Advertisement

ಜೀವ ಪಣಕ್ಕಿಟ್ಟು ಸಂಚರಿಸಬೇಕಾದ ಅನಿವಾರ್ಯತೆ

06:00 AM Aug 20, 2018 | Team Udayavani |

ಪಡುಬಿದ್ರಿ: ಪಡುಬಿದ್ರಿ ಬೆಳೆಯುತ್ತಿರುವ ಪಟ್ಟಣ ಪ್ರದೇಶವಾಗಿದ್ದು ಸದ್ಯದಲ್ಲೇ ರಾಜಕೀಯ ಇಚ್ಛಾಶಕ್ತಿಯಿದ್ದಲ್ಲಿ  ಪ. ಪಂ. ಮಟ್ಟಕ್ಕೇರಲೂ ಉದ್ಯುಕ್ತವಾಗಿರುವ ಊರು. ಇದು ಪಶ್ಚಿಮ ಕರಾವಳಿಯ ರಾಷ್ಟ್ರೀಯ ಹೆದ್ದಾರಿ-6 ಹಾಗೂ ಕಾರ್ಕಳ ಪಡುಬಿದ್ರಿ ರಾಜ್ಯ ಹೆದ್ದಾರಿ 1 ಸಂದಿಸುವ ಸ್ಥಳವೂ ಹೌದು. ಆದರೆ ಇಲ್ಲಿನ ಮುಖ್ಯ ಭಾಗದ ಜಂಕ್ಷನ್‌ನಿಂದ  ಕಾರ್ಕಳಕ್ಕೆ ಹೋಗಬೇಕಾಗಿರುವವರು ಜೀವ ಪಣಕ್ಕಿಟ್ಟು ಸಾಗಬೇಕಾದ ಸ್ಥಿತಿಯಿದೆ.

Advertisement

ಹೆದ್ದಾರಿ-ರಾಜ್ಯ ಹೆದ್ದಾರಿ ಜಂಕ್ಷನ್‌ ಕುರಿತ 
ಚಿತ್ರಣವೇ ಸ್ಪಷ್ಟವಾಗಿಲ್ಲ

ಎಲ್ಲಿಯೂ ವಿಳಂಬವಾಗದ ಹೆದ್ದಾರಿ ಚತುಃಷ್ಪಥ ಕಾಮಗಾರಿ ಪಡುಬಿದ್ರಿಯಲ್ಲಿ ವರ್ಷಾನು ಗಟ್ಟಲೆಯಾಗಿ ಆಮೆ ನಡಿಗೆಯಲ್ಲೇ ಸಾಗುತ್ತಿದೆ. ರಾಜ್ಯ ಹೆದ್ದಾರಿ 1ರ ದ್ವಿಪಥ ಕಾರ್ಯವು ಆರ್‌. ಎನ್‌. ಶೆಟ್ಟಿ ಕಂಪೆನಿ ಮೂಲಕವಾಗಿ ಕೆಶಿಪ್‌ ಮುಖಾಂತರ ನಡೆದಿದೆ. ಈ ರಸ್ತೆಯ ಮೂಲಕ ಜಿಲ್ಲೆಯ ಎರಡು ಬೃಹತ್‌ ಯೋಜನೆಗಳಾದ ಉಡುಪಿ ಪವರ್‌ ಕಾರ್ಪೊರೇಶನ್‌ ಮತ್ತು ಸುಜ್ಲಾನ್‌ ಕಂಪೆನಿಗಳಿಗೆ ಸಾಗಬೇಕಾದ ಬೃಹತ್‌ ವಾಹನಗಳು, ಟ್ರೇಲರುಗಳು ಸಾಗಬೇಕಾಗಿದೆ. ಪಡುಬಿದ್ರಿಯಲ್ಲಿ ಇದ್ದಲ್ಲೇ ಹೆದ್ದಾರಿ ಚತುಃಷ್ಪಥಗೊಳಿಸುವ ಕಾಮಗಾರಿ ಈಗ ನಡೆಯುತ್ತಿದೆ. ಈ ನಡುವೆ ಕಾರ್ಕಳ ರಾಜ್ಯ ಹೆದ್ದಾರಿಗೆ ಅನೇಕ ಘನ ವಾಹನಗಳು ಮಂಗಳೂರು ಭಾಗದಿಂದ ಆಗಮಿಸಿ ಪಡುಬಿದ್ರಿಯಲ್ಲಿ ಕಾರ್ಕಳ ರಸ್ತೆಗೆ ಹೇಗೆ ತಿರುಗಿ ಸಾಗಬೇಕೆಂಬ ಚಿತ್ರಣವು ಇದುವರೆಗೂ ಸ್ಪಷ್ಟಗೊಂಡಿಲ್ಲ. 

ಯರ್ರಾಬಿರ್ರಿ ವಾಹನ ಸಂಚಾರ – ಪಾದಚಾರಿಗಳಿಗೆ ಸಂಚಾರ
ಸಂಚಾರ ದಟ್ಟಣೆಯ ವೇಳೆಗಳಲ್ಲಿ ಈಗಲೂ ವಾಹನದಟ್ಟಣೆಯುಂಟಾಗಿ ಬಸ್ಸು, ಲಾರಿ, ಕಾರು, ರಿಕ್ಷಾ, ದ್ವಿಚಕ್ರ ಸವಾರರ ಒತ್ತಡಗಳಿಂದ ಈ ಪ್ರದೇಶವು ಪಾದಚಾರಿಗಳ ಸಂಚಾರಕ್ಕೇ ಎರವಾಗುತ್ತಿದೆ.
 
ರಾಷ್ಟ್ರೀಯ ಹೆದ್ದಾರಿ ಚತುಃಷ್ಪಥದ ಪಶ್ಚಿಮ ಭಾಗವನ್ನು ಪಲ್ಲವಿ ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌ ಎದುರಿನವರೆಗೆ ತಾತ್ಕಾಲಿಕವಾಗಿ ತೆರೆಯಲಾಗಿದೆ. ಈ ಭಾಗದಲ್ಲಿ ಪಡುಬಿದ್ರಿ ಪೊಲೀಸ್‌ ಠಾಣೆಯ ಭಾಗದಿಂದ ವಾಹನಗಳು ಬರುತ್ತಾ ಹೆದ್ದಾರಿಯನ್ನು ಪ್ರವೇಶಿಸಿ ಉಡುಪಿ, ಕಾರ್ಕಳದತ್ತ ಅಥವಾ ಮಂಗಳೂರಿನ ಕಡೆಗೆ ಸಾಗಬೇಕಿರುತ್ತದೆ. ಹೆದ್ದಾರಿಯಲ್ಲೇ ಮಂಗಳೂರಿನಿಂದ ಸಾಗಿ ಬಂದ ವಾಹನಗಳು ಕಾರ್ಕಳದತ್ತಲೋ ಅಥವಾ ಉಡುಪಿಯತ್ತಲೋ ಹೋಗಬೇಕು. ಈ ಮಧ್ಯೆ ಉಡುಪಿ, ಕಾರ್ಕಳದಿಂದ ಬರುವ ವಾಹನಗಳು ಪಲ್ಲವಿ ಬಾರ್‌ ಎಂಡ್‌ ರೆಸ್ಟೋರೆಂಟ್‌ ಎದುರಿನಿಂದ ಉಡುಪಿಯತ್ತ ತಿರುವು ಪಡೆದುಕೊಳ್ಳುತ್ತಿರುತ್ತವೆ. ಈ ಮಧ್ಯೆಯೇ ಪಾದಚಾರಿಗಳು ರಸ್ತೆ ದಾಟುತ್ತಿರುತ್ತಾರೆ. ಇಂತಹ‌ ಸನ್ನಿವೇಶದಲ್ಲಿ ವಾಹನಗಳು ತಮ್ಮ ಸರ್ಕಸ್‌ ಮುಂದುವರಿಸುತ್ತಾ ಸಾಗಬೇಕು. ಇದು ಈಗಿನ ಪರಿಸ್ಥಿತಿಯಾದರೆ ಇಲ್ಲಿನ ಬೃಹತ್‌ ಯೋಜನೆಗಳಿಗೆ ಸಾಗಬೇಕಾದ ಟ್ರೇಲರ್‌ಗಳ ಸಹಿತ ಘನ ವಾಹನಗಳು ಯಾವ ರೀತಿ ಸಾಗಬೇಕೆನ್ನುವುದು ಇದುವರೆಗೂ ಅಸ್ಪಷ್ಟವಾಗಿದೆ.

ಮಾಹಿತಿ,ಸ್ಪಷ್ಟ ಚಿತ್ರಣ ಇಲ್ಲ 
ಕಾರ್ಕಳ ಜಂಕ್ಷನ್‌ನಲ್ಲಿ ಸದ್ಯಕ್ಕೆ ವಾಹನದಟ್ಟಣೆಯನ್ನು ಇಬ್ಬರು ಪೊಲೀಸ್‌ ಕಾನ್ಸ್‌ಟೇಬಲ್‌ಗ‌ಳನ್ನು ನಿಯೋಜಿಸಿ ನಿಭಾಯಿಸುತ್ತಿದ್ದೇವೆ. ಆದರೆ ಹೆದ್ದಾರಿ ಕಾಮಗಾರಿ ಪೂರ್ಣಗೊಳ್ಳದೇ ಇಲಾಖೆಗೂ ಕಗ್ಗಂಟಿನ ಸನ್ನಿವೇಶವಿದೆ. ಹೆದ್ದಾರಿ ಮತ್ತು ಕಾರ್ಕಳ ಜಂಕ್ಷನ್‌ ತಿರುವುಗಳು ಯಾವ ರೀತಿಯಾಗಿರುತ್ತವೆ ಎಂಬ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ನಕ್ಷೆಯ ಬಗೆಗೆ ಒಂದಿನಿತೂ ತಮ್ಮ ಅರಿವಿಗೆ ಬಂದಿಲ್ಲ. ನವಯುಗ ನಿರ್ಮಾಣ ಕಂಪೆನಿಯೂ ಬಾಯಿ ಬಿಡುತ್ತಿಲ್ಲ .
– ಸತೀಶ್‌, 
ಪಿಎಸ್‌ಐ,ಪಡುಬಿದ್ರಿ ಠಾಣೆ

ಪಡುಬಿದ್ರಿಯಲ್ಲಿ ತೀರಾ ಇಕ್ಕಟ್ಟಿನಲ್ಲಿ ವಾಹನ ಸವಾರರಿಗೆ ದುಃಸಪ್ನವಾಗಿರುವ ರಾಷ್ಟ್ರೀಯ ಹೆದ್ದಾರಿ -ರಾಜ್ಯ ಹೆದ್ದಾರಿ ಸಂದಿಸುವ ಮುಖ್ಯ ಜಂಕ್ಷನ್‌.

Advertisement
Advertisement

Udayavani is now on Telegram. Click here to join our channel and stay updated with the latest news.

Next