ಹೊಸದಿಲ್ಲಿ: ಬಾಲಿವುಡ್‌ನ ವಿವಾದಾತ್ಮಕ ಚಿತ್ರ “ಪದ್ಮಾವತ್’ ಬಗ್ಗೆ ಇತ್ತೀಚೆಗೆ ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪಿನ ಮಾರ್ಪಾಟು ಕೋರಿ ರಾಜಸ್ಥಾನ, ಮಧ್ಯಪ್ರದೇಶ ಸರಕಾರಗಳು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು, ಈ ಮಧ್ಯಾಂತರ ಮೇಲ್ಮನವಿಗಳನ್ನು ಪುರಸ್ಕರಿಸಿರುವ ಕೋರ್ಟ್, ಮಂಗಳವಾರ ಅರ್ಜಿಗಳ ವಿಚಾರಣೆ ನಡೆಸುವುದಾಗಿ ಹೇಳಿದೆ. ಜತೆಗೆ, ಮೇವಾರ್‌ನ ರಾಜಮನೆತನ ಮತ್ತು ಕರ್ಣಿ ಸೇನಾಗೆ ಕೂಡ ಈ ಅರ್ಜಿಯ ಭಾಗವಾಗುವಂತೆ ರಾಜಸ್ಥಾನ ಸರಕಾರ ಕೇಳಿಕೊಂಡಿದೆ.
ಚಿತ್ರದ ಮೇಲೆ, ರಾಜಸ್ಥಾನ, ಮಧ್ಯಪ್ರದೇಶ, ಗುಜರಾತ್ ಹಾಗೂ ಹರ್ಯಾಣ ಸರಕಾರಗಳು ಹೇರಿದ್ದ ನಿಷೇಧವನ್ನು ಜ.18ರಂದು ತೆರವುಗೊಳಿಸಿದ್ದ ಕೋರ್ಟ್, 25ರಂದು ಚಿತ್ರ ಬಿಡುಗಡೆಗೆ ಅನುವು ಮಾಡಿಕೊಟ್ಟಿತ್ತಲ್ಲದೆ, ಸೆನ್ಸಾರ್ ಮಂಡಳಿಯ ಪ್ರಮಾಣಪತ್ರ ಪಡೆದ ಚಿತ್ರವನ್ನು ತಡೆಯುವ ಹಕ್ಕು ರಾಜ್ಯಸರಕಾರಗಳಿಗಿಲ್ಲ ಎಂದು ತಾಕೀತು ಮಾಡಿತ್ತು.
ಇದೀಗ, ರಾಜಸ್ಥಾನ, ಮಧ್ಯ ಪ್ರದೇಶ ಸರಕಾರಗಳು ತಾವು ಸಲ್ಲಿಸಿರುವ ಮೇಲ್ಮನವಿಯಲ್ಲಿ, 1957ರ ಸಿನೆಮಾಟೋಗ್ರಾಫ್ ಕಾಯ್ದೆ ಪ್ರಕಾರ, ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ಚಿತ್ರಗಳಿಗೆ ನಿಷೇಧ ಹೇರುವ ಹಕ್ಕು ರಾಜ್ಯ ಸರಕಾರಗಳಿಗೆ ಇರುವ ವಿಚಾರವನ್ನು ನ್ಯಾಯಾಲಯದ ಗಮನಕ್ಕೆ ತಂದಿವೆ.
ಪ್ರತಿಭಟನೆ: ಏತನ್ಮಧ್ಯೆ, ಚಿತ್ರದ ಬಿಡುಗಡೆ ವಿರೋಧಿಸಿ ಮಧ್ಯಪ್ರದೇಶದ ಉಜ್ಜೆ„ನಿಯಲ್ಲಿ ದಾಂಧಲೆ ನಡೆಸಿದ ಕರ್ಣಿ ಸೇನಾದ ಕಾರ್ಯ ಕರ್ತರು, ಉಜ್ಜೆ„ನಿ-ನಾವಡಾ, ದೇವಾಸ್-ಮಸ್ಕಿ ಹಾಗೂ ಆಗರ್-ಕೋಟಾ ರಸ್ತೆಗಳಲ್ಲಿ ಟೈರ್‌ಗಳನ್ನು ಸುಟ್ಟು ರಸ್ತೆ ತಡೆ ನಡೆಸಿದ್ದಾರೆ.
ಚಿತ್ರ ವೀಕ್ಷಣೆಗೆ ಒಪ್ಪಿಗೆ: ಮತ್ತೂಂದೆಡೆ, ಪದ್ಮಾವತ್ ಚಿತ್ರವನ್ನು ಮುಂಚಿತವಾಗಿ ಸ್ಕ್ರೀನಿಂಗ್ ಮಾಡುವ ಬನ್ಸಾಲಿ ಪ್ರೊಡಕ್ಷನ್ಸ್‌ನ ಕೋರಿಕೆಗೆ ಶ್ರೀ ರಜಪೂತ್ ಕರ್ಣಿ ಸೇನಾ ಒಪ್ಪಿದೆ. ನಾವು ಚಿತ್ರ ವೀಕ್ಷಿಸಲು ಸಿದ್ಧರಿದ್ದೇವೆ ಎಂದು ಸೇನಾದ ನಾಯಕ ಲೋಕೇಂದ್ರ ಸಿಂಗ್ ತಿಳಿಸಿದ್ದಾರೆ. ಜ.20ರಂದು ಕರ್ಣಿ ಸೇನಾಗೆ ಪತ್ರ ಬರೆದಿದ್ದ ಸಿನಿಮಾ ನಿರ್ಮಾಣ ಸಂಸ್ಥೆ, “ನಿಮಗಾಗಿ ವಿಶೇಷ ಪ್ರದರ್ಶನ ಏರ್ಪಡಿಸುತ್ತೇವೆ. ಅದರಲ್ಲಿ ರಜಪೂತ ಸಮುದಾಯದ ಘನತೆ ,ವೈಭವ ಎತ್ತಿಹಿಡಿದಿರುವುದನ್ನು ನೀವೇ ನೋಡಬಹುದು’ ಎಂದು ಹೇಳಿತ್ತು.