Advertisement

ಪಡುಬಿದ್ರಿ: ಪ್ರಾಣ ಉಳಿಸಿಕೊಳ್ಳುವುದೇ ಪಾದಚಾರಿಗಳಿಗೆ ಸವಾಲು !

10:18 AM Sep 20, 2019 | mahesh |

ತಲಪಾಡಿಯಿಂದ ಹೆಜಮಾಡಿ ಮತ್ತು ಮಾಣಿಯಿಂದ ಮಂಗಳೂರುವರೆಗಿನ ರಾಷ್ಟ್ರೀಯ ಹೆದ್ದಾರಿಗೆ ಹೋಲಿಸಿದರೆ ಹೆಜಮಾಡಿ ಬಳಿಕ ಹೆದ್ದಾರಿ ರಸ್ತೆ ಪರವಾಗಿಲ್ಲ. ಆದರೆ ಇಲ್ಲಿರುವ ಸಮಸ್ಯೆಯೇ ಬೇರೆ. ಪಾದಚಾರಿಗಳು, ಅಕ್ಕಪಕ್ಕದ ಗ್ರಾಮದವರು ಕನಿಷ್ಠ ರಸ್ತೆ ದಾಟಲೂ ಹಲವಾರು ನಿಮಿಷ ಕಾಯಬೇಕು-ಉದಯವಾಣಿ ವರದಿಗಾರರ ತಂಡವು ಉಡುಪಿ ಜಿಲ್ಲೆಯುದ್ದಕ್ಕೂ ಹಾದು ಹೋಗುವ ಎನ್‌ಎಚ್‌ 66 ರಲ್ಲಿ ಸಾಗಿ ಸಮಸ್ಯೆಗಳನ್ನು ಪಟ್ಟಿ ಮಾಡಿದೆ. ಅದರ ಪ್ರಥಮ ವರದಿ ಇದು.

Advertisement

ಉಡುಪಿ: ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಹೆಜಮಾಡಿ ಟೋಲ್‌ಗೇಟ್‌ ಮೂಲಕ ಉಡುಪಿ ಜಿಲ್ಲೆಯನ್ನು ಪ್ರವೇಶಿಸಬೇಕು. ಅಲ್ಲಿಂದ ಆರಂಭವಾಗುವ ಸಮಸ್ಯೆ ಸಂಪೂರ್ಣ ವಿಭಿನ್ನ. ಇದೇ ಹೆದ್ದಾರಿಯಲ್ಲಿ ಬಿ.ಸಿ ರೋಡ್‌ ಮೂಲಕ ಹೆಜಮಾಡಿವರೆಗೂ ಬರುವಾಗ ಸಿಗುವ ಹಲವು ಸಮಸ್ಯೆಗಳು ಪುನರಾವರ್ತಿತ ವಾಗುತ್ತವಲ್ಲದೇ, ಇಲ್ಲಿ ಮತ್ತಷ್ಟು ಹೊಸ ಸಮಸ್ಯೆಗಳು ಕಾಣಸಿಗುತ್ತವೆ. ಅಲ್ಲಲ್ಲಿ ರಾಂಗ್‌ ಸೈಡ್‌ನಿಂದ ಬರುವ ವಾಹನಗಳು, ಹೆದ್ದಾರಿ ದಾಟಲು ಕಷ್ಟಪಡುವ ಪಾದಚಾರಿಗಳು, ಎಲ್ಲೆಂದರಲ್ಲಿ ಕಾಣ ಸಿಗುವ ಬ್ಯಾರಿ ಕೇಡ್‌ಗಳು.. ಹೀಗೆ ತರಹೇವಾರಿ ಸಮಸ್ಯೆಗಳು.

ಇದಾವುದನ್ನೂ ಇವರಲ್ಲಿ ಕೇಳುವಂತಿಲ್ಲ
ರಾಷ್ಟ್ರೀಯ ಹೆದ್ದಾರಿ ಇಲಾಖೆ ಯವರಿಗಾಗಲೀ, ರಸ್ತೆ ನಿರ್ಮಿಸಿ ಟೋಲ್‌ ಸಂಗ್ರಹಿಸುವ ಕಂಪೆನಿ ಗಾಗಲೀ, ಟೋಲ್‌ ನವರು ಕೇಳಿದಾಗಲೆಲ್ಲಾ ಸರಕಾರದ ಸೂಚನೆಯಂತೆ ಪೊಲೀಸ್‌ ರಕ್ಷಣೆ ನೀಡಿ ಜನರಿಂದ ಸುಂಕ ವಸೂಲು ಮಾಡುವಂತೆ ಮಾಡುವ ಜಿಲ್ಲಾಡಳಿತದ ಬಳಿ ಯಾಗಲೀ ಅಥವಾ ಜನಪ್ರತಿನಿಧಿಗಳಲ್ಲಿ ಆಗಲಿ, ನಮಗೆ ಸರ್ವಿಸ್‌ ರಸ್ತೆ ಇಲ್ಲ, ಸ್ಕೈವಾಕ್‌ ಇಲ್ಲ ಎಂದು ಗ್ರಾಮಸ್ಥರು ಹೇಳಿದರೆ ಯಾರೂ ಜವಾಬ್ದಾರಿ ತೆಗೆದುಕೊಳ್ಳುವುದಿಲ್ಲ. ಅದರ ಪರಿಣಾಮವೆನ್ನುವಂತೆ ಹೆಜಮಾಡಿ ಮಟ್ಟು, ಶಿವನಗರ ಮೊದ ಲಾದ ಕಡೆ ತೆರಳುವ ಹಾಗೂ ಶಾಲೆ, ದೇವಸ್ಥಾನ, ಮಸೀದಿಗಳಿವೆ. ದಿನವೂ ನೂರಾರು ಮಂದಿ ಹೆದ್ದಾರಿ ದಾಟಿ ಹೋಗಬೇಕು. ಅವರೆಲ್ಲರೂ ಪ್ರಾಣವನ್ನು ಕೈ ಯಲ್ಲಿ ಹಿಡಿದುಕೊಂಡು ರಸ್ತೆ ದಾಟಬೇಕು. ಯಾವಾಗ ಬೇಕಾದರೂ ವಾಹನಗಳು ಬಂದು ಢಿಕ್ಕಿ ಹೊಡೆಯಬಹುದು. ಹೊಡೆಯದಿದ್ದರೆ ಅವರ ಅದೃಷ್ಟ ಎಂಬಂತಾಗಿದೆ. ಇವರಿಗೆ ಹೆದ್ದಾರಿ ದಾಟಲು ಫ್ಲೈಓವರ್‌, ಓವರ್‌ ಬ್ರಿಡ್ಜ್ ಅಥವಾ ಸ್ಕೈವಾಕ್‌ ವ್ಯವಸ್ಥೆ ಇರಬೇಕಿತ್ತು. ಅದ್ಯಾ ವುದೂ ಇಲ್ಲಿಲ್ಲ. ಇದರಿಂದ ಪಾದಚಾರಿಗಳು ವಾಹನಗಳಡಿ ಸಿಲುಕುವ ಅಪಾಯವಿದೆ.

ಸರ್ವಿಸ್‌ ರಸ್ತೆ ಇಲ್ಲ
ಪಡುಬಿದ್ರಿ ಕಡೆಗೆ ಅಯ್ಯಪ್ಪ ನಗರದವರೆಗೂ ರಾಂಗ್‌ ಸೈಡ್‌ನ‌ಲ್ಲೇ ವಾಹನ ಚಲಾಯಿಸುವವರು ಅಧಿಕ. ಈ ವಿರುದ್ಧ ದಿಕ್ಕಿನ ಸಂಚಾರ ಹಲವು ಬಾರಿ ಅಪಘಾತಗಳಿಗೆ ಕಾರಣವಾಗಿದೆ. ಇಲ್ಲಿ ಸರ್ವಿಸ್‌ ರಸ್ತೆ ಬೇಕು ಎನ್ನುವುದು ಸ್ಥಳೀಯರ ಬೇಡಿಕೆ. ಪಡುಬಿದ್ರಿ ಬೀಡು ಕಡೆಯಿಂದ ಹೆಜಮಾಡಿ ಕಡೆಗೆ ಹೋಗುವ ಬಹುತೇಕ ಎಲ್ಲ ವಾಹನಗಳು ವಿರುದ್ಧ ದಿಕ್ಕಿನಲ್ಲೇ ಸಾಗುತ್ತವೆ!. ಸರ್ವಿಸ್‌ ರಸ್ತೆ ಇಲ್ಲದಿರುವುದೇ ಇದಕ್ಕೆ ಕಾರಣ. ಮತ್ತೆ ಮುಂದಕ್ಕೆ ಸುಜ್ಞಾನ್‌ ಗೇಟ್‌ನಿಂದ ಹೆಜಮಾಡಿವರೆಗೂ ಇದೇ ಸಮಸ್ಯೆ ರಾಂಗ್‌ ಸೈಡ್‌ ರೈಡಿಂಗ್‌.

ಮೇಲೇರದ ಸೇತುವೆ
ಪಡುಬಿದ್ರಿ ಕಲ್ಸಂಕ ಸೇತುವೆ ಕಾಮಗಾರಿ ಅರ್ಧಕ್ಕೆ ನಿಂತಿದೆ. ಇಲ್ಲಿ ವಾಹನ ಸಂಚಾರ ಅತ್ಯಂತ ಅಪಾಯ ಕಾರಿಯೇ. ಹೊಂಡಗಳಿಂದ ಕೂಡಿದ ಈ ರಸ್ತೆ ಹೆದ್ದಾರಿ ಇಲಾಖೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ನಿರ್ಲಕ್ಷ್ಯಕ್ಕೆ ನಿದರ್ಶನವಾಗಿದೆ.

Advertisement

ಕಾರ್ಕಳ ರಸ್ತೆ ಸಂಧಿಸುವ ಜಂಕ್ಷನ್‌ ಪ್ರತಿ ಕ್ಷಣವೂ ಅಪಾಯಕಾರಿ. ಫ್ಲೈ ಓವರ್‌ ನಿರ್ಮಿಸದೇ ಇರುವುದರಿಂದ ಭಾರೀ ತೊಂದರೆ ಯಾಗಿದೆ. ಮಂಗಳೂರು ಕಡೆಗೆ, ಉಡುಪಿ ಕಡೆಗೆ ಹೋಗುವವರಿಗೂ ಕಾಯಲು ಬಸ್‌ ನಿಲ್ದಾಣವಿಲ್ಲ. ಇದರಿಂದ ನಿತ್ಯವೂ ಪ್ರಯಾಣಿಕರು ಸಂಕಷ್ಟ ಕ್ಕೀಡಾಗಿದ್ದಾರೆ. ತಾತ್ಕಾಲಿಕವಾಗಿ ನಿರ್ಮಿಸಲಾದ ಬಸ್‌ ನಿಲ್ದಾಣಗಳಲ್ಲಿ ನಿಲ್ಲಲೂ ಸ್ಥಳವಿಲ್ಲ. ಮಳೆಗಾಲದಲ್ಲಂತೂ ಹಲವು ಸಮಸ್ಯೆ. ಕೆಳಗೆ ಕೆಸರು, ಪಕ್ಕದಲ್ಲೇ ತೋಡಿನಂತೆ ರಸ್ತೆಯಲ್ಲೇ ಹರಿಯುವ ಮಳೆನೀರು, ಸುತ್ತಲೂ ಇತರ ವಾಹನ, ಬಸ್‌ಗಳು, ಅತಿಯಾದ ವೇಗದಲ್ಲಿ ಬರುವ ವಾಹನಗಳು-ಇವೆಲ್ಲದರ ಮಧ್ಯೆ ಪ್ರಾಣ ಉಳಿಸಿ ಸಾಗುವುದೇ ಇಲ್ಲಿ ದೊಡ್ಡ ಸವಾಲು. ನಾರಾಯಣಗುರು ಮಂದಿರದ ಎದುರು ನೀಡಲಾದ ಡೈವರ್ಷನ್‌ ಕೂಡ ಅಪಾಯಕಾರಿ.

ಪಡುಬಿದ್ರಿಯಲ್ಲಿ ನಿತ್ಯ ಸಂಕಷ್ಟ
ಇನ್ನು ಪಡುಬಿದ್ರಿಯ ಕಥೆ ಕೇಳಲು ಸಿದ್ಧರಾಗಿ. ಬಹುತೇಕ ಕಡೆ ಚತುಷ್ಪಥ ಕಾಮಗಾರಿ ಶೇ. 50 ಪೂರ್ಣಗೊಂಡು 4 ವರ್ಷ ಕಳೆದರೂ ಪಡು ಬಿದ್ರಿಯಲ್ಲಿ ರಸ್ತೆ ಕಾಮಗಾರಿ ಪೂರ್ಣಗೊಂಡಿಲ್ಲ. ಕೊನೆಗೂ ಕಳೆದ ಮಳೆಗಾಲದ ಮೊದಲು ರಸ್ತೆ ಪೂರ್ಣವಾಗಿದೆ. ಸರ್ವಿಸ್‌ ರಸ್ತೆ ನಿರ್ಮಾಣ ಸಂಗತಿಯೂ ನನೆಗುದಿಗೆ ಬಿದ್ದಿದೆ. ಮಂಗಳೂರು ಕಡೆಗೆ ಹೋಗುವ ಸ್ವಲ್ಪ ಭಾಗದ ಇಕ್ಕೆಲ ಗಳಲ್ಲೂ ಸರ್ವಿಸ್‌ ರಸ್ತೆಗಾಗಿ ಜಲ್ಲಿಕಲ್ಲು ಹಾಕಲಾಗಿದೆ. ಅದೀಗ ಕೆಸರು ಮಯ. ಜನ, ವಾಹನ ಸಂಚಾರವೂ ದುಸ್ತರವಾಗಿದೆ.

ನೀವೂ ಸಮಸ್ಯೆ ತಿಳಿಸಿ
ದಕ್ಷಿಣ ಕನ್ನಡದಲ್ಲಿ ಹಾದು ಹೋಗುವ ಎರಡು ಮುಖ್ಯ ರಾ.ಹೆ. 75 ಮತ್ತು 66ರಲ್ಲಿ ಹೆಚ್ಚುತ್ತಿರುವ ಅಪಘಾತಗಳು ಕೊನೆಯಾಗಬೇಕೆನ್ನುವುದು ಉದಯವಾಣಿ ಕಾಳಜಿ. ಈ ಎರಡು ರಾಷ್ಟ್ರೀಯ ಹೆದ್ದಾರಿಗಳಿಗೆ ಸಂಬಂಧಿಸಿದ ನಿಮ್ಮ ಸಲಹೆ- ಅಭಿಪ್ರಾಯ, ಸಮಸ್ಯೆಯನ್ನು ಈ ಸಂಖ್ಯೆಗೆ 9632369999 ಫೂಟೋ ಸಮೇತ ವಾಟ್ಸಾಪ್‌ ಮಾಡಿ.

ಗೋಳು ಕೇಳುವವರಿಲ್ಲ
ಹೆದ್ದಾರಿ ಚತುಷ್ಪಥವಾಗದೆ ಹಲವು ವರ್ಷ ಯಾತನೆ ಅನುಭವಿಸಿದೆವು. ಇತ್ತೀಚೆಗಷ್ಟೆ ಪೇಟೆ ಭಾಗದಲ್ಲಿ ಹೆದ್ದಾರಿ ಕಾಮಗಾರಿ ಆಗಿದೆ. ಅದು ತುಂಬಾ ಕಿರಿದಾಗಿದೆ. ಸರ್ವಿಸ್‌ ರಸ್ತೆ, ಬಸ್‌ ನಿಲ್ದಾಣ, ಆಟೋರಿಕ್ಷಾ, ಕಾರು ನಿಲ್ದಾಣ, ಪಾದಚಾರಿಗಳು ದಾಟಲು, ನಡೆದಾಡಲು ಸ್ಥಳ ಯಾವುದೂ ಇಲ್ಲ. ಈ ಹೆದ್ದಾರಿ ಈಗ ಹಿಂದಿಗಿಂತಲೂ ಸಮಸ್ಯೆಗಳನ್ನು ಹೆಚ್ಚಿಸಿದೆ. ಸಾವಿರಾರು ಮಂದಿ ಹೆದ್ದಾರಿಯವರಿಗೆ ಶಾಪ ಹಾಕುತ್ತಿದ್ದಾರೆ. ಪ್ರತಿಭಟನೆ, ಮನವಿ ಎಲ್ಲ ಆಗಿದೆ. ಆದರೂ ನಮ್ಮ ಗೋಳು ಕೇಳುವವರು ಯಾರೂ ಇಲ್ಲ.
-ಸತೀಶ್‌ ಸಾಲ್ಯಾನ್‌, ಕಾರು ಚಾಲಕರು

ವಾಸ್ತವ ವರದಿ:   ಉಡುಪಿ ಟೀಮ್‌

Advertisement

Udayavani is now on Telegram. Click here to join our channel and stay updated with the latest news.

Next