Advertisement

ಪಡುಬಿದ್ರಿ ಗ್ರಾ. ಪಂ.: ಮಾರುಕಟ್ಟೆ ಪ್ರದೇಶದಲ್ಲಿನ ಅಕ್ರಮ ಒತ್ತುವರಿ ತೆರವು

11:04 PM Nov 21, 2019 | Team Udayavani |

ಪಡುಬಿದ್ರಿ: ಗ್ರಾ. ಪಂ. ಪಡುಬಿದ್ರಿ ವ್ಯಾಪ್ತಿಯ ಮಾರುಕಟ್ಟೆ ಪ್ರದೇಶದಲ್ಲಿ ವ್ಯಕ್ತಿಯೊಬ್ಬರು ಅಕ್ರಮವಾಗಿ ಖಾಸಗಿಯಾಗಿ ಗಿಡಗಳನ್ನು ಹಾಗೂ ಕಟ್ಟೆಯನ್ನು ಕಟ್ಟಿದ್ದರು. ಅಕ್ರಮ ಒತ್ತುವರಿಯನ್ನು ಪೊಲೀಸ್‌ ಬಂದೋಬಸ್ತ್ನಲ್ಲಿ ನ. 20ರಂದು ತೆರವು ಮಾಡಲಾಯಿತು.

Advertisement

ಪಡುಬಿದ್ರಿ ನಡ್ಸಾಲು ಗ್ರಾಮದ ಸ.ನಂ. 47/12 ರಲ್ಲಿ 66 ಸೆಂಟ್ಸ್‌ ಜಮೀನನ್ನು ಸಂತೆ ಮಾರುಕಟ್ಟೆ ನಡೆಸಲು ಸರಕಾರವು ಪಡುಬಿದ್ರಿ ಗ್ರಾ. ಪಂ. ಗೆ ಹಸ್ತಾಂತರಿಸಿತ್ತು. ಈ ಜಮೀನಿನಲ್ಲಿ ಜಗದೀಶ ಮಲ್ಯ ಎಂಬವರು ಅನಧಿಕೃತವಾಗಿ ಗಿಡ ನೆಟ್ಟು ಕಟ್ಟೆ ಕಟ್ಟಿ ಒತ್ತುವರಿ ಮಾಡಿದ್ದರು. ಅದನ್ನು ಪಿಡಿಒ ಪಂಚಾಕ್ಷರಿ ಸ್ವಾಮಿ ನೇತೃತ್ವದಲ್ಲಿ ಗ್ರಾ. ಪಂ. ಅಧ್ಯಕ್ಷೆ ದಮಯಂತಿ ಅಮೀನ್‌ ಹಾಗೂ ಸದಸ್ಯರ ಉಪಸ್ಥಿತಿಯಲ್ಲಿ ತೆರವುಗೊಳಿಸಲಾಯಿತು.

ಜಗದೀಶ ಮಲ್ಯ ಅವರಿಗೆ ಸೇರಿದ ವಾಣಿಜ್ಯ ಮಳಿಗೆಗಳ ಮುಂಭಾಗದಲ್ಲಿ ಸರಕಾರಿ ಜಮೀನು ಒತ್ತುವರಿ ಮಾಡಿ ಗಿಡಗಳನ್ನು ನೆಟ್ಟು ಕಟ್ಟಲಾಗಿರುವ ಕಟ್ಟೆಗಳನ್ನು ತೆರವು ಮಾಡುವಂತೆ ತಿಳಿಸಿದ್ದರೂ, ಗ್ರಾ. ಪಂ. ಗೆ ಸೆ‌ಡ್ಡು ಹೊಡೆದು ತನ್ನ ಅಕ್ರಮವನ್ನು ಮುಂದುವರೆಸಿದ್ದರು.

ನ.7ರಂದು ನಡೆದ ಗ್ರಾ. ಪಂ ಸಾಮಾನ್ಯ ಸಭೆ ನಡಾವಳಿಯಂತೆ ಪೊಲೀಸ್‌ ರಕ್ಷಣೆ ಪಡೆದು ಜೆಸಿಬಿ ಸಹಾಯದಿಂದ ಗಿಡಕ್ಕೆ ಕಟ್ಟಿದ ಕಟ್ಟೆಗಳನ್ನು ತೆರವು ಮಾಡಲಾಯಿತು. ತೆರವು ಮಾಡಿರುವ ಜಾಗವನ್ನು ಸಮತಟ್ಟು ಮಾಡಲಾಗಿದ್ದು, ಅಲ್ಲಿ ತಡೆಬೇಲಿ ಅಳವಡಿಸಲಾಗುವುದು. ಕಳೆದ ವರ್ಷದ ಹಿಂದೆಯೂ ಇಲ್ಲಿ ಗ್ರಾ. ಪಂ. ತಡೆಬೇಲಿ ಅಳವಡಿಸಿದ್ದು, ಅದನ್ನು ಜಗದೀಶ್‌ ಮಲ್ಯ ಕಿತ್ತು ಹಾಕಿದ್ದರು. ತೆರವು ಮಾಡಿದ ಗಿಡಗಳನ್ನು ಗ್ರಾ. ಪಂ. ಆವರಣದಲ್ಲಿ ನೆಡಲಾಯಿತು.

ಈ ಕಟ್ಟಡದ ಮುಂಭಾಗದಲ್ಲಿ ಶೀಟುಗಳನ್ನು ಹಾಕಿ ಇನ್ನಷ್ಟು ಒತ್ತುವರಿ ಮಾಡಲಾಗಿದ್ದು, ಅದನ್ನು ವಾರದೊಳಗೆ ತೆರವು ಮಾಡುವಂತೆ ಪಿಡಿಒ ಸೂಚನೆ ನೀಡಿದರು. ಒಂದು ವೇಳೆ ತೆರವು ಮಾಡದಿದ್ದಲ್ಲಿ ಗ್ರಾಪಂ ತೆರವು ಮಾಡಿ ಮಾಲಕರ ವಿರುದ್ದ ಕ್ರಿಮಿನಲ್‌ ಪ್ರಕರಣ ದಾಖಲಿಸುವುದಾಗಿ ಅವರು ಎಚ್ಚರಿಕೆ ನೀಡಿದರು.

Advertisement

ಮಾರುಕಟ್ಟೆ ಪ್ರದೇಶದಲ್ಲಿ
3 ಲಕ್ಷ ರೂ. ಬಾಕಿ ಬಾಡಿಗೆ ವಸೂಲಿ ಈ ಮೇಲಿನ ಕಾರ್ಯಾಚರಣೆಯ ಸಂದರ್ಭದಲ್ಲಿ ಮಾರುಕಟ್ಟೆ ಪ್ರದೇಶದಲ್ಲಿ ಗ್ರಾ. ಪಂ. ಕಟ್ಟಡಗಳಲ್ಲಿನ ಅಂಗಡಿ ಕೋಣೆಗಳನ್ನು ಬಾಡಿಗೆಗೆ ಪಡೆದು ಹಲವು ವರ್ಷಗಳಿಂದ 10 ಲಕ್ಷ ರೂಪಾಯಿಗೂ ಮಿಕ್ಕಿ ಬಾಡಿಗೆ ಬಾಕಿ ಇರಿಸಿಕೊಂಡವರ ವಿರುದ್ಧವೂ ಕಾರ್ಯಾಚರಣೆ ನಡೆಸಿ ಅಂಗಡಿ ಮಾಲಕರಿಂದ 3 ಲಕ್ಷ ರೂ.ಗಳನ್ನು ವಸೂಲಿ ಮಾಡಲಾಯಿತು.

ಇನ್ನುಳಿದ ಬಾಡಿಗೆಯನ್ನು ವಾರದೊಳಗೆ ಪಾವತಿಸದಿದ್ದಲ್ಲಿ ಅಂಗಡಿಗಳನ್ನು ಪಂಚಾಯತ್‌ ಮುಟ್ಟುಗೋಲು ಹಾಕಿಕೊಳ್ಳುವುದಾಗಿ ಬಾಡಿಗೆದಾರರಿಗೆ ತಿಳಿಸಲಾಗಿದೆ. ಮೂರು ಅಂಗಡಿಗಳವರು ಹಲವು ವರ್ಷಗಳಿಂದ ಬಾಡಿಗೆಯನ್ನೇ ಪಾವತಿಸಿಲ್ಲ. ನೊಟೀಸ್‌ ನೀಡಿದರೂ ಏನೂ ಪ್ರತಿಕ್ರಿಯೆ ಇಲ್ಲದ ಕಾರಣ ಅವರ ಮೇಲೆ ಕಟ್ಟುನಿಟ್ಟಿನ ಕ್ರಮ ಜರಗಿಸಲಾಗುವುದು ಎಂದು ಗ್ರಾ.ಪಂ. ಪಿಡಿಒ ಪಂಚಾಕ್ಷರಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next