Advertisement

ಗಾನಕೋಗಿಲೆಗೆ ಪಡ್ರೆ ಯಕ್ಷೋತ್ಸವ ಪ್ರಶಸ್ತಿ

02:14 PM Oct 27, 2017 | Team Udayavani |

ಸುಳ್ಯ ತಾಲೂಕಿನ ಪಂಜ ಸಮೀಪ ಬಳ್ಪ -ಮೂಡೂರು ಎಂಬಲ್ಲಿ ಜನಿಸಿದ ಎಂ. ದಿನೇಶ ಅಮ್ಮಣ್ಣಾಯರು ಪದವಿಪೂರ್ವ ಶಿಕ್ಷಣದ ಜತೆಗೆ ಸಹೋದರಿ ರಾಜೀವಿ ಅವರಿಂದ ಸಂಗೀತಾಭ್ಯಾಸಗೈದರು. ಸಂಬಂಧಿಕರಾದ ಹರಿನಾರಾಯಣ ಬೈಪಾಡಿತ್ತಾಯರಿಂದ ಮದ್ದಳೆ ವಾದನವನ್ನೂ ಕಲಿತು ಪ್ರಥಮವಾಗಿ 1976ರಲ್ಲಿ ಕರ್ನಾಟಕ ಮೇಳದಲ್ಲಿ ಹಿಮ್ಮೇಳ ವಾದಕರಾಗಿ ವೃತ್ತಿ ಆರಂಭಿಸಿದರು. ಭಾಗವತಿಕೆಯಲ್ಲಿ ಅತೀವ ಒಲವು ತೋರಿದ ಅಮ್ಮಣ್ಣಾಯರು ಗುರುಗಳಾದ ದಾಮೋದರ ಮಂಡೆಚ್ಚರಲ್ಲಿ ಯಕ್ಷಸಂಗೀತಾಭ್ಯಾಸ ನಡೆಸಿ 1980ರಲ್ಲಿ ಪುತ್ತೂರು ಮೇಳದಲ್ಲಿ ಭಾಗವತರಾಗಿ ಸೇರ್ಪಡೆಗೊಂಡರು. ತದನಂತರ ಕರ್ನಾಟಕ ಮೇಳ ಸೇರಿ ಅಲ್ಲಿ ಸುದೀರ್ಘ‌ 22 ವರ್ಷಗಳ ಕಾಲ ಭಾಗವತರಾಗಿ ತನ್ನದೇ ಛಾಪನ್ನೊತ್ತಿದರು. ಈ ನಡುವೆ ಕದ್ರಿ ಮೇಳ, ಕುಂಟಾರು ಮೇಳಗಳಲ್ಲಿಯೂ ತಿರುಗಾಟ ನಡೆಸಿದ್ದಾರೆ. ಕಳೆದ ಸತತ 13 ವರ್ಷಗಳಿಂದ ಎಡನೀರು ಮೇಳದಲ್ಲಿ ಪ್ರಧಾನ ಭಾಗವತರಾಗಿ ಮೆರೆಯುತ್ತಿದ್ದಾರೆ.

Advertisement

ಅಮ್ಮಣ್ಣಾಯರು ಮಾನಿಷಾದ, ಕನಕಾಂಗಿ ಕಲ್ಯಾಣ, ಬೇಡರ ಕಣ್ಣಪ್ಪ ಮುಂತಾದ ಹಲವು ಪೌರಾಣಿಕ ಪ್ರಸಂಗಗಳಲ್ಲದೆ ಕಾಡಮಲ್ಲಿಗೆ, ಬ್ರಹ್ಮ ಬಲಾಂಡಿ, ಪುತ್ತೂರª ಮುತ್ತು ಮುಂತಾದ ಹಲವು ತುಳು ಭಾಷಾ ಪ್ರಸಂಗಗಳ ಭಾಗವತಿಕೆಯಲ್ಲೂ ಪ್ರೇಕ್ಷಕರ ಮೈನವಿರೇಳುವಂತೆ ಮಾಡಿದ ಖ್ಯಾತಿಯನ್ನು ಪಡೆದಿದ್ದಾರೆ. ಸುಮಾರು ನಾಲ್ಕೂವರೆ ದಶಕಗಳಿಂದ ಕಲಾಮಾತೆಯ ಸೇವೆಗೈಯುತ್ತಿರುವ ಇವರು ಸಾವಿರ ಧ್ವನಿಸುರುಳಿ ಹಾಗೂ ಏಳುನೂರಕ್ಕೂ ಹೆಚ್ಚು ಯಕ್ಷಗಾನ ಚಿತ್ರೀಕರಣದಲ್ಲಿ ಭಾಗವಹಿಸಿದ ಹೆಗ್ಗಳಿಕೆಗೆ ಪಾತ್ರರಾದವರು. ಹಲವು ಸಮ್ಮಾನಗಳ ಜತೆಗೆ ಗಾನಕೋಗಿಲೆ, ಮಧುರ ಗಾನದ ಐಸಿರಿ ಹಾಗೂ ಯಕ್ಷ ಕಲಾ ಕೌಸ್ತುಭ ಬಿರುದುಗಳನ್ನು ತನ್ನ ಮುಡಿಗೇರಿಸಿದ ಇವರಿಗೆ ಬೆನ್ನೆಲುಬಾಗಿ ನಿಂತವರು ಅವರ ಚಿಕ್ಕಪ್ಪ ವಿಷ್ಣು ಅಮ್ಮಣ್ಣಾಯರು.

ಪ್ರಸ್ತುತ ಅರಸಿನಮಕ್ಕಿ ಸಮೀಪ ಕತ್ಯಡ್ಕ ಗ್ರಾಮದ ಹೊರತೋಟು ಎಂಬಲ್ಲಿ ಪತ್ನಿ ಸುಧಾರೊಂದಿಗೆ ಸಂತೃಪ್ತಿಯ ಜೀವನ ಸಾಗಿಸುತ್ತಿರುವ ದಿನೇಶ ಅಮ್ಮಣ್ಣಾಯರಿಗೆ ಅಕ್ಟೋಬರ್‌  28, 2017ರಂದು ಪೆರ್ಲದ ಶ್ರೀ ಭಾರತೀ ಸದನದಲ್ಲಿ ಈ ಬಾರಿಯ ಪಡ್ರೆ ಯಕ್ಷೋತ್ಸವ ಪ್ರಶಸ್ತಿಯನ್ನು “ಯಕ್ಷಮಿತ್ರರು ಪಡ್ರೆ’ ಆಯೋಜಿಸುವ ಕಾರ್ಯಕ್ರಮದಲ್ಲಿ ನೀಡಿ ಗೌರವಿಸಲಾಗುತ್ತದೆ.

ಕೊಲ್ಲೆಂಕಾನ ಅವಿನಾಶ ಶಾಸ್ತ್ರಿ

Advertisement

Udayavani is now on Telegram. Click here to join our channel and stay updated with the latest news.

Next