿ ಸಂತೆ ಮಾರುಕಟ್ಟೆಯ ತ್ಯಾಜ್ಯಗಳನ್ನೂ ಇಲ್ಲಿಗೆ ತರಲಾಗುತ್ತಿದ್ದು ಈ ತ್ಯಾಜ್ಯವು ದುರ್ಗಂಧವನ್ನು ಉಂಟು ಮಾಡಿದ್ದು ಗಾಳಿ ಯೊಂದಿಗೆ ಪೇಟೆಯತ್ತಲೇ ದುರ್ಗಂಧ ಬೀರುತ್ತಿದೆ.

ಇನ್ನಷ್ಟು ಘಟಕಕ್ಕೆ ಜಾಗದ ಅವಶ್ಯಕತೆ ಇದೆ: ರಮೀಜ್‌ ಹುಸೈನ್‌
ಪಡುಬಿದ್ರಿಯಲ್ಲೀಗ ಎಸ್‌ಎಲ್‌ಆರ್‌ಎಂ ಘಟಕವನ್ನು ಮುನ್ನಡೆಸುತ್ತಿರುವ ರಮೀಜ್‌ ಹುಸೈನ್‌ ಸುಮಾರು 650 ಮನೆ ಹಾಗೂ 150 ವ್ಯವಹಾರ ಮಳಿಗೆಗಳ ಘನ ತ್ಯಾಜ್ಯ ವಿಲೇವಾರಿಯಲ್ಲಿ ಮಗ್ನರಾಗಿದ್ದಾರೆ. ಆದರೆ ಸ್ಟಾಕ್‌ಯಾರ್ಡ್‌ ಇಲ್ಲದೇ ಸೋತಿದ್ದೇವೆ. ತಮಗೆ ಸರಕಾರಿ ಜಾಗವನ್ನು ತೋರಿಸಿಕೊಟ್ಟಲ್ಲಿ ಇಡೀ ಪಡುಬಿದ್ರಿಯ ಹಸಿ ಮತ್ತು ಒಣ ಕಸಗಳ ವಿಲೇವಾರಿಯನ್ನು ತಾವು ಮಾಡಬಹುದು. ಈಗಲೂ ಈ ಘಟಕವು ಒವರ್‌ಲೋಡ್‌ ಆಗಿ ಕೆಲಸ ನಿರ್ವಹಿಸುತ್ತಿದ್ದು ವಿಸ್ತಾರವಾದ ಗ್ರಾಮ ಪಂಚಾಯತ್‌ ಪ್ರದೇಶವುಳ್ಳ ಪಡುಬಿದ್ರಿಗೆ ಈ ಘಟಕ ಎಳ್ಳಷ್ಟೂ ಸಾಲದು. ಮಳೆ ಬಿದ್ದಲ್ಲಿ ವಿಂಗಡಿಸಿಟ್ಟ ತ್ಯಾಜ್ಯ ಒದ್ದೆಯಾಗಿ ಗ್ರಾ.ಪಂ.ಗೆ ನಷ್ಟವುಂಟಾಗಲಿದೆ. ಹಸಿ ಕಸವನ್ನು ಸದ್ಯ ಸಂತೆ ಮಾರುಕಟ್ಟೆ ಬಳಿಯೇ ತಾವು ಮಣ್ಣಿಗೆ ಸೇರಿಸುತ್ತಿರುವುದಾಗಿ ಹೇಳಿರುವ ಅವರು ಪಂಚಾಯತ್‌ ಅಥವಾ ಜಿ. ಪಂ. ಸುಮಾರು 60 ಲಕ್ಷ ರೂ. ವೆಚ್ಚದಲ್ಲಿ ಇನ್ನಿನ್ಲàಟರ್‌ ಮಿಷನ್‌ ಅಳವಡಿಸಿದಲ್ಲಿ ಎಂದೆಂದೂ ಇತ್ಯರ್ಥವಾಗದ ತ್ಯಾಜ್ಯವನ್ನು ಭೂಮಿಯಲ್ಲಿ ಹೂಳುವ ಅಥವಾ ತ್ಯಾಜ್ಯ ನಷ್ಟವಾಗುವ ಸಂಭವವಿಲ್ಲ. ಗೊಬ್ಬರ ತಯಾರಿ ಹಾಗೂ ಪರಿಸರ ಸಹ್ಯವಾಗಿ ತ್ಯಾಜ್ಯ ವಿಲೇವಾರಿ ಮಾಡಬಹುದಾಗಿದೆ ಎಂದಿದ್ದಾರೆ.

ಜಿಲ್ಲಾಡಳಿತಕ್ಕೆ ಮನವಿ ಮಾಡಲಾಗಿದೆ
ತಮಗೆ ಇನ್ನಷ್ಟು ಎಸ್‌ಎಲ್‌ಆರ್‌ಎಂ ಘಟಕ ಸ್ಥಾಪನೆಗೆ ಜಾಗ ನೀಡಬೇಕು ಎಂದು ಜಿಲ್ಲಾಡಳಿತಕ್ಕೆ ಈಗಾಗಲೇ ಗ್ರಾ. ಪಂ. ವತಿಯಿಂದ ಮನವಿ ಸಲ್ಲಿಸಲಾಗಿದೆ.
ಪಂಚಾಕ್ಷರಿ ಸ್ವಾಮಿ ಕೆರಿಮಠ ,
ಪಿಡಿಒ , ಪಡುಬಿದ್ರಿ ಗ್ರಾ.ಪಂ.

Advertisement

Udayavani is now on Telegram. Click here to join our channel and stay updated with the latest news.

Next