ಪಡುಬಿದ್ರಿ: ಉಚ್ಚಿಲ ಬಡಾ ಗ್ರಾಪಂ ವ್ಯಾಪ್ತಿಯ ಬಡಾ ಎರ್ಮಾಳು ಹಾಗೂ ಪಡುಬಿದ್ರಿ ಗ್ರಾಪಂ ವ್ಯಾಪ್ತಿಯಲ್ಲಿ ವಿವಿಧೆಡೆ ಉಂಟಾಗಿರುವ ಕಡಲ್ಕೊರೆತ ತಡೆಗೆ ತಾತ್ಕಾಲಿಕವಾಗಿ ಬಂಡೆಕಲ್ಲುಗಳನ್ನು ಹಾಕುವ ಕಾಮಗಾರಿಯನ್ನು ಶನಿವಾರ ಆರಂಭಿಸಲಾಗಿದೆ.
ಬಡಾ ಎರ್ಮಾಳಿನಲ್ಲಿ ಸುಮಾರು 250 ಮೀಟರ್‌ನಷ್ಟು ಕಡಲ್ಕೊರೆತ ಉಂಟಾಗಿದ್ದು, ಹಲವಾರು ತೆಂಗಿನ ಮರಗಳು ಸಮುದ್ರ ಪಾಲಾಗಿವೆ. ಎಡಿಬಿ ಅಧೀಕ್ಷಕ ಎಂಜಿನಿಯರ್ ಗೋಪಾಲ ನಾಯಕ್ ನೇತೃತ್ವದಲ್ಲಿ ಬಡಾ ಎರ್ಮಾಳಿನ 150 ಮೀ. ವ್ಯಾಪ್ತಿಯಲ್ಲಿ ಬಂಡೆಕಲ್ಲು ಹಾಕುವ ತಾತ್ಕಾಲಿಕ ಕಾಮಗಾರಿ ಆರಂಭಿಸಲಾಗಿದೆ.
ಪಡುಬಿದ್ರಿ ಗ್ರಾಪಂ ವ್ಯಾಪ್ತಿಯ ಕಾಡಿಪಟ್ಣ ಮತ್ತು ನಡಿಪಟ್ಣ ಪ್ರದೇಶಗಳಲ್ಲಿ ಕಡಲ್ಕೊರೆತ ತೀವ್ರವಾಗಿದ್ದು, ಕಾಡಿಪಟ್ಣ ರಾಘು ಸಾಲ್ಯಾನ್ ಮನೆ ಬಳಿ ಗಾಳಿ ಹಾಗೂ ತೆಂಗಿನ ಮರಗಳು ಸಮುದ್ರ ಪಾಲಾಗಿವೆ. ನಡಿಪಟ್ಣ ಕಡಲ ಕಿನಾರೆಯಲ್ಲಿ ಬೀಚ್ ನಿರ್ವಹಣಾ ಸಮಿತಿ ನಿರ್ಮಿಸಿರುವ ವಿದ್ಯುತ್ ದೀಪಗಳ ಕಂಬಗಳು ಕೊರೆತಕ್ಕೆ ಸಿಲುಕಿ ಅಪಾಯದಲ್ಲಿದೆ. ಇಲ್ಲಿ ಈಗಾಗಲೇ ಕಾಂಕ್ರೀಟ್ ರಚನೆಗಳು ಹಾನಿಯಾಗಿವೆ. ಪಡುಬಿದ್ರಿಯಲ್ಲಿ ಸುಮಾರು 150 ಮೀಟರ್‌ನಷ್ಟು ಕೊರೆತ ಉಂಟಾಗಿದೆ. ಕಾಡಿಪಟ್ಣ ಬಳಿ ಬಂಡೆಕಲ್ಲುಗಳನ್ನು ತಂದು ಸುರಿಯಲಾಗಿದೆ. ಬೀಚ್ ಅಭಿವೃದ್ಧಿಗಾಗಿ ಕಡಲ ಕಿನಾರೆ ಸಮತಟ್ಟು ಮಾಡಿದ ಪರಿಣಾಮ ಕಡಲ್ಕೊರೆತ ಹೆಚ್ಚಾಗಲು ಕಾರಣವಾಗಿದೆ ಎಂದು ಕಾಡಿಪಟ್ಣದ ನಿವಾಸಿಗಳು ಆರೋಪಿಸಿದ್ದಾರೆ.
ಶಾಸಕ ಲಾಲಾಜಿ ಆರ್ ಮೆಂಡನ್, ತಹಶೀಲ್ದಾರ್ ಮಹಮ್ಮದ್ ಇಸಾಕ್, ಕಂದಾಯ ಪರಿವೀಕ್ಷಕ ರವಿಶಂಕರ್, ಗ್ರಾಮಕರಣಿಕ ಶ್ಯಾಮ್‌ಸುಂದರ್, ಗ್ರಾಮ ಸಹಾಯಕ ಜಯರಾಮ ಮತ್ತಿತರರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.