ಮೈಸೂರು: ಉಡುಪಿ ಜಿಲ್ಲೆಯ ಪಡುಬಿದ್ರಿಯಲ್ಲಿ ಎಂ11 ಇಂಡಸ್ಟ್ರೀಸ್ ಪ್ರೈ ಲಿ. ಕಂಪೆನಿಯಿಂದ 350 ಕೋಟಿ ರೂ. ವೆಚ್ಚದ ಇಂಟಿಗ್ರೇಟೆಡ್ ಬಯೋ ಡೀಸೆಲ್ ಉತ್ಪಾದನ ಸ್ಥಾವರ ಉದ್ಘಾಟನೆಗೊಂಡಿದೆ.
ಮೇಕ್ ಇನ್ ಇಂಡಿಯಾ ಯೋಜನೆ ಅಡಿಯಲ್ಲಿ ಸ್ಥಾಪನೆಯಾಗಿರುವ ಈ ಘಟಕದಲ್ಲಿ ದಿನಕ್ಕೆ 450 ಟನ್ ಇಂಟಿಗ್ರೇಟೆಡ್ ಬಯೋ ಡೀಸೆಲ್ ಉತ್ಪಾದಿಸಲಾಗುತ್ತದೆ. ಬಳಸಿದ ಅಡುಗೆ ಎಣ್ಣೆ ಮತ್ತು ಇತರ ತ್ಯಾಜ್ಯ ಎಣ್ಣೆಗಳನ್ನು ಬಳಸಿ ಬಯೋಡೀಸೆಲ್ ಉತ್ಪಾದಿಸಲಾಗುತ್ತಿದೆ.
ಘಟಕವನ್ನು ಉದ್ಘಾಟಿಸಿ ಮಾತನಾಡಿದ ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್ ಅವರು, ಇಂತಹ ಪರಿಸರ ಸ್ನೇಹಿ ಉದ್ಯಮಗಳಿಂದ ಆರ್ಥಿಕ ಅಭಿವೃದ್ಧಿ ಜತೆಗೆ ಸ್ಥಳೀಯ ಜನರಿಗೂ ಅನುಕೂಲವಾಗುತ್ತದೆ ಎಂದು ಹೇಳಿದರು.
ಬಯೋ ಡೀಸೆಲ್ ಸಾಂಪ್ರದಾಯಿಕ ಹಾಗೂ ನವೀಕರಿಸಲಾಗದ ಇಂಧನಗಳಿಗೆ ಪರ್ಯಾಯವಾಗಿದೆ. ಇದನ್ನು ಬಳಸಿದರೆ ವಾತಾವರಣದಲ್ಲಿ ಇಂಗಾಲದ ಹೊರಸೂಸುವಿಕೆ ಅಂಶವೂ ಕಡಿಮೆಯಾಗುತ್ತದೆ. ಬಳಸಿದ ಅಡುಗೆ ಎಣ್ಣೆ ಹಾಗೂ ಇತರ ತೈಲವನ್ನು ಡೀಸೆಲ್ ಆಗಿ ಪರಿವರ್ತಿಸುತ್ತಿರುವುದು ಒಂದು ಸಂಪನ್ಮೂಲವಾಗಿ ಭವಿಷ್ಯವನ್ನು ರೂಪಿಸುತ್ತದೆ ಎಂದರು.
ಕಂಪೆನಿಯ ನಿರ್ದೇಶಕ ಹನ್ನನ್ ಖಾನ್ ಮಾತನಾಡಿ, ವಾತಾವರಣದಲ್ಲಿ ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆಗೊಳಿಸಿ ಉತ್ತಮ ಪರಿಸರ ನಿರ್ಮಾಣ ಮಾಡುವ ಉದ್ದೇಶದಿಂದ ಈ ಘಟಕವನ್ನು ಆರಂಭಿಸಲಾಗಿದೆ. ಬೆಲ್ಜಿಯಂ ಮೂಲದ ತಂತ್ರಜ್ಞಾನವನ್ನು ಘಟಕ ಹೊಂದಿದೆ. ಆರೋಗ್ಯ ಸುರಕ್ಷೆ, ಇಂಧನ ಭದ್ರತೆ, ಹವಾಮಾನ ಬದಲಾ ವಣೆ ತಗ್ಗಿಸುವಿಕೆ ಜತೆಗೆ ತೈಲ ಆಮದು ಅವಲಂಬನೆಯನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ ಎಂದರು.
ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕ ಸುಭಾನ್ ಖಾನ್, ಯೇನೆಪೊಯ ಸಮೂಹದ ಅಧ್ಯಕ್ಷ ವೈ.ಎ. ಕುಂಞಿ, ನಿಟ್ಟೆ ಎಂಜಿನಿಯರಿಂಗ್ ಕಾಲೇಜಿನ ಜೈವಿಕ ತಂತ್ರಜ್ಞಾನ ವಿಭಾಗದ ಮುಖ್ಯಸ್ಥೆ ಡಾ| ಉಜ್ವಲಾ, ಡೆಸ್ಮೆಟ್ ಬೆಲ್ಲೆಸ್ಟ್ರಾ ಸಂಸ್ಥೆಯ ನಿರ್ದೇಶಕ ಶ್ರೀನಾಥ್ ಶೆಟ್ಟಿ ಉಪಸ್ಥಿತರಿದ್ದರು.