ಪಡುಬಿದ್ರಿ: ಬ್ಲೂ ಫ್ಲ್ಯಾಗ್ ಬೀಚ್‌ನಲ್ಲಿ ನಡೆಯುತ್ತಿರುವ “ಕೋಸ್ಟಲ್ ಕಾರ್ನಿವಲ್-2024’ರ ಪ್ರಯುಕ್ತ ರವಿವಾರ ಬೆಳಗ್ಗೆ ಮಾಹೆ ಸಹಯೋಗ ದೊಂದಿಗೆ ನಡೆದ “ಬಲೆ ಬಲಿಪುಗ’ ಬರಿಗಾಲಿನ 3 ಕಿ.ಮೀ. ಮ್ಯಾರಾಥಾನ್ ಓಟಕ್ಕೆ ಉಭಯ ರಾಜ್ಯಾದ್ಯಂತದಿಂದ ಉತ್ತಮ ಸ್ಪಂದನೆ ಸಿಕ್ಕಿದೆ.
ಜೇಸಿಐ ಪಡುಬಿದ್ರಿಯ ಸುವರ್ಣ ಸಂಭ್ರಮದ ಅಂಗವಾಗಿ ಕೋಸ್ಟಲ್ ಕಾರ್ನಿವಲ್ ನಡೆಯುತ್ತಿದೆ. ಬ್ಲೂಫ್ಲ್ಯಾಗ್ ಬೀಚ್‌ನಿಂದ ಪಡುಬಿದ್ರಿಯ ಮುಖ್ಯ ಬೀಚನ್ನು ಕ್ರಮಿಸಿ ಮತ್ತೆ ಕಡಲ ತಡಿಯಲ್ಲೇ ಬ್ಲೂ ಫ್ಲ್ಯಾಗ್ ಬೀಚ್‌ಗೆ ತಲುಪಬೇಕಿದ್ದ ಈ ಮ್ಯಾರಥಾನ್ ಓಟದ ಸ್ಪರ್ಧೆಗೆ ಉಡುಪಿ ಜಿಲ್ಲಾಧಿಕಾರಿ ಡಾ| ವಿದ್ಯಾಕುಮಾರಿ ಹಾಗೂ ಜಿಲ್ಲಾ ಎಸ್‌ಪಿ ಡಾ| ಅರುಣ್ ಕೆ. ಶುಭ ಹಾರೈಸಿದರು.
ರಾಜ್ಯದ ವಿವಿಧೆಡೆಗಳಿಂದ ಆಗಮಿಸಿದ 350ಕ್ಕೂ ಅಧಿಕ ಸ್ಪರ್ಧಾಳುಗಳು ಭಾಗವಹಿಸಿದ್ದು, ಮ್ಯಾರಥಾನ್‌ಗೆ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಸಿ. ಯು. ಕುಮಾರ್ ಚಾಲನೆ ನೀಡಿದರು. ಜೇಸಿಐ ಪಡುಬಿದ್ರಿ ಅಧ್ಯಕ್ಷ ಸಂಜಿತ್ ಎಸ್. ಎರ್ಮಾಳ್, ಕಾರ್ಯದರ್ಶಿ ಮನು ಉದಯ ಶೆಟ್ಟಿ, ಮಹಿಳಾ ಅಧ್ಯಕ್ಷೆ ಹರ್ಷಿತಾ ಮಕರಂದ್, ಜೆಜೆಸಿ ಅಧ್ಯಕ್ಷ ದರ್ಶನ್ ಪಿ. ಕುಮಾರ್, ಜೇಸಿಐ ಪಡು ಬಿದ್ರಿ ಸದಸ್ಯರು, ಕಾರ್ಯಕ್ರಮ ಸಮಿತಿ ಅಧ್ಯಕ್ಷ ವೈ. ಸುಕುಮಾರ್, ನಿರ್ದೇಶಕಿ ಯಶೋದಾ, ಸಂಯೋಜಕ ವೇಣು ಜಿ. ಮುಂತಾದವರು ಉಪಸ್ಥಿತರಿದ್ದರು.
ಫಲಿತಾಂಶ
35 ವರ್ಷ ಮೇಲ್ಪಟ್ಟ ಮಹಿಳೆಯರು: ಪ್ರಥಮ-ನಯನಾ ಮಂಗಳೂರು, ದ್ವಿತೀಯ-ವಾಣಿ ರಾಜ್‌ಗೋಪಾಲ್ ಮಂಗಳೂರು,
ಪುರುಷರ ವಿಭಾಗ: ಪ್ರಥಮ- ಸುದೀಪ್ ಕುಮಾರ್ ಎನ್. ಮಣಿಪಾಲ್, ದ್ವಿತೀಯ-ರವಿಕಿರಣ್ ಉಡುಪಿ ರನ್ನರ್ ಕ್ಲಬ್.
35 ವರ್ಷ ಕೆಳಗಿನ ಮಹಿಳೆಯರು: ಪ್ರಥಮ-ಪ್ರೇರಣಾ ಬೆಂಗಳೂರು, ದ್ವಿತೀಯ-ಲಕ್ಷ್ಮೀ ಆನಂದತೀರ್ಥ ವಿದ್ಯಾಲಯ ಕಟಪಾಡಿ,
ಪುರುಷರ ವಿಭಾಗ: ಪ್ರಥಮ-ಸಚಿನ್, ಆನಂದ ತೀರ್ಥ ವಿದ್ಯಾಲಯ ಕಟಪಾಡಿ, ದ್ವಿತೀಯ-ಲಾರಾ ಮಂಗಳೂರು.
ವಿಜೇತರನ್ನು ನಗದು ಪುರಸ್ಕಾರದೊಂದಿಗೆ ಗೌರವಿಸಲಾಯಿತು.